ಹಾವೇರಿ: ಬೆಂಬಲ ಬೆಲೆ ಯೋಜನೆಯಲ್ಲಿ ಶುಂಠಿ ಖರೀದಿಸುವುದು, ವಿದ್ಯುತ್ ಸಮಸ್ಯೆ, ಬೆಳೆವಿಮೆ ಪರಿಹಾರ ಬೇಡ್ತಿ- ವರದಾ ನದಿ ಜೋಡಣೆ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ರೈತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಕಾಗಿನೆಲೆ ರಸ್ತೆಯ ಮುರುಘರಾಜೇಂದ್ರ ಮಠದಿಂದ ಪ್ರತಿಭಟನೆ ಮೆರವಣಿಗೆ ಆರಂಭಿಸಿದ ರೈತರು ಪಿ.ಬಿ. ರಸ್ತೆ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಮಾವೇಶಗೊಂಡರು. ಬಳಿಕ ರೈತ ವಿರೋಧಿ ಆಡಳಿತ ನಡೆಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೆಸ್ಕಾಂ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸತ್ತ ರೈತರು ನೀರಿಲ್ಲದೇ ಒಣಗಿದ ಮೆಕ್ಕೆಜೋಳ ಗಿಡವನ್ನು ತಂದು ಪ್ರತಿಭಟಿಸಿದರು.ಬಳಿಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಧರಣಿ ನಡೆಸಿದರು. ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ರೈತರು ಸಾಲ ಮಾಡಿ ಶುಂಠಿ ಬೆಳೆದಿದ್ದು, ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಸರ್ಕಾರ ಕ್ವಿಂಟಲ್‌ಗೆ ₹10 ಸಾವಿರದಂತೆ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಸಬೇಕು. ಹಾವೇರಿ ಜಿಲ್ಲೆ ಶಾಶತ ಬರಗಾಲದಿಂದ ಮುಕ್ತಿ ಹೊಂದಬೇಕಾದರೆ ಬೇಡ್ತಿ-ವರದಾ ನದಿ ಜೋಡಣೆ ಅವಶ್ಯವಿದ್ದು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಕ್ಕೆ ಒತ್ತಡ ಹಾಕಿ, ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿ ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿದರು.ಅದೇ ರೀತಿ ಕಳೆದ ಮುಂಗಾರಿನಲ್ಲಿ ಮಧ್ಯಂತರ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ರೈತರಿಗೆ ₹90 ಕೋಟಿ ಪರಿಹಾರ ಬರಬೇಕಿತ್ತು. ಆದರೆ ಕೇವಲ ₹9.66 ಕೋಟಿ ಬಿಡುಗಡೆಯಾಗಿದೆ. ವಿಮೆ ಕಂಪನಿ ಮೋಸ ಮಾಡಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಮರುಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕು. ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ರೈತರ ನೀರಾವರಿ ಬೆಳೆಗಳು ಒಣಗುತ್ತಿವೆ. ಕಳಪೆ ಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿದ್ದು, ಕನಿಷ್ಠ 7 ತಾಸು ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬ್ಯಾಂಕ್, ಫೈನಾನ್ಸ್‌ಗಳ ದಬ್ಬಾಳಿಕೆ ಸಾಲ ವಸೂಲಿ ನಿಲ್ಲಿಸಬೇಕು. ರೇಷ್ಮೆ ಬೆಳೆಗಾರರಿಗೆ ಮನೆ ಕಟ್ಟಿಕೊಡಲು ಸಹಾಯಧನ ಮಂಜೂರು ಮಾಡಬೇಕು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಡ್ರಿಪ್ ಹಾಗೂ ಸ್ಪಿಂಕ್ಲರ್‌ಗಳನ್ನು ಇತರೆ ಪರಿಕರಗಳಿಗೆ ಸಹಾಯಧನ ಮುಂದುವರಿಸಬೇಕು. ರೈತರ ಟಿಸಿ ಹಾಗೂ ಗ್ರಿಡ್‌ಗಳನ್ನು ಅಪ್‌ಗ್ರೇಡ್ ಮಾಡಬೇಕು. ಅಕ್ರಮ ಸಕ್ರಮ ಯೋಜನೆಯಡಿ ಕಂಬ ವೈರ್, ಟಿಸಿ ಕೊಡುವ ವ್ಯವಸ್ಥೆ ಪುನರ್ ಆರಂಭಿಸಬೇಕು ಎಂದು ಒತ್ತಾಯಿಸಿದ ಅವರು, ಒಂದುವೇಳೆ ರೈತರ ಬೇಡಿಕೆ ಈಡೇರಿಸದಿದ್ದರೆ ಸ್ಥಳೀಯ ಶಾಸಕರು ಆಯಾ ವಿಧಾನಸಭಾ ಕ್ಷೇತ್ರಕ್ಕೆ ಹೋಗಬೇಕಾದರೆ ಎಚ್ಚರದಿಂದ ಹೆಜ್ಜೆ ಇಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎಚ್.ಎಚ್. ಮುಲ್ಲಾ, ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ರೈತ ಮುಖಂಡರಾದ ಗಂಗಣ್ಣ ಎಲಿ, ಮಹ್ಮದಗೌಸ್ ಪಾಟೀಲ, ಶಿವಯೋಗಿ ಹೊಸಗೌಡ್ರ, ಮರಿಗೌಡ ಪಾಟೀಲ, ರುದ್ರಗೌಡ ಕಾಡನಗೌಡ್ರ, ಸುರೇಶ ಹೊನ್ನಪ್ಪನವರ, ದಿಳ್ಳೆಪ್ಪ ಮಣ್ಣೂರ, ಪ್ರಭುಗೌಡ ಪ್ಯಾಟಿ, ಮುತ್ತು ಗುಡಗೇರಿ, ರಾಜು ತರ್ಲಘಟ್ಟ , ಶಂಕರಗೌಡ ಶಿರಗಂಬಿ, ಚನ್ನಪ್ಪ ಮರಡೂರು ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.