ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ ಕೂಡಲೇ ಜೆಎಂಸಿ ಸರ್ವೇ ಮುಗಿಸಿ ಪರಿಹಾರ ವಿತರಿಸುವಂತೆ ಆಗ್ರಹಿಸಿ ಯೋಜನೆ ಪರವಾಗಿ ರೈತರು ಮಂಗಳವಾರ ಬಿಡದಿ - ಹಾರೋಹಳ್ಳಿ ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಡದಿ ಠಾಣೆ ಇನ್ಸ್ ಪೆಕ್ಟರ್ ವಿಜಯಕುಮಾರ್ , ರಸ್ತೆ ತಡೆ ಮಾಡದಂತೆ ರೈತರ ಮನವೊಲಿಸಲು ಮುಂದಾದರು. ಅದಕ್ಕೆ ಬಗ್ಗದ ರೈತರು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರಬೇಕು. ಕೂಡಲೇ ನಮ್ಮ ಜಮೀನುಗಳಲ್ಲಿ ಜೆಎಂಸಿ ಆರಂಭಿಸಬೇಕೆಂದು ಆಗ್ರಹಿಸಿದರು. ಇದರಿಂದ ಹಾರೋಹಳ್ಳಿ-ಬಿಡದಿ ಮುಖ್ಯರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಘಟನೆಗೆ ಎಚ್ ಡಿಕೆಯೇ ಕಾರಣ :ಈ ವೇಳೆ ರೈತ ಮುಖಂಡ ಹೊಸೂರು ರಾಜಣ್ಣ ಮಾತನಾಡಿ, ಮಂಡಲಹಳ್ಳಿ ಗ್ರಾಮದಲ್ಲಿ 21 ಜನ ರೈತರು ಭೂಮಿ ಕೊಡುವುದಾಗಿ ಜಿಬಿಡಿಎಗೆ ಒಪ್ಪಿಗೆ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಜೆಎಂಸಿ ಸೋಮವಾರ ಸರ್ವೇ ಕಾರ್ಯಕ್ಕೆ ಬಂದಿದ್ದರು. ಈ ವೇಳೆ ಹೊರಗಿನ ವ್ಯಕ್ತಿಗಳು ಹಲ್ಲೆ ನಡೆಸಿ ದುಷ್ಕೃತ್ಯ ಎಸಗಿದ್ದಾರೆ. ಈ ಘಟನೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿರವರೇ ನೇರ ಕಾರಣ ಎಂದು ಆರೋಪಿಸಿದರು.
ಕುಮಾರಸ್ವಾಮಿರವರು ಹೇಳಿರುವಂತೆ ಮಾಹಿತಿ ಇಲ್ಲದೆ ರೈತರ ಜಮೀನಿಗೆ ನುಗ್ಗಿಲ್ಲ. ರೈತರೇ ಭೂಮಿ ಕೊಡಲು ಸಿದ್ಧರಾಗಿದ್ದು ಸರ್ವೇಗಾಗಿ ಜಿಬಿಡಿಎಗೆ ಅರ್ಜಿ ನೀಡಿದ್ದರಿಂದ ಅಧಿಕಾರಿಗಳು ಬಂದಿದ್ದರು. ಕುಮಾರಸ್ವಾಮಿರವರು ವಾಸ್ತವವನ್ನು ತಿಳಿಯದೆ ಎಲ್ಲೋ ಕುಳಿತು ಆರೋಪ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.
ಟೌನ್ಶಿಪ್ ಯೋಜನೆ ಉದ್ದೇಶಿತ ಪ್ರದೇಶದಲ್ಲಿನ ಬಹುತೇಕ ರೈತರು ಭೂಮಿ ಕೊಡಲು ಒಪ್ಪಿದ್ದು ಈಗಾಗಲೇ ಜಿಬಿಡಿಎಗೆ ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಯಾರಿಗೂ ಹೆದರದೆ ಒಪ್ಪಿಗೆ ಇರುವ ರೈತರ ಜಮೀನನ್ನು ಸರ್ವೇ ಕಾರ್ಯ ಮುಂದುವರೆಸಬೇಕು. ಇಲ್ಲದಿದ್ದರೆ ರೈತರಿಗೆ ತೊಂದರೆಯಾಗುತ್ತದೆ. ಯೋಜನೆ ವಿರೋಧ ಇರುವ ರೈತರು ಕಾನೂನು ಹೋರಾಟ ಮಾಡಲಿ, ಅದನ್ನು ಬಿಟ್ಟು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಹೊಸೂರು ರಾಜಣ್ಣ ಹೇಳಿದರು.
ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಎಚ್.ಎಸ್.ಸಿದ್ಧರಾಜು ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಕುಮಾರಸ್ವಾಮಿರವರು ರೆಡ್ ಜೋನ್ ಮಾಡಿ ರೈತರ ಮರಣ ಶಾಸನ ಬರೆದರು. ನಾವೆಲ್ಲರೂ ಜೆಡಿಎಸ್ ಪಕ್ಷದಲ್ಲಿದ್ದು ಎಲ್ಲವನ್ನೂ ಕಂಡಿದ್ದೇವೆ. ರೆಡ್ ಜೋನ್ ವನವಾಸಕ್ಕೆ ಮುಕ್ತಿಕೊಡಿ ಎಂದು ಹಲವಾರು ಬಾರಿ ಕೇಳಿಕೊಂಡರೂ ನೀವು ನಮ್ಮ ಮಾತು ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಬೈರಮಂಗಲ ವಿಎಸ್ಎಸ್ಎನ್ ಅಧ್ಯಕ್ಷ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಆರ್.ಜಯಚಂದ್ರ, ರೈತಮುಖಂಡರಾದ ಶಿವರಾಮ್, ರಾಮಾಂಜಿನಿ, ಕೃಷ್ಣಮೂರ್ತಿ, ಯಾಲಕಯ್ಯ, ವೆಂಕಟಾಚಲಯ್ಯ, ನಾಗರಾಜು, ಸಂಜೀವರೆಡ್ಡಿ, ತಾಯಪ್ಪನದೊಡ್ಡಿಸ್ವಾಮಿ, ವಿನಯ್ ಕುಮಾರ್, ನಾಗೇಶ್, ಅಂಚೀಪುರ ಶೇಖರ್ ಮತ್ತಿತರರು ಇದ್ದರು.
4.ಬೈರಮಂಗಲದಲ್ಲಿ ಟೌನ್ ಶಿಪ್ ಯೋಜನೆ ಪರ ರೈತರು ವಾಹನಗಳನ್ನು ತಡೆದು ಪ್ರತಿಭಟಿಸಿದರು.