ಹಾನಗಲ್ಲ: ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಸೋಮವಾರ ಇಲ್ಲಿಯ ಮಹಾತ್ಮಾಗಾಂಧಿ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ನೇತೃತ್ವದಲ್ಲಿ ಸಾವಿರಾರು ರೈತರು ಟ್ರ್ಯಾಕ್ಟರಗಳೊಂದಿಗೆ ಪ್ರತಿಭಟನೆ ನಡೆಸಿದರು.
ವಿದ್ಯುತ್ ಖಾಸಗೀಕರಣ ಬೇಡ. ಅಕ್ರಮ ಸಕ್ರಮ ಯೋಜನೆ ನಿಲ್ಲಿಸಿ. ಎಲ್ಲ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಕರಾರಿಲ್ಲದೆ ವಿದ್ಯುತ್ ನೀಡಿರಿ. 33 ಕೆವಿ ಸ್ಟೇಶನ್ ಅಪ್‌ಗ್ರೇಡ್ ಮಾಡಿರಿ. ಮುಂಡಗೋಡ ತಾಲೂಕಿಗೆ ವಿದ್ಯುತ್ ನೀಡುವುದನ್ನ ನಿಲ್ಲಿಸಿ. ಸೋಲಾರ ನಮಗೆ ಬೇಡ. ಗ್ರಿಡ್‌ಗಳಿಂದ ವಿದ್ಯುತ್ ಕೊಡಿ. ಲೈನ್‌ಮನ್‌ಗಳ ಕೊರತೆ ನೀಗಿಸಿ, ಡೆಂಜರ್ ಲೈನಗಳ ಸ್ಥಳಾಂತರ ಮಾಡಿ, ಕೂಡಲೇ ಹಾನಗಲ್ಲ ತಾಲೂಕಿಗೆ ಟಿಸಿ ಒದಗಿಸಲು ಲಾರಿ ವಾಹನ ನೀಡಿ, ಸುಟ್ಟ ಟಿಸಿಗಳನ್ನು 24 ಗಂಟೆಗಳಲ್ಲಿ ಮರಳಿ ಕೊಡಿ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.
ಜಾಗಾ ಖಾಲಿ ಮಾಡ್ರಿ: ಸರ್ಕಾರಕ್ಕೆ ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರೈತರು ಆಕ್ರಮ ಕೆಲಸ ಮಾಡಲ್ಲ, ಪಂಪಸೆಟ್‌ಗೆ ವಿದ್ಯುತ್ ನೀಡುವುದು ಸರ್ಕಾರದ ಕೆಲಸವಾಗಿದೆ. ಆರ್. ಆರ್. ನಂಬರಾದ್ರು ಕೊಡಿ, ಏಳೇಳು ನಂಬರ್ ಆದ್ರೂ ಕೊಡ್ರಿ, ಒಟ್ ನಮ್ಮ ಪಂಪಸೆಟ್ಟಿಗೆ ವಿದ್ಯುತ್ ಕೊಡ್ರಿ, ಇಲ್ಲಾಂದ್ರ ಕೆಲಸ ಮಾಡಲಾಗದ ಅಧಿಕಾರಿ ಜನಪ್ರತಿನಿಧಿಗಳು ಜಾಗಾ ಖಾಲಿ ಮಾಡ್ರಿ, ರೈತನ ಸಹಾಯಕ್ಕೆ ನಿಲ್ಲದ ವೊಲ್ಟೇಜ್ ಫಾಲ್ಟ ಇಲಾಖೆ ಎಂದು ಗುಡುಗಿದರು.ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚೆಳ್ಳರ ಮಾತನಾಡಿ, ರೈತರ ಸಂಘಟನೆಗಳನ್ನು ನಿರ್ಲಕ್ಷ್ಯ ಮಾಡಿದವರಿಗೆ ಸರಿಯಾದ ಉತ್ತರ ಕೊಡಲು ಸಿದ್ಧರಾಗಿ. ಈಗಾಗಲೇ ಇಂತಹ ಹಲವು ಪಾಠಗಳನ್ನು ಕಲಿಸಿದ್ದೇವೆ. ಹಾನಗಲ್ಲ ತಾಲೂಕಿನಲ್ಲಿ ಇದರ ಬಗ್ಗೆ ಎಚ್ಚರಿಕೆ ಇರಲಿ. ರೈತರ ಬೇಡಿಕೆ ಈಡೇರದಿದ್ದರೆ ಬೀದಿಗೆ ಇಳಿಯುವುದು ಮಾತ್ರವಲ್ಲ ಅದಕ್ಕೆ ಸರಿಯಾದ ಸಂದರ್ಭದಲ್ಲಿ ಸರಿಯಾಗಿ ಪಾಠ ಕಲಿಸುತ್ತೇವೆ. ರೈತರೇ ಎದೆಗುಂದಬೇಡಿ. ಹೋರಾಟದ ಒಗ್ಗಟ್ಟಿನಿಂದ ಎಲ್ಲವನ್ನೂ ಪಡೆಯಲು ಸಾಧ್ಯ ಎಂಬ ವಿಶ್ವಾಸ ನಿಮ್ಮಲ್ಲಿರಲಿ. ರೈತರ ಹೋರಾಟಗಳನ್ನು ಸರ್ಕಾರ ಹಗುರವಾಗಿ ಪರಿಗಣಿಸದಿರಲಿ. ಸಂಘಟನೆ ಹತ್ತಿಕ್ಕಲು ಬಿಡಬೇಡಿ ಎಂದು ಎಚ್ಚರಿಸಿದರು.ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿನ ರೈತರ ಸಮಸ್ಯೆಗಳ ಬಗೆಗೆ ಇಲಾಖೆಗಳಿಗೆ ನೀಡಿದ ಬೇಡಿಕೆಗಳು ನಿರ್ಲಕ್ಷ್ಯಕ್ಕೊಳಗಾಗುತ್ತಿವೆ. ವಿದ್ಯುತ್ ಸಮಸ್ಯೆ ಬಗೆಗೆ ನಾಲ್ಕಾರು ತಿಂಗಳಿನಿಂದಲೇ ಇಲಾಖೆಯ ಗಮನ ಸೆಳೆದಿದ್ದೇವೆ. ಮೇಲಿಂದ ಮೇಲೆ ಎಚ್ಚರಿಸುತ್ತಲೇ ಇದ್ದರೂ ಈಗ ವಿದ್ಯುತ್ ಖೋತಾ, ವೋಲ್ಟೇಜ್ ಫಾಲ್ಟ, ಟಿಸಿ ಸುಡುವುದು, ಒಟ್ಟಿನಲ್ಲಿ ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಇಲ್ಲದ ದುಸ್ಥಿತಿ ಒದಗಿದೆ. ಇದನ್ನು ಬಗೆಹರಿಸಲು ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಎಚ್.ಎಚ್.ಮುಲ್ಲಾ, ಗೌರವಾಧ್ಯಕ್ಷ ಮಲ್ಲೇಶಪ್ಪ ಪರಪ್ಪನವರ, ವಾಸುದೇವ ಕಮಾಟಿ, ರುದ್ರಪ್ದ ಹಣ್ಣಿ, ಮಹೇಶ ವಿರುಪಣ್ಣನವರ, ಸೋಮಪ್ಪ ಜಡೆಗೊಂಡರ್, ಶ್ರೀಕಾಂತ ದುಂಡಣ್ಣನವರ, ಉಮೇಶ ಮೂಡಿ, ಶ್ರೀಧರ ಮಲಗುಂದ, ಎಂ.ಎಂ.ಬಡಗಿ, ಶಂಕರಗೌಡ ಪಾಟೀಲ, ಮಹಲಿಂಗಪ್ಪ ಅಕ್ಕಿವಳ್ಳಿ ಮೊದಲಾದವರ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಪ್ರತಿಭಟನಾ ಮೆರವಣೆಗೆ ನಡೆಯಿತು.