ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಹಿಂದೂ ಎನ್ನುವುದು ಜೀವನ ಪದ್ಧತಿಯಾಗಿದೆ. ಹಿಂದೂ ಸಮಾಜ ಸಂಘಟಿತಗೊಂಡಾಗ ನಮಗೆ ಯಾವ ಸಮಸ್ಯೆಯೂ ಎದುರಾಗದು. ಹಿಂದೂ ಸಮಾಜ ಒಗ್ಗೂಡಿಸುವ ಪ್ರಯತ್ನವಾಗಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಳ್ಳಾರಿ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗೋಪಿಜಿ ಹೇಳಿದರು.ಪಟ್ಟಣದಲ್ಲಿ ಭಾನುವಾರ ಜರುಗಿದ ಬೃಹತ್ ಹಿಂದೂ ಸಮ್ಮೇಳನದ ಮುಖ್ಯ ವಕ್ತಾರರಾಗಿ ಮಾತನಾಡಿ, ನನ್ನ ಬದುಕು ಇಡೀ ಸಮಾಜಕ್ಕೆ, ಪ್ರಕೃತಿಗೆ ಮೀಸಲು ಎನ್ನುವವರು ಹಿಂದೂಗಳು. ಇಂತಹ ವಿಚಾರವನ್ನು ಜಗತ್ತಿಗೆ ಕೊಟ್ಟಿದ್ದು ಭಾರತ. ನಮ್ಮ ಸಂಸ್ಕೃತಿ ಬಗ್ಗೆ ನಮಗೆ ಹೆಮ್ಮೆಯಿದೆ. ಊರು, ಓಣಿ ನಮ್ಮದು ಎನ್ನುವುದು ಹಿಂದೂವಿನ ಗುಣ. ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು. ಪೂರ್ವಜರ ಆಚರಣೆಗಳನ್ನು ಪಾಲಿಸಬೇಕು. ಹಿಂದೂ ಸಮಾಜ ಶಕ್ತಿಶಾಲಿಯಾಗಬೇಕು. ಹಿಂದೂ ಸಮಾಜವನ್ನು ಸಂಘಟಿಸುವ ಕೆಲಸವಾಗಬೇಕು ಎಂದರು.ಕಾಡಸಿದ್ದೇಶ್ವರ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿಯಲ್ಲಿ ಕರುಣೆ ಬಿತ್ತದೆ ಸಂಸ್ಕೃತಿ ಹೆಸರಿನಲ್ಲಿ ಶೋಕ ಬಿತ್ತುತ್ತಿದ್ದೇವೆ. ಧಾರ್ಮಿಕ ಕಾರ್ಯಗಳಾಗಿ ವಿಜೃಂಭಿಸುತ್ತಿದ್ದ ಹಬ್ಬಗಳು ಇಂದು ಮೋಜು ಮಸ್ತಿಗಾಗಿ ಸೀಮೀತವಾಗುತ್ತಿವೆ. ಪ್ರತಿಯೊಬ್ಬರೂ ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಸಿ ಬೆಳೆಸಬೇಕು. ನದಿ, ಅರಣ್ಯವನ್ನು ಸಂರಕ್ಷಿಸುವ ಕೆಲಸವಾಗಬೇಕು. ಭಾರತದಂತಹ ಸಂಸ್ಕೃತಿ ಜಗತ್ತಿನಲ್ಲಿ ಮತ್ತೊಂದಿಲ್ಲ. ಸಂಸ್ಕೃತಿಯನ್ನು ಚೆನ್ನಾಗಿ ಅನುಸರಿಸುವುದು ಗೆಲುವು ಸಾಧಿಸಿದಂತೆ. ಸತ್ಯವನ್ನು ಪಾಲಿಸುವವನು ಹಿಂದೂ. ನಾವೆಲ್ಲರೂ ಶರೀರ ತೃಪ್ತಿಪಡಿಸಿಕೊಳ್ಳದ ಅಹಂನನ್ನು ತೃಪ್ತಿ ಪಡಿಸುತ್ತಿದ್ದೇವೆ. ಇದು ಸರಿಯಾದ ನಡೆಯಲ್ಲ ಎಂದು ತಿಳಿಸಿದರು.ಕೊಟೆಕಲ್ ಹೊಳೆಹುಚ್ಚೇಶ್ವರ ಶ್ರೀಗಳು ಮಾತನಾಡಿ, ನಮ್ಮ ದೇಶದಲ್ಲಿ ಸಂಸ್ಕೃತಿ, ಸಂಪ್ರದಾಯ, ಖನೀಜ ಸಂಪತ್ತಿಗೆ ಕೊರತೆ ಇಲ್ಲ. ಆದರೆ ನಮ್ಮಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ. ಇಚ್ಛಾಶಕ್ತಿ ಇದ್ದರೆ ಯಾವುದೂ ಅಸಾಧ್ಯವಲ್ಲ. ಮೊದಲು ನಾನು ಹಿಂದೂ, ನಾನು ಭಾರತ ಎನ್ನುವ ಭಾವ ಮೂಡಬೇಕು ಎಂದರು.ಗುರುಸಿದ್ದೇಶ್ವರ ಬ್ರಹನ್ಮಠದ ಬಸವರಾಜ ಪಟ್ಟದಾರ್ಯ ಶ್ರೀಗಳು ಮಾತನಾಡಿ, ನಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯ, ಸಂಸ್ಕೃತಿ, ಆಚರಣೆ ಅನುಸರಿಸುತ್ತ ಬಂದಿದ್ದರೆ, ಇಂದು ಇಂತಹ ಸಮ್ಮೇಳನ ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ ನಾವು ಜಾಗೃತರಾಗಬೇಕು. ನಾವು ಸ್ವಾರ್ಥಿಗಳಾಗಿ ವ್ಯಕ್ತಿಗತ ಚಿಂತನೆಗಳನ್ನು ಬಿಟ್ಟು, ನಾವೆಲ್ಲರೂ ಒಂದು ಎನ್ನುವ ಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಸಭೆಯಲ್ಲಿ ಮಾಜಿ ಸಾಶಕರಾದ ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಸೇರಿದಂತೆ ಬಿಜೆಪಿ, ಜೆಡಿಎಸ್, ಆರೆಸ್ಸೆಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಪ್ರಾಸ್ತಾವಿವಾಗಿ ಸಮ್ಮೇಳನದ ಸಂಚಾಲನಾ ಸಮಿತಿ ಅಧ್ಯಕ್ಷ ಅಶೋಕ ಹೆಗಡಿ ಮಾತನಾಡಿದರು. ಕಂಠಿಗೌಡ್ರ ನಿರೂಪಿಸಿದರು. ಈರಣ್ಣ ಶೇಖಾ ವಂದಿಸಿದರು.