ಜಮೀನು ಸರ್ವೆಗೆ ಬಂದ ಅಧಿಕಾರಿಗಳಿಗೆ ರೈತರ ತರಾಟೆ

KannadaprabhaNewsNetwork | Published : Feb 13, 2025 12:45 AM

ಸಾರಾಂಶ

ಹೊಸಕೋಟೆ: ಟೌನ್‌ಶಿಪ್ ಯೋಜನೆಯನ್ನು ಕೈಬಿಡುವಂತೆ ರೈತರು ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವ ನಡುವೆ ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಪಂ ವ್ಯಾಪ್ತಿಯ ಗೆದ್ದಲಹಳ್ಳಿಪುರ ಗ್ರಾಮದಲ್ಲಿ ಜಮೀನು ಸರ್ವೆಗೆ ಬಂದ ಅಧಿಕಾರಿಗಳ ಲ್ಯಾಪ್ ಟ್ಯಾಪ್ ಕಿತ್ತುಕೊಂಡು ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸಿ, ಸ್ಥಳದಲ್ಲೆ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ರೈತರು ಪ್ರತಿಭಟನೆ ನಡೆಸಿದರು.

ಹೊಸಕೋಟೆ: ಟೌನ್‌ಶಿಪ್ ಯೋಜನೆಯನ್ನು ಕೈಬಿಡುವಂತೆ ರೈತರು ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವ ನಡುವೆ ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಪಂ ವ್ಯಾಪ್ತಿಯ ಗೆದ್ದಲಹಳ್ಳಿಪುರ ಗ್ರಾಮದಲ್ಲಿ ಜಮೀನು ಸರ್ವೆಗೆ ಬಂದ ಅಧಿಕಾರಿಗಳ ಲ್ಯಾಪ್ ಟ್ಯಾಪ್ ಕಿತ್ತುಕೊಂಡು ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸಿ, ಸ್ಥಳದಲ್ಲೆ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ರೈತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚೇಗೌಡ ಮಾತನಾಡಿ, ಪಕ್ಷಾತೀತವಾಗಿ ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಅವಿರತ ಹೋರಾಟಕ್ಕೆ ಸನ್ನದ್ಧರಾಗಿದ್ದು, ರೈತರ ಒಪ್ಪಿಗೆಯಿಲ್ಲದೆ ಅಧಿಕಾರಿಗಳು ಸರ್ವೇ ಕಾರ್ಯ ನಡೆಸುತ್ತಿದ್ದು, ರೈತರು ಯಾವುದಕ್ಕೂ ಅವಕಾಶ ನೀಡುವುದಿಲ್ಲ. ಕೃಷಿಯನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಮುಂದಾಗಿದೆ. ರೈತರಿಂದ ಅಧಿಕಾರಕ್ಕೇರಿದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಹಾಗೂ ಸ್ಥಳೀಯ ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಜನಪ್ರತಿನಿಧಿಗಳ ಮೇಲಿಟ್ಟ ವಿಶ್ವಾಸ ಹುಸಿಯಾಗಿದೆ. ಸರಕಾರ ಭೂ ಸ್ವಾಧೀನ ಪ್ರಕ್ರಿಯೆ ನಿಲ್ಲಿಸುವವರೆಗೂ ಹೋರಾಟ ನಿಲ್ಲುವುದಿಲ್ಲ.

2006 ಕುಮಾರಸ್ವಾಮಿ ಸರಕಾರದಲ್ಲಿ ಎಸ್‌ಇಝಡ್ ಯೋಜನೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮಲ್ಲಿಕಾರ್ಜುನ ಖರ್ಗೆ, ಭೂ ಸ್ವಾಧೀನ ವಿರೋಧಿ ಹೋರಾಟದಲ್ಲಿ ಭಾಗವಹಿಸಿ ನಂದಗುಡಿ ಭಾಗದ ರೈತರಿಗೆ ಬೆಂಬಲ ಸೂಚಿಸಿದ್ದರು. ಈಗ ಮತ್ತೆ ರಾಜ್ಯ ಸರಕಾರ ಟೌನ್‌ಶಿಪ್ ಹೆಸರಿನಲ್ಲಿ ಭೂ ಸ್ವಾಧೀನಕ್ಕೆ ಮುಂದಾಗಿರುವುದು ತರವಲ್ಲ ಎಂದರು.

ರೈತ ಮುಖಂಡ ಎಂ.ಬಿ.ವೆಂಕಟೇಶ್ ಮಾತನಾಡಿ, ತಾಲೂಕಿನ ನಂದಗುಡಿ ಮತ್ತು ಸೂಲಿಬೆಲೆ ಹೋಬಳಿ ವ್ಯಾಪ್ತಿಯ 36 ಗ್ರಾಮಗಳ 18500 ಸಾವಿರ ಎಕರೆ ಪ್ರದೇಶವು ವಿವಾದಿತ ಪ್ರದೇಶವಾಗಿದೆ. ಸರಕಾರ ಯಾವುದೇ ರೀತಿಯ ಸರ್ವೇ ಕಾರ್ಯ ನಡೆಸಲು ಅವಕಾಶ ನೀಡುವುದಿಲ್ಲವೆಂದು ನಮ್ಮ ಪ್ರಾಣ ಕೊಟ್ಟಾದರೂ ತಮ್ಮ ಭೂಮಿಯನ್ನು ಉಳಿಸಿಕೊಳ್ಳುತ್ತೇವೆಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾನಿರತ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ಕೊಟ್ಟು, ಯಾವುದೇ ರೀತಿಯ ಸರ್ವೇ ಕಾರ್ಯ ನಡೆಸಲು ಮುಂದಾಗುವುದಿಲ್ಲವೆAದು ಲಿಖಿತ ಹೇಳಿಕೆ ನೀಡುವಂತೆ ರೈತರು ಪಟ್ಟು ಹಿಡಿದರು. ಅಂತಿಮವಾಗಿ ರೈತರನ್ನು ಅಧಿಕಾರಿಗಳು ಸಂತೈಸಿ ಮನವಿ ಪತ್ರ ಸ್ವೀಕರಿಸಿದ ನಂತರ ಪ್ರತಿಭಟನೆಯನ್ನು ಮೊಟಕುಗೊಳಿಸಿದರು.

ಪ್ರತಿಭಟನೆಯಲ್ಲಿ ನಂದಗುಡಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸದಸ್ಯರು, ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನೂರಾರು ರೈತರು ಭಾಗವಹಿಸಿದ್ದರು.

ಫೋಟೋ: 12 ಹೆಚ್‌ಎಸ್‌ಕೆ 2 ಮತ್ತು 3

2 ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಪಂ. ವ್ಯಾಪ್ತಿಯ ಗೆದ್ದಲಹಳ್ಳಿಪುರ ಗ್ರಾಮದ ಸಮೀಪದಲ್ಲಿ ಲ್ಯಾಪ್ ಟ್ಯಾಪ್ ಕಿತ್ತುಕೊಂಡು ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸಿ, ಸ್ಥಳದಲ್ಲೆ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ರೈತರು ಪ್ರತಿಭಟನೆ ನಡೆಸಿದರು.

Share this article