ಕನ್ನಡಪ್ರಭ ವಾರ್ತೆ ಕನಕಪುರ
ರಾಮನಗರ ಜಿಲ್ಲೆ ರೇಷ್ಮೆ ಬೆಳೆ ಹಾಗೂ ನೂಲು ತಯಾರಿಕೆಯಲ್ಲಿ ವಿಶ್ವವಿಖ್ಯಾತಿ ಪಡೆದಿದೆ, ರೇಷ್ಮೆ ಬೆಳೆ ಬೆಳೆಯುವ ರೈತರು ಹಾಗೂ ನೂಲು ಬಿಚ್ಚುವರಿಗೆ ಸೂಕ್ತ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಆಗ್ರಹಿಸಿದರು.ಮಂಗಳವಾರ ನಗರದ ಸರ್ಕಾರಿ ಗೂಡಿನ ಮಾರುಕಟ್ಟೆಯಲ್ಲಿ ರೈತ ಸಂಘದ ಮುಖಂಡರೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಲಕ್ಷಾಂತರ ರೈತರು ರೇಷ್ಮೆ ಬೆಳೆಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಾ ಬಂದಿದ್ದಾರೆ. ರೇಷ್ಮೆ ಬೆಳೆಗಾರ ತಾನು ಬೆಳೆದ ರೇಷ್ಮೆಯನ್ನು ಮಾರುಕಟ್ಟೆಗೆ ತಂದು ಮಾರಾಟಕ್ಕಿಟ್ಟಾಗ ಆತನಿಗೆ ನ್ಯಾಯಯುತವಾದ ಬೆಲೆ ದೊರಕದೆ ಸಂಕಷ್ಟದ ಸುಳಿಗೆ ಸಿಕ್ಕಿ ನರಳುತ್ತಲೇ ಇದ್ದರೂ ಸಹ ಸರ್ಕಾರ ಇವರ ಸಂಕಷ್ಟಕ್ಕೆ ಸ್ಪಂದಿಸಿ ಬೆಂಬಲ ಬೆಲೆ ಘೋಷಿಸುತ್ತಿಲ್ಲ. ನೂಲಿನ ದರವು ಕಡಿಮೆಯಾಗಿ, ಕಡಿಮೆ ದರದಲ್ಲಿ ರೇಷ್ಮೆಗೂಡನ್ನು ಖರೀದಿ ಮಾಡುವುದರಿಂದ ರೈತ ಹಾಗೂ ಖರೀದಿದಾರ ಇಬ್ಬರೂ ಸಂಕಷ್ಟಕ್ಕೆ ಒಳಗಾಗುತ್ತಾರೆ, ಈ ಕೂಡಲೇ ರಾಜ್ಯ ಸರ್ಕಾರ ರೇಷ್ಮೆ ಬೆಳೆಗಾರರಿಗೆ ಕರ್ನಾಟಕ ರೇಷ್ಮೆ ಮಂಡಳಿಯಿಂದ ಬೆಂಬಲ ಬೆಲೆ ನೀಡಿ ರೇಷ್ಮೆ ನೂಲು ಖರೀದಿ ಮಾಡಿದಲ್ಲಿ ರೈತ ಹಾಗೂ ಖರೀದಿದಾರ ಇಬ್ಬರಿಗೂ ಆಗುತ್ತಿರುವ ಅನ್ಯಾಯ ತಪ್ಪುತ್ತದೆ, ರಾಜ್ಯ ಸರ್ಕಾರ ಈ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲಾ ರೇಷ್ಮೆ ಮಾರುಕಟ್ಟೆಗಳ ಮುಂದೆ ನಿರಂತರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ರೈತರ ಹಾಗೂ ನೂಲು ಬಿಚ್ಚುವವರ ಸಮಸ್ಯೆಗಳನ್ನು ಒಳಗೊಂಡ ಮನವಿ ಪತ್ರವನ್ನು ಉಪ ತಹಸೀಲ್ದಾರ್ ಶಿವಕುಮಾರ್ ಹಾಗೂ ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ನಾಗರಾಜುರವರಿಗೆ ನೀಡಲಾಯಿತು.ಕನಕಪುರ ರೇಷ್ಮೆ ಉತ್ಪಾದಕರ ಕಂಪನಿ ಅಧ್ಯಕ್ಷ ಡಿ.ಕೆ. ರಾಮಕೃಷ್ಣ, ತಾಲೂಕು ರೈತ ಸಂಘದ ಅಧ್ಯಕ್ಷ ಕುಮಾರ್, ಮುಖಂಡರಾದ ಪುಟ್ಟಮಾದೇಗೌಡ, ನಂಜರಾಜ ಅರಸು, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಬಸವರಾಜು, ಸಿದ್ದರಾಜು,ಶಿವರಾಜು, ಮಹದೇಶು, ಶಿವರಾಜು, ಕುಮಾರ್, ಸಾತನೂರು ಹೋಬಳಿ ಅಧ್ಯಕ್ಷ ತಿಮ್ಮೇಗೌಡ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.