ಕನ್ನಡಪ್ರಭ ವಾರ್ತೆ ಹನೂರು
ಕಾಡಾನೆ ಹಾವಳಿ ತಡೆಗಟ್ಟುವಂತೆ ತಾಲೂಕಿನ ಲೋಕ್ಕನಹಳ್ಳಿ ಹಾಂಡಿಪಾಳ್ಯ ರೈತರು ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದರು.ಹಾಂಡಿಪಾಳ್ಯಕ್ಕೆ ವಲಯ ಅರಣ್ಯಾಧಿಕಾರಿ ಶಿವರಾಮ್ ಹಾಗೂ ಫಾರೆಸ್ಟರ್ ವಿಟ್ಟಲ್ ಭೇಟಿ ನೀಡಿದ ವೇಳೆ ರೈತರು ಮಾತನಾಡಿ, ತಾಲೂಕಿನ ಲೋಕ್ಕನಹಳ್ಳಿ ಹಾಂಡಿಪಾಳ್ಯ ರೈತರ ಜಮೀನುಗಳಲ್ಲಿ ರಾತ್ರಿ ಹಗಲು ಎನ್ನದೆ ಕಾಡಾನೆಗಳು ಅರಣ್ಯ ಪ್ರದೇಶದಿಂದ ಜಮೀನುಗಳಿಗೆ ನುಗ್ಗಿ ಬೆಳೆ ತುಳಿದು ನಾಶಪಡಿಸುವುದರ ಜೊತೆಗೆ ಬೆಲೆ ಬಾಳುವ ತೆಂಗು ಹಲಸು ಇನ್ನಿತರ ಮರಗಳನ್ನು ಮುರಿದು ತಿಂದು ನಾಶಪಡಿಸಿದೆ. ಜೊತೆಗೆ ರೈತರ ಜಮೀನುಗಳಲ್ಲಿರುವ ಪರಿಕರಗಳನ್ನು ಸಹ ಹಾಳು ಮಾಡುತ್ತಿದೆ. ನಿರಂತರವಾಗಿ ಹಲವಾರು ದಿನಗಳಿಂದ ಬರುತ್ತಿರುವ ಕಾಡಾನೆಗಳನ್ನು ತಡೆಗಟ್ಟಲು ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ಕಾರಣ ಎಂದು ರೈತರು ಆರೋಪಿಸಿದರು.
ಹಾಂಡಿ ಪಾಳ್ಯದ ರೈತ ಕೃಷ್ಣ ಅವರ ಜಮೀನಿನಲ್ಲಿ ಕಟ್ಟಿ ಹಾಕಲಾಗಿದ್ದ ಜಾನುವಾರು ಹಸುವನ್ನು ಆನೆ ದಾಳಿ ಮಾಡಿ ತುಳಿದಿರುವುದರಿಂದ ಕಾಲುಮುರಿದು ಜಾನುವಾರು ನಿಲ್ಲಲು ಆಗದೆ ಚಿಕಿತ್ಸೆಯು ಸಿಗದೆ ಪರದಾಡುತ್ತಿದೆ. ಜೊತೆಗೆ ಜಮೀನಿನಲ್ಲಿ ಸಹ ರೈತರು ಮುಕ್ತವಾಗಿ ಓಡಾಡಲು ಸಹ ಆಗದ ಸ್ಥಿತಿಯಲ್ಲಿ ಭಯಭೀತರಾಗಿದ್ದಾರೆ. ಹೀಗಾಗಿ ವಲಯ ಅರಣ್ಯ ಅಧಿಕಾರಿಗಳು ನಿರಂತರವಾಗಿ ಬರುತ್ತಿರುವ ಕಾಡಾನೆಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ ರೈತರ ಜಮೀನಿನಲ್ಲಿ ಆನೆ ತುಳಿದು ನಾಶಗೊಳಿಸಿರುವ ಫಸಲು ಮತ್ತು ಜಾನುವಾರು ಕಾಲು ಜಖಂಗೊಂಡಿರುವ ಬಗ್ಗೆ ಮಾಹಿತಿ ಪಡೆದ ನಂತರ ಅರಣ್ಯ ಇಲಾಖೆ ವತಿಯಿಂದ ಸಿಗುವ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಜೊತೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರೈತರ ಜಮೀನಿಗೆ ಬರುತ್ತಿರುವ ಕಾಡಾನೆಗಳನ್ನು ಸಿಬ್ಬಂದಿ ಜೊತೆಗೂಡಿ ಅರಣ್ಯ ಪ್ರದೇಶಕ್ಕೆ ಓಡಿಸಲು ಕ್ರಮ ಕೈಗೊಳ್ಳಲಾಗುವುದು. ಇಲ್ಲದಿದ್ದರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆನೆಯನ್ನು ಹಿಡಿದು ಬೇರಡೆ ಬಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ರೈತರಾದ ಮನೋಹರ್ ಸೆಂದಿಲ್ ಕುಮಾರ್ ತಮಿಳ್ ಸೆಲ್ವ ನವೀನ್ ಪರಮೇಶ್ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.‘ನಮಗೆ ನಿಮ್ಮ ಪರಿಹಾರ ಬೇಡ ನಿಮ್ಮ ಆನೆ ಬರದಂತೆ ನೋಡಿಕೊಳ್ಳಿ. ರೈತರ ಆಗ್ರಹ ಅರಣ್ಯಾಧಿಕಾರಿಗಳು ರೈತರ ಜಮಿನಿಗೆ ಭೇಟಿ ನೀಡಿದ್ದಾಗ ನಿಮ್ಮ ಪರಿಹಾರ ನಮಗೆ ಬೇಡ ನಮ್ಮ ಬದುಕನ್ನು ಉಳಿಸಲು ನಿಮ್ಮ ಆನೆ ಬರದಂತೆ ತಡೆಗಟ್ಟಿ ನಮ್ಮನ್ನು ಬದುಕಲು ಬಿಡಿ. ಅದೇ ರೀತಿ ಆದರೆ ರೈತರು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿ ಸಂಕಷ್ಟಕ್ಕೆ ಸಿಗುವ ಪರಿಸ್ಥಿತಿ ಉಂಟಾಗಿದೆ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವುದರ ಜೊತೆಗೆ ಇದಕ್ಕೆ ಅರಣ್ಯ ಅಧಿಕಾರಿಗಳು ಶಾಶ್ವತ ಪರಿಹಾರ ನೀಡಬೇಕು’.
ರೈತ ನವೀನ್ ಲೊಕ್ಕನಹಳ್ಳಿ.