ಕನ್ನಡಪ್ರಭ ವಾರ್ತೆ ಮೈಸೂರು
ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ನೂರಾರು ಕೆರೆಗಳಿದ್ದು ಕೆಲವು ಸ್ಥಳೀಯ ಬಲಾಢ್ಯರ ಒತ್ತುವರಿಯಿಂದ ಕೆರೆಗಳಿಗೆ ನೀರಿನ ಮೂಲ ನಿಂತು ಹೋಗಿದೆ. ಇದರಿಂದ ಅಂತರ್ಜಲ ಕುಸಿತವಾಗುತ್ತಿದೆ. ಸುಮಾರು 80 ವರ್ಷಗಳಿಂದ ಕೆರೆಗಳಲ್ಲಿ ಹೂಳು ತುಂಬಿ ಅಂತರ್ಜಲ ಕುಸಿತವಾಗಿದ್ದು, ಹೂಳು ತುಂಬಿದ ಕೆರೆಗಳ ಮಣ್ಣನ್ನು ಬೇಸಿಗೆಯಲ್ಲಿ ರೈತರ ಜಮೀನಿಗೆ ಉಚಿತವಾಗಿ ಸರಬರಾಜು ಮಾಡಿದಲ್ಲಿ ಕೃಷಿ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಇದರಿಂದ ಸರ್ಕಾರ ನೀಡುವ ಡಿಎಪಿ, ಯೂರಿಯಾ ಗೊಬ್ಬರವನ್ನು ರೈತರಿಗೆ ಉಚಿತವಾಗಿ ನೀಡಿದಂತಾಗುತ್ತದೆ ಎಂದರು.
ಏತ ನೀರಾವರಿ ಬದಲು ರಾಜಕಾಲುವೆ ಒತ್ತುವರಿ ತೆರವುಗೊಳಿಸಿದಲ್ಲಿ ನೈಸರ್ಗಿಕ ಮಳೆ ನೀರನ್ನು ಕ್ರೋಢೀಕರಿಸಿ ಪ್ರತಿ ಜಿಲ್ಲೆಗೆ 40 ಟಿಎಂಸಿ ಮಳೆಯ ನೀರನ್ನು ಸಂಗ್ರಹಿಸಿದಂತಾಗುತ್ತದೆ. ರಾಜ್ಯದಲ್ಲಿ 1250 ಟಿಎಂಸಿ ನೀರನ್ನು ಮಳೆಯಿಂದಾಗಿ ಸಂಗ್ರಹಿಸಬಹುದು. ರಾಜ್ಯದ 40 ಲಕ್ಷ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಅರಣ್ಯದ ಒಳಗೆ ಹಾಗೂ ಅಂಚಿನಲ್ಲಿ ಇರುವ ಕೆರೆಗಳ ಪುನರುಜ್ಜೀವನದಿಂದ ಕೆರೆಗಳಲ್ಲಿ ನೀರು ಸಂಗ್ರಹವಾಗಿ ಬೇಸಿಗೆಯಲ್ಲಿ ಪ್ರಾಣಿಗಳು ನಾಡಿಗೆ ಬರುವುದು ತಪ್ಪುತ್ತದೆ ಎಂದು ಹೇಳಿದರು.ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ ಇರುವ ಕೆರೆಗಳಿಗೆ ಗ್ರಾಮಗಳ ಚರಂಡಿಯ ಗಲೀಜು ನೀರು ಹೋಗಿ ಜಾನುವಾರಗಳಿಗೆ ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಇದನ್ನು ಸರಿಪಡಿಸಬೇಕು. ಕೆರೆಗಳ ಅಭಿವೃದ್ಧಿಗೆ ಸರ್ಕಾರ ವಿಶೇಷವಾಗಿ ಹೆಚ್ಚು ಅನುದಾನ ನೀಡಲು ಯೋಜನೆ ರೂಪಿಸುವಂತೆ ಅವರು ಒತ್ತಾಯಿಸಿದರು.
ತೋಟಗಾರಿಕೆ ಇಲಾಖೆಯಿಂದ ಬಾಳೆ ಬೆಳೆಗಾರರಿಗೆ ಬರುತ್ತಿದ್ದ ಅನುದಾನ ಕಳೆದ ಒಂದು ವರ್ಷದಿಂದ ಬರುತ್ತಿಲ್ಲ, ಕೂಡಲೇ ಕ್ರಮ ಕೈಗೊಳ್ಳಬೇಕು. ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದಿಂದ ಮೂರನೇ ದರ್ಜೆಯ ಬಾಳೆಕಾಯಿ ಮೈಸೂರು ಮಾರುಕಟ್ಟೆಗೆ ಬರುತ್ತಿತ್ತು. ಇದರಿಂದ ಸ್ಥಳೀಯ ರೈತರಿಗೆ ನಷ್ಟವಾಗುತ್ತಿದ್ದು, ಬೆಲೆ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ, ಬಾಳೆ ಬೆಳೆಗಾರರು, ವ್ಯಾಪಾರಸ್ಥರು, ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ನವೆಂಬರ್ ತಿಂಗಳ ಮೊದಲ ವಾರದಲ್ಲೇ ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು.