ಹಳಿಯಾಳ: ಕೈಗಾರಿಕಾ ವಲಯದ ಬೇಡಿಕೆಗೆ ಅನುಗುಣವಾಗಿ ಆಧುನಿಕ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಕರಗತ ಮಾಡಿಕೊಳ್ಳಬೇಕು ಎಂದು ಐಐಟಿ ಧಾರವಾಡದ ಮೆಕ್ಯಾನಿಕಲ್ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಸೋಮಶೇಖರ್ ಎಂ.ಎ. ಕರೆ ನೀಡಿದರು.
ಪ್ರತಿಯೊಂದು ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನಿರಂತರ ಕಲಿಕೆಯನ್ನು ಮೈಗೂಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಹುಬ್ಬಳ್ಳಿ ಕ್ಲಸ್ಟರ್ ಮುಖ್ಯಸ್ಥ ಡಾ. ವೆಂಕಟೇಶ್ ದೇಶಪಾಂಡೆ ಮಾತನಾಡಿ, ಶಿಸ್ತುಬದ್ಧ ಜೀವನ ರೂಪಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಸಾಗಬೇಕು. ದೇಶವನ್ನು ತಂತ್ರಜ್ಞಾನದಲ್ಲಿ ಸ್ವಾವಲಂಬಿಯನ್ನಾಗಿಸಲು ನವ ಅಭಿಯಂತರರು ಶ್ರಮಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕೆಎಲ್ಎಸ್ ಆಡಳಿತ ಮಂಡಳಿ ಅಧ್ಯಕ್ಷ ಪ್ರಶಾಂತ್ ಕುಲಕರ್ಣಿ ಮಾತನಾಡಿ, ದೇಶಕ್ಕೆ ಕೀರ್ತಿ ತರುವ ಸಾಧನೆ ಮಾಡಿ, ತಂದೆ- ತಾಯಿ ಹಾಗೂ ಮಹಾವಿದ್ಯಾಲಯಕ್ಕೆ ಉತ್ತಮ ಹೆಸರು ತರಬೇಕು ಎಂದು ಶುಭ ಹಾರೈಸಿದರು.ಸಮಾರಂಭದಲ್ಲಿ 350ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಪದವಿ ಪ್ರಮಾಣಪತ್ರ ಹಾಗೂ ಬೆಳ್ಳಿಯ ಉಂಗುರ ಸ್ವೀಕರಿಸಿದರು. ಎಲ್ಲ ವಿಭಾಗಗಳ ಡೀನ್‌ಗಳು ಹಾಗೂ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.
ಜಿಮ್ ಉದ್ಘಾಟನೆ: ಇದೇ ಸಮಯದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ದೈಹಿಕ ಆರೋಗ್ಯಕ್ಕಾಗಿ 5 ಲಕ್ಷ ರು. ವೆಚ್ಚದಲ್ಲಿ ನವೀಕರಿಸಲಾದ ಜಿಮ್ಅನ್ನು ಗಣ್ಯರು ಉದ್ಘಾಟಿಸಿದರು. ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಸ್ವಾಗತಿಸಿದರು. ಡೀನ್ ಆರ್ ಆ್ಯಂಡ್ ಡಿ ಡಾ. ಮಹೇಂದ್ರ ದೀಕ್ಷಿತ್ ವಂದಿಸಿದರು. ಪ್ರೊ. ಲಕ್ಷ್ಮಿ ಹಟ್ಟಿಹೊಳಿ ಮತ್ತು ಪ್ರೊ. ಶ್ರೀಗೌರಿ ಎಸ್. ಕಾರ್ಯಕ್ರಮ ನಿರೂಪಿಸಿದರು.