ಬರದಲ್ಲಿ ಬಹುವಾರ್ಷಿಕ ಬೆಳೆ ಉಳಿಸಿಕೊಳ್ಳಲು ರೈತರ ಹೆಣಗಾಟ

KannadaprabhaNewsNetwork |  
Published : Oct 13, 2026, 02:30 AM IST
ಹೂವಿನಹಡಗಲಿ ತಾಲೂಕಿನಲ್ಲಿ ಸಮರ್ಪಕ ಮಳೆ ಇಲ್ಲದೇ ಹಾನಿಯಾಗಿರುವ ಪಪ್ಪಾಯಿ ಬೆಳೆ.  | Kannada Prabha

ಸಾರಾಂಶ

ಮಳೆ ಇಲ್ಲದ ಕಾರಣ ತೋಟಗಾರಿಕೆ ಬೆಳೆಗಳ ಇಳುವರಿ ಶೇ. 30ರಿಂದ 45ರಷ್ಟು ಕುಂಠಿತವಾಗಿದೆ. ಜತೆಗೆ ಗುಣಮಟ್ಟದ ಹಣ್ಣು ಇಲ್ಲದೇ, ಮಾರುಕಟ್ಟೆಯಲ್ಲಿ ಬೆಲೆ ಕೂಡಾ ಕಡಿಮೆಯಾಗಿದೆ

ಹೂವಿನಹಡಗಲಿ ಚಂದ್ರು ಕೊಂಚಿಗೇರಿ

ವರ್ಷದಿಂದ ವರ್ಷಕ್ಕೆ ಮಳೆಗಾಲಗಳ ಜತೆಗೆ ರೈತ ಜೂಜಾಟದಂತಹ ಪರಿಸ್ಥಿತಿ ಬಂದಿದೆ. ಇದರಿಂದ ಪಾರಾಗಲು ಹನಿ ನೀರಾವರಿ ಬಳಕೆ ಮಾಡಿಕೊಂಡು ಬಹು ವಾರ್ಷಿಕ ತೋಟಗಾರಿಕೆ ಬೆಳೆಯತ್ತ ರೈತ ಮುಖ ಮಾಡಿದ್ದಾನೆ.

ತಾಲೂಕಿನ ಬಹುತೇಕ ಭಾಗದಲ್ಲಿ ತುಂಗಭದ್ರಾ ನದಿ ಹರಿಯುತ್ತಿದೆ, ಸಿಂಗಟಾಲೂರು ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶ ಹೊರತುಪಡಿಸಿ, ಉಳಿದ ಪ್ರದೇಶವು ಮಳೆಯಾಶ್ರಿತವಾಗಿದೆ. ಕೆಲವು ಭಾಗಗಳಲ್ಲಿ ಕೊಳವೆಬಾವಿಯ ನೀರನ್ನು ಹನಿ ನೀರಾವರಿ ಮಾಡಿಕೊಂಡು, ದಾಳಿಂಬೆ, ಬಾಳೆ, ಪಪ್ಪಾಯಿ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಆದರೆ ಮಳೆ ಇಲ್ಲದ ಕಾರಣ ಕೊಳವೆಬಾವಿಗಳು ಬತ್ತಿ ಹೋಗುವ ಆತಂಕದಲ್ಲಿದ್ದಾರೆ.

ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಿದ್ದಾರೆ, 450 ಎಕರೆ ದಾಳಿಂಬೆ, 350 ಪಪ್ಪಾಯಿ, 500 ಎಕರೆ ಬಾಳೆ ಬೆಳೆಯುತ್ತಿದ್ದಾರೆ. ಆದರೆ ಬೆಳೆಗಾರರಿಗೆ ಉತ್ತೇಜನ ನೀಡಬೇಕಾದ ಸರ್ಕಾರ ನಿರ್ಲಕ್ಷ್ಯ ತೋರಿದೆ. ಹನಿ ನೀರಾವರಿ ಅಳವಡಿಸಿಕೊಳ್ಳಲು ಶೇ. 90ರಷ್ಟು ರಿಯಾಯ್ತಿ ನೀಡುತ್ತಾರೆ. ಇಡೀ ತಾಲೂಕಿಗೆ ದಾಳಿಂಬೆ 5 ಎಕರೆ, ಬಾಳೆ 5 ಎಕರೆ, ಪಪ್ಪಾಯಿ ಬೆಳೆಗೆ 2.50 ಎಕರೆ ಮಾತ್ರ ಗುರಿ ನಿಗದಿ ಮಾಡಿ ಅಲ್ಪ ಅನುದಾನ ನೀಡುತ್ತಿದ್ದಾರೆ. ಇನ್ನು ಈರುಳ್ಳಿ 3500 ಎಕರೆ ಪ್ರದೇಶ ಬಿತ್ತನೆಯಾಗಿತ್ತು. ನೀರಾವರಿ ಪ್ರದೇಶ ಹೊರತು ಪಡಿಸಿ, ಮಳೆಯಾಶ್ರಿತ ಈರುಳ್ಳಿ ಬಿತ್ತನೆ ಮಾಡಿದ ರೈತರು ಸಂಪೂರ್ಣ ಹಾನಿ ಅನುಭವಿಸಿದ್ದಾರೆ.

ಮಳೆ ಇಲ್ಲದ ಕಾರಣ ತೋಟಗಾರಿಕೆ ಬೆಳೆಗಳ ಇಳುವರಿ ಶೇ. 30ರಿಂದ 45ರಷ್ಟು ಕುಂಠಿತವಾಗಿದೆ. ಜತೆಗೆ ಗುಣಮಟ್ಟದ ಹಣ್ಣು ಇಲ್ಲದೇ, ಮಾರುಕಟ್ಟೆಯಲ್ಲಿ ಬೆಲೆ ಕೂಡಾ ಕಡಿಮೆಯಾಗಿದೆ ಎನ್ನುತ್ತಾರೆ ಬೆಳೆಗಾರರು.

ಸದ್ಯ ಮಾರುಕಟ್ಟೆಯಲ್ಲಿ ದಾಳಿಂಬೆ ಕೆಜಿಗೆ ₹150ರಿಂದ ₹200, ಪಪ್ಪಾಯಿ ಕೆಜಿಗೆ ₹8ರಿಂದ ₹10, ಬಾಳೆ ಕೆಜಿಗೆ ₹7 ರಿಂದ ₹8, ಏಲಕ್ಕಿ ಬಾಳೆ ಕೆಜಿಗೆ ₹12ರಿಂದ ₹15 ದರ ಇದೆ. ಇದರಿಂದ ರೈತರು ನಷ್ಟ ಅನುಭವಿಸಬೇಕಾದ ಸ್ಥಿತಿ ಬಂದಿದೆ.

ಬರ ಆವರಿಸಿರುವ ಹಿನ್ನೆಲೆಯಲ್ಲಿ ರೈತರಿಗೆ ಬರ ನಿರೋಧಕ ತಳಿಗಳನ್ನು ಬೆಳೆಯಲು ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ತೇವಾಂಶ ಕಾಪಾಡಿಕೊಳ್ಳುವ ಮಾರ್ಗ, ಅತಿ ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ಹೂವಿನಹಡಗಲಿ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಸ್‌. ನಾಗರಾಜ ಹೇಳಿದರು.

ದಿನದಿಂದ ದಿನಕ್ಕೆ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಹೆಚ್ಚು ಬಂಡವಾಳ ಹಾಕಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾದ ಸ್ಥಿತಿ ಬಂದಿದೆ ಎಂದು ತೋಟಗಾರಿಕೆ ಬೆಳೆಗಾರ ಹನುಮಂತಪ್ಪ ಹೊನ್ನನಾಯಕನಹಳ್ಳಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜಗೋಳಿ ಪಿಯು ಕಾಲೇಜಲ್ಲಿ ಆಳ್ವಾಸ್ ಎನ್‌ಎಸ್‌ಎಸ್‌ ಶಿಬಿರ ಆರಂಭ
ಸ್ಟಾರ್ಟಪ್ ಯೋಜನೆಗಳತ್ತ ಗಮನ ಹರಿಸಿ: ಡಾ. ರಂಗಸ್ವಾಮಿ