-ಹುಮನಾಬಾದ್ ರಾಜ್ಯ ರೈತ ಸಂಘದಿಂದ ಪ್ರತಿಭಟನಾ ಮೆರವಣಿಗೆ । ಹೆದ್ದಾರಿ ತಡೆಗೆ ಮುಂದಾದ ರೈತರು ಪೊಲೀಸ್ ವಶಕ್ಕೆ, ಬಿಡುಗಡೆ
-----ಕನ್ನಡಪ್ರಭ ವಾರ್ತೆ ಹುಮನಾಬಾದ್
ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಒತ್ತಾಯಿಸಿ ಹೈದ್ರಾಬಾದ್ ಮುಂಬೈ ರಾಷ್ಟ್ರೀಯ ಹೆದ್ದಾರಿ 65 ತಡೆದು ಪ್ರತಿಭಟನೆಗೆ ಮುಂದಾದ ರೈತರಿಗೆ ಇಲ್ಲಿನ ಜೆಸ್ಕಾಂ ಕಚೇರಿ ಹತ್ತಿರ ತಡೆದ ಪೊಲೀಸರು ರೈತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಿಂದ ಹೊರವಲಯದ ರಾಮ್ ಆಂಡ್ ರಾಜ್ ಪದವಿ ಪೂರ್ವ ಕಾಲೇಜುವರೆಗೆ ಕರ್ನಾಟಕ ರಾಜ್ಯ ರೈತ ಸಂಘ ಹುಮನಾಬಾದ್ ವತಿಯಿಂದ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಜೆಸ್ಕಾಂ ಬಳಿ ನಿಯೋಜಿತ ಪೊಲೀಸರು ಪ್ರತಿಭಟನಾಕಾರ ರೈತರನ್ನು ತಡೆಯುವ ಮೂಲಕ ವಶಕ್ಕೆ ಪಡೆದು ಹುಮನಾಬಾದ್ ಪೊಲೀಸ್ ಠಾಣೆಗೆ ಕರೆತಂದು ಬಳಿಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ವಾಹನದಲ್ಲಿ ಕೆಲ ರೈತರನ್ನು ಬಸವಕಲ್ಯಾಣದ ಬಂಗ್ಲಾ ಪ್ರದೇಶಕ್ಕೂ ಕರೆದುಕೊಂಡು ಹೋಗಿದ್ದನ್ನು ಅರಿತ ರೈತರು ಕೆಲ ಸಮಯ ಪೊಲೀಸ್ ಠಾಣೆಯಲ್ಲಿಯೇ ಪ್ರತಿಭಟನೆ ನಡೆಸಿದರು.ಪ್ರತಿ ಟನ್ ಕಬ್ಬಿಗೆ 3ಸಾವಿರ ರು. ಕೊಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದ್ದು, ಒಂದು ವಾರದ ಗಡುವು ನೀಡಲಾಗಿದೆ. ಬಳಿಕ ಹೆಂಡತಿ ಮಕ್ಕಳು, ದನ ಕರುಗಳ ಸಹಿತ ರಾಷ್ಟ್ರೀಯ ಹೆದ್ದಾರಿ 65ನ್ನು ತಡೆಯುವ ಮೂಲಕ ಬೇಡಿಕೆ ಈಡೇರುವ ವರೆಗೆ ರಸ್ತೆಯ ಮೇಲೆ ಸಂಸಾರ ನಡೆಸುವದಾಗಿ ಕರ್ನಾಟಕ ರಾಜ್ಯ ರೈತ ಸಂಘ, ಹುಮನಾಬಾದ್ ತಾಲೂಕಾಧ್ಯಕ್ಷ ಸತೀಶ ನನ್ನೂರೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಕ್ಕದ ಕಲಬುರಗಿ ಜಿಲ್ಲೆಯ ಕಾರ್ಖಾನೆಗೆ ಕಬ್ಬು ಸಾಗಟ ಮಾಡುವ ರೈತರಿಗೆ 3 ಸಾವಿರ ರು., ಪಕ್ಕದ ಮಹಾರಾಷ್ಟ್ರದ ಉದಗೀರನ ವಿಲಾಸ ಸಕ್ಕರೆ ಕಾರ್ಖಾನೆ 3100ರು. ಟನ್ ಕಬ್ಬಿಗೆ ನೀಡಿದರೆ, ಜಿಲ್ಲೆಯಲ್ಲಿ 24 ಲಕ್ಷ ರೈತರು 18 ಲಕ್ಷ ಟನ್ ಕಬ್ಬು ಬೆಳೆಯುತ್ತಿದ್ದು, ಒಂದು ಟನ್ ಕಬ್ಬಿಗೆ ಒಂದು ಕ್ವಿಂಟಲ್ ಮೇಲ್ಪಟ್ಟು ಬೆಲ್ಲ ಬರುತ್ತೆ ಆದರೆ, ಕಾರ್ಖಾನೆಯವರು ರೈತರಿಗೆ ಕಡಿಮೆ ದರ ನೀಡಿ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಇದಲ್ಲದೆ ಬಿಎಸ್‌ಎಸ್‌ಕೆ ಮಾರಾಟ ಪ್ರಕ್ರಿಯೆ ವಾಪಸ್ ಪಡೆಯುವ ಮೂಲಕ ಅದನ್ನು ಸರ್ಕಾರದಲ್ಲಿಯೇ ಉಳಿಸಿಕೊಳ್ಳುವಂತೆ ತಹಸೀಲ್ದಾರ ಅಂಜುಮ್ ತಬಸುಂ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಉಪಾಧ್ಯಕ್ಷ ಕರಬಸಪ್ಪ ಹುಡಗಿ, ಸಿದ್ದಣ್ಣ ಬೂಶೆಟ್ಟಿ, ರಿಯಾಜ್ ಪಟೇಲ್, ರಾಮರಾವ್ ಕೇರೂರೆ, ಖಾಸಿಮ್ ಅಲಿ, ಘಾಟಬೋರಳ ಜ್ಞಾನೇಶ್ವರ ಭೋಸ್ಲೆ, ಪರಮೇಶ್ವರ ಪಾಟೀಲ್, ಕಾಶಪ್ಪ ಶಿವಶೆಟಿ, ಗುರುಲಿಂಗಪ್ಪ ಮೇಲದೊಡ್ಡಿ, ಅಣ್ಣರಾವ್ ಪಾಟೀಲ್, ರವಿ ಹುಣಚಗೇರಾ ಸೇರಿದಂತೆ ಅನೇಕರಿದ್ದರು.ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಎಸ್‌ಪಿ ಪ್ರದೀಪ ಗುಂಟಿ, ತಹಸೀಲ್ದಾರ ಅಂಜುಮ್ ತಬಸುಮ್, ಡಿವೈಎಸ್‌ಪಿ ಜೆಎಸ್ ನ್ಯಾಮೇಗೌಡರ್, ಸಿಪಿಐ ಗುರುಲಿಂಗಪ್ಪಗೌಡ ಪಾಟೀಲ್, ಕೃಷ್ಣಕುಮಾರ ಪಾಟೀಲ್, ಅಲಿ ಸಾಬ್, ಶಿವಾನಂದ ಪವಾಡಶಟ್ಟಿ, ಪಿಎಸ್‌ಐ ಸುರೇಶಕುಮಾರ, ಮಹೇಂದ್ರ ಎಂಜಿ, ನಿಂಗಪ್ಪ ಮಣ್ಣುರ, ನಾಗೇಂದ್ರ ಎಂ.ಕೆ, ಸುವರ್ಣಾ ಮಲಶಟ್ಟಿ, ಸಂಗೀತಾ, ಅಂಬ್ರೇಶ, ಸಂಚಾರಿ ಪಿಎಸ್‌ಐ ಬಸಲಿಂಗಪ್ಪ ಎಂಜಿ, ಸೇರಿದಂತೆ ಹುಮನಾಬಾದ್ ಹಾಗೂ ಬಸವಕಲ್ಯಾಣ ಉಪವಿಭಾಗ ಪೊಲೀಸ್ ಠಾಣೆಗಳ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.
----ಫೋಟೊ: ಫೈಲ್ 17ಬಿಡಿ3