ಕನ್ನಡಪ್ರಭ ವಾರ್ತೆ ವಿಜಯಪುರ

ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಕೇಂದ್ರ ಸಮಿತಿ ವತಿಯಿಂದ ರಾಜ್ಯಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸ್ವಾಭಿಮಾನಿ ನೌಕರರ 6ನೇ ಜಾಗೃತ ಸಮಾವೇಶವನ್ನು ಮೇ ತಿಂಗಳ 2ನೇ ವಾರದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಪಿ /ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ ಹೇಳಿದರು.

ನಗರದ ಡಾ.ಅಂಬೇಡ್ಕರ್‌ ಭವನದಲ್ಲಿ 6ನೇ ರಾಜ್ಯಮಟ್ಟದ ಜಾಗೃತ ಸಮಾವೇಶದ ಭಿತ್ತಿ ಪತ್ರಗಳನ್ನು ಪತ್ರಕರ್ತ ಅನೀಲ ಹೊಸಮನಿಯವರೊಂದಿಗೆ ಬಿಡುಗಡೆಗೊಳಿಸಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಉದ್ಯೋಗ ಮತ್ತು ಶೈಕ್ಷಣಿಕವಾಗಿ ರಾಜ್ಯ ಸರ್ಕಾರ ನೀಡಿರುವ ಒಳ ಮೀಸಲಾತಿ ಕುರಿತು ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಎನ್.ಪಿ.ಎಸ್ ಹಿಂಪಡೆದು ರಾಜ್ಯ ಸರ್ಕಾರಿ ನೌಕರರಿಗೆ ಓ.ಪಿ.ಎಸ್ ಜಾರಿ ಮಾಡಬೇಕು ಎಂದು ಸಮಾವೇಶದಲ್ಲಿ ಸಿಎಂಗೆ ಒತ್ತಾಯಿಸಲಾಗುವುದು. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವ ಬಗ್ಗೆ ಒತ್ತಡ ಹೇರುವುದು. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಮೀಸಲಿರಿಸಿದ ಬ್ಯಾಕಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರಿಗೆ ಮುಂಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯಗಳ ಕುರಿತು ಗಮನಕ್ಕೆ ತರುವುದು. ಜೇಷ್ಠತೆಯಲ್ಲಿ ಆಗುತ್ತಿರುವ ಅನ್ಯಾಯಗಳು ಮತ್ತು ದಲಿತ ನೌಕರರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ತಡೆಗೆ ಕ್ರಮಕೈಗೊಳ್ಳುವಂತಹ ವಿಚಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.ಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ವಿಜಯಕುಮಾರ, ಹಿರಿಯ ಉಪಾಧ್ಯಕ್ಷ ಆರ್.ಮೋಹನ, ರಾಜ್ಯಕಾರ್ಯದರ್ಶಿ ಶಿವಕುಮಾರ, ಜಿಲ್ಲಾಧ್ಯಕ್ಷ ಬಿ.ಎಚ್.ನಾಡಗಿರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸೂರ್ಯಕಾಂತ ಹೊಸಮನಿ, ಜಿಲ್ಲಾ ಗೌರವಾಧ್ಯಕ್ಷ ಬಸವಂತ ಗುಣದಾಳ, ರಾಜ್ಯ ಸಲಹಾ ಸಮಿತಿ ಸದಸ್ಯ ಮುದ್ದಣ್ಣ ಭೀಮನಗರ, ಉಪಾಧ್ಯಕ್ಷ ರವಿ ಯಲಡಗಿ, ನೀಲಕಂಠ ವಾಘಮೊರೆ. ಎಸ್.ಎಂ.ಡೊಣಿ, ಜಿ.ಎಂ.ಚಲವಾದಿ, ಎಚ್‌.ಎಲ್.ಮಾಶ್ಯಾಳ, ವಿಜಯಕುಮಾರ ಮುದ್ದೇಬಿಹಾಳ, ನಿಜಣ್ಣ ಮೇಲಿನಕೇರಿ, ಬಸವರಾಜ ಜಾಲವಾದಿ, ಪುಷ್ಪ ಹಲಗಣಿ ಇದ್ದರು.