ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದೃಢ ಮನಸ್ಸು ಮತ್ತು ಪರಿಶ್ರಮವಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು. ಛಲ ಇಟ್ಟಕೊಂಡರೆ ಎಲ್ಲವೂ ಸಾಧ್ಯ. ಸಾಧಕ ಮಹಿಳೆಯರೆಲ್ಲರೂ ಒಬ್ಬಂಟಿ ಹೋರಾಟದ ಮೂಲಕವೇ ಸೋತು ಗೆದ್ದಿದ್ದು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಅವರನ್ನು ಪ್ರೇರಣೆಯನ್ನಾಗಿಸಿಕೊಂಡು ಗುರಿಯತ್ತ ಹೆಜ್ಜೆ ಹಾಕಿ ಎಂದು ಬಾಗಲಕೋಟೆ ವಿವಿಯ ರಜಿಸ್ಟ್ರಾರ್ ಡಾ.ಕೆ.ಪಿ.ಲತಾ ಹೇಳಿದರು.ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಘಟಕದಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪದ್ಮಶ್ರೀ ಪಡೆದ ಅರುಣಿಮಾ ಸಿನ್ಹಾ, ದೇಶದ ಮೊದಲ ಗುಪ್ತಚಾರಿ ನೀರಾ ಆರ್ಯ, ಸಾಲು ಮರದ ತಿಮ್ಮಕ್ಕರಂತಹ ಸಾಧಕರ ಬದುಕನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ನಿರೀಕ್ಷೆ ಇಟ್ಟುಕೊಳ್ಳದೆ ಕೆಲಸ ಮಾಡಿದರೆ ಗೆಲುವು ನಿಶ್ಚಿತ. ಕೆಲಸದಲ್ಲಿ ಪರಿಶ್ರಮ ಮತ್ತು ಇತಿಮಿತಿಯ ಸರಳ ಬದುಕನ್ನು ರೂಢಿಸಿಕೊಳ್ಳಿ, ಅಪಹಾಸ್ಯ ಮತ್ತು ಕಾಲು ಎಳೆಯುವವರತ್ತ ಗಮನಕೊಡದೆ ಮುನ್ನಡೆಯಿರಿ. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಇರುವಷ್ಟು ಅವಕಾಶಗಳು ಇತರ ವಿಭಾಗಗಳಿಗೆ ಇಲ್ಲ. ಶಿಸ್ತುಬದ್ದ ಓದಿನಿಂದ ಉನ್ನತ ಹುದ್ದೆಗಳನ್ನು ಸುಲಭವಾಗಿ ಗಿಟ್ಟಿಸಿಕೊಳ್ಳಬಹುದು ಎಂದು ಹೇಳಿದರು.
ಪ್ರಾಚಾರ್ಯರಾದ ಎಸ್.ಆರ್ ಮೂಗನೂರಮಠ ಮಾತನಾಡಿದರು.ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ಡಾ.ಲಲಿತಾ ಚವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಂಜುಳಾ ಚವ್ಹಾನ್ ಮಹಿಳಾ ಸಮಾನತೆ ಕವನ ವಾಚನ ಮಾಡಿದರು, ಐಕ್ಯೂಎಸಿ ಘಟಕದ ಸಂಯೋಜಕರಾದ ಡಾ.ಎ.ಯು ರಾಠೋಡ ಉಪಸ್ಥಿತರಿದ್ದರು. ಗಮನಸೆಳೆದ ವೇಷಭೂಷಣ:ಮಹಿಳಾ ಸಾಧಕರ ವೇಷಭೂಷಣದಲ್ಲಿ ವಿದ್ಯಾರ್ಥಿನಿಯರು: ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಮಾಡಿದ ದೇಶಕಂಡ ಸಾಧಕ ಮಹಿಳೆಯರ ವೇಷಭೂಷಣ ಆಕರ್ಷಕವಾಗಿತ್ತು.ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಕಾರ್ಯನಿರ್ವಹಿಸಲು ಮಹಿಳೆಯರು ಸಮರ್ಥರು ಎಂದು ವೇಷಭೂಷಣಗಳ ಮೂಲಕ ಸಂದೇಶ ಸಾರಿದ ವಿದ್ಯಾರ್ಥಿನಿಯರು ಮಹಿಳಾ ವರದಿಗಾರ, ಸಾಲುಮರದ ತಿಮ್ಮಕ್ಕ, ಸುಧಾಮೂರ್ತಿ, ಸಾವಿತ್ರಿಬಾಯಿ ಪುಲೆ, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವಳ ವೇಷಗಳು ಜನಮನ ಸೆಳೆದವು.ಬಣ್ಣ ಬಣ್ಣದ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿನಿಯರು:
ಮಹಿಳಾ ದಿನಾಚರಣೆಯ ನಿಮಿತ್ತ ವಾರ ಪೂರ್ತಿ ಮಹಾವಿದ್ಯಾಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿನಿಯರು ಮತ್ತು ಮಹಿಳಾ ಪ್ರಾಧ್ಯಾಪಕಿಯರು ದಿನಕ್ಕೊಂದು ಮಾದರಿಯ ಬಣ್ಣಬಣ್ಣದ ಉಡುಗೆ ತೊಟ್ಟು ಸಂಭ್ರಮಿಸಿದರು.