ಕನ್ನಡಪ್ರಭ ವಾರ್ತೆ ಮಡಿಕೇರಿ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ 10 ಎಚ್.ಪಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಬಿಲ್ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕ ಮಡಿಕೇರಿಯ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಘಟಕದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಿಂದ ವಿದ್ಯುತ್ ಶುಲ್ಕ ಪಡೆಯಬಾರದೆಂದು ಒತ್ತಾಯಿಸಿದರು. ಈ ಹಿಂದೆ ಮಂತ್ರಿಮಂಡಲದಲ್ಲಿ ರಾಜ್ಯ ಸರ್ಕಾರದ ತೆಗೆದುಕೊಂಡ ನಿರ್ಧಾರದಂತೆ ವಿದ್ಯುತ್ ಸಬ್ಸಿಡಿಯನ್ನು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗುವಂತೆ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ 10 ಎಚ್.ಪಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು. ಐಪಿ ಸೆಟ್ ಗಳಿಗೆ 12 ಗಂಟೆ ಗುಣಾತ್ಮಕ ಫೇಸ್ ವಿದ್ಯುತ್ ನೀಡಿ ರೈತರ ಕಾಫಿ ತೋಟಗಳಿಗೆ ನೀರು ಹಾಯಿಸಲು ತಡೆರಹಿತ ವಿದ್ಯುತ್ ಸರಬರಾಜು ಮಾಡಬೇಕು, ವಿದ್ಯುತ್ ಉಪಕೇಂದ್ರವನ್ನು ಅವಶ್ಯಕತೆ ಇರುವ ಕಡೆ ಪ್ರಾರಂಭಿಸಲು ತುರ್ತು ಕ್ರಮ ಕೈಗೊಳ್ಳಬೇಕು, ಕೆಳಮಟ್ಟದ ಮತ್ತು ಸುಟ್ಟು ಹೋಗಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳನ್ನು ನಿಗದಿತ ಸಮಯದೊಳಗೆ ಬದಲಾಯಿಸಬೇಕು, ಮನೆ ಮತ್ತು ಐಪಿ ಪಂಪ್‌ಸೆಟ್ ವಿದ್ಯುತ್ ಬಾಕಿ ಮನ್ನಾ ಮಾಡಬೇಕು, ಚೆಸ್ಕಾಂ ಕಿರುಕುಳ ತಪ್ಪಿಸಬೇಕು, ವಿದ್ಯುತ್ ಇಲಾಖೆಯವರು ರೈತರ ಮೇಲೆ ಬಲಪ್ರಯೋಗ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಂಘದ ಜಿಲ್ಲಾ ಸಂಚಾಲಕ ಸುಭಾಷ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಮತ್ತಿತರರು ಪಾಲ್ಗೊಂಡಿದ್ದರು.