ತೆಂಗು, ಅಡಿಕೆ ಬೆಳೆಗಾರರಿಗೆ ಪರಿಹಾರಕ್ಕೆ ರೈತ ಸಂಘ ಒತ್ತಾಯ

KannadaprabhaNewsNetwork | Published : May 15, 2024 1:30 AM

ಸಾರಾಂಶ

ಬೆಳೆ ಪರಿಹಾರ ಹಣ ನೀಡುವಾಗ ಮಳೆಯಾಶ್ರಿತ ಪ್ರದೇಶದ ರೈತರಿಗೆ ಮಾತ್ರ ನೀಡಲಾಗಿದ್ದು, ನೀರಾವರಿ ಆಶ್ರಿತ ಪ್ರದೇಶದ ರೈತರನ್ನು ಪರಿಹಾರ ಹಣದಿಂದ ವಂಚಿಸಲಾಗಿದೆ. ಪರಿಹಾರದ ಹಣ ಇನ್ನೂ ರೈತರ ಖಾತೆಗೆ ತಲುಪಿಲ್ಲ. ರೈತರಲ್ಲಿ ಬೇಧ ಎಣಿಸದೆ ಏಳೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿರುವ ಸರ್ಕಾರ ಎಲ್ಲ ರೈತರನ್ನೂ ಸಮಾನವಾಗಿ ಪರಿಗಣಿಸಿ ಪರಿಹಾರ ಹಣ ವಿತರಿಸಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಬರಗಾಲದಿಂದಾಗಿ ತೆಂಗು-ಅಡಿಕೆ ಬೆಳೆಗಾರರು ಬೆಳೆ ನಷ್ಟಕ್ಕೆ ಒಳಗಾಗಿದ್ದು ಅವರಿಗೂ ಪರಿಹಾರ ನೀಡುವಂತೆ ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಒತ್ತಾಯಿಸಿದರು.

ಮಳೆ ಕೊರತೆ ಹಾಗೂ ಸುಡುಬಿಸಿಲಿನ ತಾಪಕ್ಕೆ ತೆಂಗು-ಅಡಿಕೆ ಬೆಳೆಗಳ ಇಳುವರಿ ಕುಸಿತಗೊಂಡಿದೆ. ಎಷ್ಟೋ ಮರಗಳ ಸುಳಿಗಳು ಒಣಗಿಹೋಗಿವೆ. ತೆಂಗಿನ ಬುಂಡೆಗಳೆಲ್ಲಾ ಉದುರಿಹೋಗಿವೆ. ಅಡಿಕೆ ಬೆಳೆಯ ಹೊಂಬಾಳೆ ಹಂತದಲ್ಲೇ ಒಣಗಿಹೋಗಿವೆ. ಇದರಿಂದ ಸಾಕಷ್ಟು ನಷ್ಟಕ್ಕೆ ಒಳಗಾಗಿರುವ ಬೆಳೆಗಾರರಿಗೆ ರಾಜ್ಯ ಸರ್ಕಾರ ತ್ವರಿತವಾಗಿ ಪರಿಹಾರ ಹಣ ಬಿಡುಗಡೆ ಮಾಡುವಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಬೆಳೆ ಪರಿಹಾರ ಹಣ ನೀಡುವಾಗ ಮಳೆಯಾಶ್ರಿತ ಪ್ರದೇಶದ ರೈತರಿಗೆ ಮಾತ್ರ ನೀಡಲಾಗಿದ್ದು, ನೀರಾವರಿ ಆಶ್ರಿತ ಪ್ರದೇಶದ ರೈತರನ್ನು ಪರಿಹಾರ ಹಣದಿಂದ ವಂಚಿಸಲಾಗಿದೆ. ಪರಿಹಾರದ ಹಣ ಇನ್ನೂ ರೈತರ ಖಾತೆಗೆ ತಲುಪಿಲ್ಲ. ರೈತರಲ್ಲಿ ಬೇಧ ಎಣಿಸದೆ ಏಳೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿರುವ ಸರ್ಕಾರ ಎಲ್ಲ ರೈತರನ್ನೂ ಸಮಾನವಾಗಿ ಪರಿಗಣಿಸಿ ಪರಿಹಾರ ಹಣ ವಿತರಿಸುವಂತೆ ತಿಳಿಸಿದರು.

ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿ ಕಳೆದ ಹದಿನೈದು ದಿನಗಳಿಂದ ಮಂದಗತಿಯಲ್ಲಿ ಸಾಗುತ್ತಿದೆ. ಹೆಚ್ಚು ಮಂದಿ ಕೂಲಿ ಆಳುಗಳನ್ನು ಕೆಲಸಕ್ಕೆ ಬಿಡದೆ ನಾಲಾ ಕಾಮಗಾರಿ ನಿಧಾನಗತಿ ಪಡೆದುಕೊಂಡಿದೆ. ಒಟ್ಟು ೪೮ ಕಿ.ಮೀ. ನಾಲಾ ಆಧುನೀಕರಣ ಕಾಮಗಾರಿಯಲ್ಲಿ ೧೮ ಕಿ.ಮೀ. ಮಾತ್ರ ಪೂರ್ಣಗೊಂಡಿದೆ. ಜೂನ್ ಕೊನೆಯ ವಾರ ಅಥವಾ ಜುಲೈ ಮೊದಲ ವಾರದಲ್ಲಿ ನಾಲೆಗಳಿಗೆ ನೀರು ಬಿಡುಗಡೆ ಮಾಡುವುದರಿಂದ ಆಧುನೀಕರಣ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಮುಗಿಸುವಂತೆ ಒತ್ತಾಯಿಸಿದರು.

ಕಾಮಗಾರಿ ನಡೆಸುವ ಸಮಯದಲ್ಲಿ ಕಾಂಕ್ರೀಟ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅದಕ್ಕೂ ಮುನ್ನ ಸೇತುವೆ, ಸೋಪಾನ, ರ್ಯಾಂಪ್‌ಗಳ ಕೆಲಸವನ್ನು ಮುಗಿಸಬೇಕಿತ್ತು. ಒಮ್ಮೆ ನಾಲೆಯಲ್ಲಿ ನೀರು ಬಿಟ್ಟರೆ ಕಾಮಗಾರಿ ಹಾಳಾಗುವ ಸಾಧ್ಯತೆಗಳಿವೆ. ಈ ಕಾಮಗಾರಿಗಳನ್ನು ನಡೆಸುವುದರೊಂದಿಗೆ ಆದಷ್ಟು ಬೇಗ ನಾಲಾ ಆಧುನೀಕರಣ ಮುಗಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರನ್ನು ಕೋರಿದರು.

ಜಿಲ್ಲೆಯಲ್ಲಿ ಹೈನುಗಾರಿಕೆ ಲಕ್ಷಾಂತರ ರೈತರ ಬದುಕಿಗೆ ಆಧಾರವಾಗಿದೆ. ರಾಜ್ಯಸರ್ಕಾರ ಹಾಳಿನ ಪ್ರೋತ್ಸಾಹಧನವನ್ನು ಸಕಾಲದಲ್ಲಿಇ ಬಿಡುಗಡೆ ಮಾಡದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೂಡಲೇ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಪಡಿಸಿದರು.

ಗೋಷ್ಠಿಯಲ್ಲಿ ರವಿಕುಮಾರ್, ಕೆ.ಟಿ.ಗೋವಿಂದೇಗೌಡ, ಕೆನ್ನಾಳು ರಾಜಣ್ಣ, ಹರವು ಪ್ರಕಾಶ್ ಇದ್ದರು.

Share this article