ಸಕ್ಕರೆ ಕಾರ್ಖಾನೆಗಾಗಿ 18ರಂದು ಶಾಸಕರ ನಿವಾಸದ ಎದುರು ಧರಣಿ

KannadaprabhaNewsNetwork |  
Published : Oct 13, 2026, 02:30 AM IST
ಹೊಸಪೇಟೆಯ ರೈತ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಧರಣಿಯ ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಹೋರಾಟದ ಮೊದಲ ಹಂತವಾಗಿ ಅ. 18ರಂದು ಶಾಸಕ ಗವಿಯಪ್ಪ ನಿವಾಸದ ಎದುರು ಧರಣಿ ನಡೆಸಲಾಗುತ್ತದೆ.

ಹೊಸಪೇಟೆ: ಈ ಭಾಗದ ರೈತರ ಬಹುದಿನದ ಬೇಡಿಕೆ ಆಗಿರುವ ಸಕ್ಕರೆ ಕಾರ್ಖಾನೆಯನ್ನು ಶೀಘ್ರದಲ್ಲೇ ಆರಂಭಿಸಬೇಕು ಎಂದು ಒತ್ತಾಯಿಸಿ, ಅ. 18ರಂದು ಸ್ಥಳೀಯ ಶಾಸಕ ಎಚ್.ಆರ್. ಗವಿಯಪ್ಪ ಅವರ ನಿವಾಸದ ಎದುರು ಧರಣಿ ಸತ್ಯಾಗ್ರಹ ನಡೆಸಲು ವಿವಿಧ ಸಂಘ - ಸಂಸ್ಥೆಗಳ ನೇತೃತ್ವದಲ್ಲಿ ರಚಿಸಲಾಗಿರುವ ಹೊಸಪೇಟೆ ಸಕ್ಕರೆ ಕಾರ್ಖಾನೆ ಹೋರಾಟ ಸಮಿತಿ ತೀರ್ಮಾನಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೊಸಪೇಟೆ ಸಕ್ಕರೆ ಕಾರ್ಖಾನೆ ಹೋರಾಟ ಸಮಿತಿ ಮುಖಂಡ ಮರಡಿ ಜಂಬಯ್ಯ ನಾಯಕ ಈ ವಿಷಯ ತಿಳಿಸಿದರು. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಬಹಿರಂಗ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವ ಭರವಸೆ ನೀಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿ ಸಿದ್ದರಾಮಯ್ಯ ಹಾಗೂ ಶಾಸಕ ಎಚ್.ಆರ್.ಗವಿಯಪ್ಪ ಭರವಸೆ ನೀಡಿದ್ದರು. ಗವಿಯಪ್ಪ ಅವರು ಚುನಾವಣೆಯಲ್ಲಿ ಗೆದ್ದು ಮೂರೂವರೆ ವರ್ಷಗಳಾದರೂ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವ ಕುರಿತು ಚಕಾರ ಎತ್ತುತ್ತಿಲ್ಲ. ನಾವು ಅನೇಕ ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಹೋರಾಟದ ಮೊದಲ ಹಂತವಾಗಿ ಅ. 18ರಂದು ಶಾಸಕ ಗವಿಯಪ್ಪ ನಿವಾಸದ ಎದುರು ಧರಣಿ ನಡೆಸಲಾಗುತ್ತದೆ. ಅಂದು ಸ್ಥಳೀಯ ಶಾಸಕರು ನೀಡುವ ಭರವಸೆ ನೋಡಿಕೊಂಡು ಮುಂದಿನ ಹೋರಾಟದ ಕುರಿತು ತೀರ್ಮಾನಿಸಲಾಗುವುದು ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಹೊಸಪೇಟೆ ಬಂದ್‌ ಮಾಡಲಾಗುವುದು. ಹಂಪಿ ಉತ್ಸವಕ್ಕೆ ಬರುವ ಮುಖ್ಯಮಂತ್ರಿ, ಸಚಿವರಿಗೆ ಘೇರಾವ್‌ ಹಾಕಿ ಪ್ರತಿಭಟಿಸಲಾಗುವುದು. ಸಕ್ಕರೆ ಕಾರ್ಖಾನೆಯ ಭೂಮಿಪೂಜೆ ಆಗುವವರೆಗೂ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಅವರು ಹೇಳಿದರು.

ರೈತ ಮುಖಂಡ ಜಿ. ಖಾಜಾ ಹುಸೇನ್ ನಿಯಾಜಿ ಮಾತನಾಡಿ, ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಪಕ್ಷಾತೀತ ಹೋರಾಟ ನಡೆಸಲಾಗುತ್ತಿದೆ. ಯಾವುದೇ ಪಕ್ಷದ ಮುಖಂಡರು ಇದ್ದರೂ ತಮ್ಮ ರಾಜಕೀಯ ಬದಿಗಿಟ್ಟು ಹೋರಾಟದಲ್ಲಿ ಭಾಗವಹಿಸಬೇಕು. ಯಾವುದೇ ಒತ್ತಡಕ್ಕೆ ನಾವು ಮಣಿಯುವುದಿಲ್ಲ. ಸಕ್ಕರೆ ಕಾರ್ಖಾನೆಗೆ ಭೂಮಿಪೂಜೆ ಆಗುವ ವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಹುಡಾ ಮಾಜಿ ಅಧ್ಯಕ್ಷ ಎಲ್. ಸಿದ್ದನಗೌಡ, ಹುಡಾ ಅಧ್ಯಕ್ಷ ಎಚ್.ಎನ್. ಮಹಮದ್ ಇಮಾಮ್ ನಿಯಾಜಿ, ಜಂಬಾನಳ್ಳಿ ವಸಂತ ಮಾತನಾಡಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಆರ್. ಕೊಟ್ರೇಶ್, ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ಅಮಾಜಿ ಹೇಮಣ್ಣ, ರೈತ ಮುಖಂಡರಾದ ಸೈಯದ್ ಸಮೀವುಲ್ಲಾ, ಟಿ. ನಾಗರಾಜ, ಸಣ್ಣಕ್ಕಿ ರುದ್ರಪ್ಪ, ಎಂ. ಜಡೆಪ್ಪ, ಪಿ. ಬಾಬು, ದುರುಗಪ್ಪ ಪೂಜಾರಿ, ಕಿಚಿಡಿ ಶ್ರೀನಿವಾಸ, ಕಟಿಗಿ ಜಂಬಯ್ಯ, ವೈ. ಯಮುನೇಶ್, ಎನ್. ಯಲ್ಲಾಲಿಂಗ, ಎಲ್.ಎಸ್. ಆನಂದ್, ಕೆ.ಎಂ. ಸಂತೋಷ ಕುಮಾರ್, ಬಿ. ತಾಯಪ್ಪ ನಾಯಕ, ಜೈರುದ್ದೀನ್, ತಾರಿಹಳ್ಳಿ ಜಂಬಯ್ಯ, ರಾಮಚಂದ್ರ ಬಾಬು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜಗೋಳಿ ಪಿಯು ಕಾಲೇಜಲ್ಲಿ ಆಳ್ವಾಸ್ ಎನ್‌ಎಸ್‌ಎಸ್‌ ಶಿಬಿರ ಆರಂಭ
ಸ್ಟಾರ್ಟಪ್ ಯೋಜನೆಗಳತ್ತ ಗಮನ ಹರಿಸಿ: ಡಾ. ರಂಗಸ್ವಾಮಿ