ಸರ್ಕಾರಿ ಕೆರೆ, ರೈತರ ಜಮೀನು ಉಳಿಸಲು ರೈತರ ಹೋರಾಟ

KannadaprabhaNewsNetwork |  
Published : Sep 27, 2025, 12:00 AM IST
ಕೆ ಕೆ ಪಿ ಸುದ್ದಿ 02:ರೈತರ ಪ್ರತಿಭಟನೆ.  | Kannada Prabha

ಸಾರಾಂಶ

ಕನಕಪುರ: ತಾಲೂಕಿನ ರೈಸ್ ಮಿಲ್ ಬಳಿ ಇರುವ ದೊಡ್ಡಯ್ಯನಕೆರೆ ಮತ್ತು ಅಚ್ಚಲು ಬಳಿ ಇರುವ ಹೊಂಗಾಣಿದೊಡ್ಡಿ ಗ್ರಾಮದಲ್ಲಿ ರೈತರ ಜಮೀನನ್ನು ರಿಯಲ್ ಎಸ್ಟೇಟ್ ದಂಧೆಕೋರರು ಅಕ್ರಮವಾಗಿ ಕಬಳಿಸಿರುವುದನ್ನು ವಿರೋಧಿಸಿ ರೈತ ಸಂಘದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಯಿತು.

ಕನಕಪುರ: ತಾಲೂಕಿನ ರೈಸ್ ಮಿಲ್ ಬಳಿ ಇರುವ ದೊಡ್ಡಯ್ಯನಕೆರೆ ಮತ್ತು ಅಚ್ಚಲು ಬಳಿ ಇರುವ ಹೊಂಗಾಣಿದೊಡ್ಡಿ ಗ್ರಾಮದಲ್ಲಿ ರೈತರ ಜಮೀನನ್ನು ರಿಯಲ್ ಎಸ್ಟೇಟ್ ದಂಧೆಕೋರರು ಅಕ್ರಮವಾಗಿ ಕಬಳಿಸಿರುವುದನ್ನು ವಿರೋಧಿಸಿ ರೈತ ಸಂಘದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಯಿತು. ಎರಡು ಗ್ರಾಮಗಳ ನೂರಾರು ಕುಟುಂಬಗಳು ಮೂರು ತಲೆಮಾರುಗಳಿಂದಲೂ ಉಳುಮೆ ಮಾಡಿಕೊಂಡು ಉಳುವವನೆ ಭೂ ಒಡೆಯ ಕಾಯ್ದೆ ಅಡಿ ಗೇಣಿ ಅರ್ಜಿಗಳನ್ನು ಹಾಕಿ ಪಡೆದಿರುವ ಜಮೀನನ್ನು ರಾಜಕೀಯ ನಾಯಕರು ಅಕ್ರಮವಾಗಿ ಭೂ ಕಬಳಿಕೆ ಮಾಡುತ್ತಿರುವುದನ್ನು ವಿರೋಧಿಸಿ ಎರಡು ಗ್ರಾಮದ ರೈತರು ಮತ್ತು ರೈತ ಮಹಿಳೆಯರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ದೊಡ್ಡಯ್ಯನಕೆರೆ ಬಳಿಯಿಂದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ತಾಲೂಕು ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ, ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಅಚ್ಚಲು ಶಿವರಾಜು ಮಾತನಾಡಿ, ತಾಲೂಕಿನಲ್ಲಿ ಎಲ್ಲವೂ ಸಂವಿಧಾನದ ವಿರುದ್ಧವಾಗಿ ನಡೆಯುತ್ತಿದೆ ಎಂದು ಆರೋಪಿಸಿ ನ್ಯಾಯಾಲಯದ ಆದೇಶಗಳನ್ನು ಇಲ್ಲಿ ಧಿಕ್ಕರಿಸಿ ಅಧಿಕಾರಿಗಳು ಪ್ರಭಾವಿ ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುತ್ತಿದ್ದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

1939ನೇ ಇಸವಿಯಲ್ಲಿ ಮೈಸೂರು ಮಹಾರಾಜರು ಸಜ್ಜನ್ ರಾವ್ ಅವರಿಗೆ ದೊಡ್ಡಯ್ಯನ ಕೆರೆಯ 54.7 ಎಕರೆ ಜಮೀನನ್ನು ಬಳುವಳಿಯಾಗಿ ನೀಡಿದ್ದರು. ಬೂದಿಗುಪ್ಪೆ ಸುತ್ತಮುತ್ತಲಿನ ಗ್ರಾಮಸ್ಥರು ಗೇಣಿದಾರರಾಗಿ ಅಲ್ಲಿ ವ್ಯವಸಾಯ ಮಾಡುತ್ತಿದ್ದು ಇಂದಿರಾಗಾಂಧಿ ಜಾರಿಗೆ ತಂದ ಉಳುವವನೇ ಭೂ ಒಡೆಯ ಕಾಯ್ದೆ ಅಡಿ ಸಜ್ಜನ್ ರಾವ್ ಅವರೇ ರೈತರಿಗೆ ಸಾಗುವಳಿ ಅರ್ಜಿ ಹಾಕಿಸಿ ರೈತರ ಹೆಸರಿಗೆ ಖಾತೆ ಹಾಗು ಮುಟೇಷನ್‌ ಮಾಡಿಕೊಟ್ಟಿದ್ದರು. ಇದೀಗ ಈ ಜಾಗವನ್ನು ಕಬಳಿಸಿ ಇಲ್ಲಿನ ಜನರನ್ನು ಒಕ್ಕಲಿಬ್ಬಿಸಲು ವ್ಯವಸ್ಥಿತ ಷಡ್ಯಂತರ ನಡೆಯುತ್ತಿದೆ‌ ಎಂದು ಅರೋಪಿಸಿದರು.

ಅದೇ ರೀತಿ ಹೊಂಗಣಿದೊಡ್ಡಿ ಗ್ರಾಮದಲ್ಲಿ 1974ರಲ್ಲಿ 30 ಕುಟುಂಬಗಳು 140 ಎಕರೆ ಜಮೀನಿನಲ್ಲಿ ಗೇಣಿದಾರರಾಗಿ ಸಾಗುವಳಿ ಮಾಡುತ್ತಿದ್ದು ಉಳುವವನೇ ಭೂ ಒಡೆಯ ಕಾಯ್ದೆ ಅಡಿ ಅರ್ಜಿ ಹಾಕಿಕೊಂಡು ಇಲ್ಲಿಯವರೆಗೂ ಸಾಗುವಳಿದಾರರಾಗಿ ಕೃಷಿ ಮಾಡಿಕೊಂಡು ಬರುತ್ತಿದ್ದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ 140 ಎಕರೆ ಪೈಕಿ 60 ಎಕರೆ ಜಮೀನನ್ನು ತನ್ನ ರಾಜಕೀಯ ಪ್ರಭಾವ ಬಳಸಿ ತಮ್ಮ ಹೆಸರಿಗೆ ಅಕ್ರಮವಾಗಿ ಕ್ರಯ ಮಾಡಿಕೊಂಡು ಭೂಕಬಳಿಕೆ ಮಾಡುತ್ತಿದ್ದಾರೆ ಎಂದು ದೂರಿದರು.

ಹೊಂಗಣಿದೊಡ್ಡಿ ಗ್ರಾಮದಲ್ಲಿ ಕೊಲೆಯಾದ ನಂಜೇಶ್ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದ್ದರು. ರೈತರ ಭೂಮಿಯನ್ನು ಶಾಸಕ ಇಕ್ಬಾಲ್ ಹುಸೇನ್ ಅಕ್ರಮವಾಗಿ ಕ್ರಯ ಮಾಡಿಕೊಳ್ಳಲು ನಂಜೇಶ್ ಕಮಿಷನ್ ಆಸೆಗಾಗಿ ಸಹಕಾರ ಕೊಟ್ಟಿದ್ದರು. ಗ್ರಾಮದಲ್ಲಿ ನಿವೇಶನದ ವಿಚಾರವಾಗಿ ಕ್ಷುಲ್ಲಕ ಕಾರಣಕ್ಕೆ ನಂಜೇಶ್ ಕೊಲೆಯಾದ ಸಂದರ್ಭ ಬಳಸಿಕೊಂಡ ಶಾಸಕರು ಭೂಮಿಗಾಗಿ ಹೋರಾಟ ಮಾಡುತ್ತಿದ್ದ ಅಮಾಯಕ ರೈತರನ್ನು ಬಂಧಿಸಿ ಕೊಲೆ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಸುತ್ತಿದ್ದಾರೆ. ರೈತರ ಮನೆಗಳನ್ನು ದ್ವಂಸ ಮಾಡಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ, ರೈತರು ಗ್ರಾಮ ತೊರೆಯುತ್ತಿದ್ದು, ಪರಿಸ್ಥಿತಿಯ ಲಾಭ ಪಡೆದುಕೊಂಡಿರುವ ಶಾಸಕರು ತಮ್ಮ ರಾಜಕೀಯ ಪ್ರಭಾವ ಬಳಸಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದರು.

ರೈತ ಮುಖಂಡ ಹರೀಶ್ ಮಾತನಾಡಿ, ರೈತ ಸಂಘದಿಂದ ಇಂದು ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ದೂರು ಸಲ್ಲಿಸುತ್ತಿದ್ದೇವೆ. ಅಕ್ಟೋಬರ್ 2 ಗಾಂಧಿ ಜಯಂತಿಯಂದು ಹೊಂಗಾಣಿ ದೊಡ್ಡಿ ಗ್ರಾಮದಲ್ಲೇ ರೈತ ಸಂಘದಿಂದ ಗಾಂಧೀಜಿ ತತ್ವದಡಿ ಶಾಂತಿ ಮತ್ತು ಅಹಿಂಸೆಯಿಂದಲೇ ಹೋರಾಟ ಪ್ರಾರಂಭಿಸುತ್ತೇವೆ. ರೈತರಿಗೆ ನ್ಯಾಯ ಸಿಗುವವರೆಗೂ ಮುಂದುವರಿಸುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಪಿಕುಮಾರ್, ರೈತ ಮುಖಂಡ ಬೂದಿಗುಪ್ಪೆ ಸಂಪತ್ ಕುಮಾರ್, ಬೂದಿಗುಪ್ಪೆ ಮತ್ತು ಹೊಂಗಾಣಿದೊಡ್ಡಿಯ ರೈತ ಮಹಿಳೆಯರು, ಮುಖಂಡರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

(ಫೋಟೊ ಕ್ಯಾಫ್ಷನ್‌)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ