ಕಬ್ಬು ಪೂರೈಸಿದ ರೈತರಿಗೆ ತೊಂದರೆಯಾಗದಿರಲಿ

KannadaprabhaNewsNetwork | Published : Nov 17, 2024 1:19 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನ ಹಂಗಾಮಿಗೆ ಸರ್ಕಾರದ ಆದೇಶದಂತೆ ಕಬ್ಬು ನುರಿಸುವ ಕಾರ್ಯ ಆರಂಭಿಸಿದ ಸಂದರ್ಭದಲ್ಲಿ ಕಬ್ಬು ಪೂರೈಸಿದ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನ ಹಂಗಾಮಿಗೆ ಸರ್ಕಾರದ ಆದೇಶದಂತೆ ಕಬ್ಬು ನುರಿಸುವ ಕಾರ್ಯ ಆರಂಭಿಸಿದ ಸಂದರ್ಭದಲ್ಲಿ ಕಬ್ಬು ಪೂರೈಸಿದ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿ, ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ನಿಗದಿತ ಅವಧಿಯಲ್ಲಿ ಹಣ ಸಂದಾಯ ಮಾಡಬೇಕು. ಯಾವುದೇ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸಿಸಿಟಿವಿ ನಿಗಾವಣೆಯಲ್ಲಿ ತೂಕ ಮಾಡುವ ಕಾರ್ಯ ನಿರ್ವಹಣೆ ಮಾಡಬೇಕು. ಪ್ರತಿ ವರ್ಷ ಕಾರ್ಖಾನೆಗಳಿಗೆ ಭೇಟಿ ನೀಡಿ ವಾಯುಮಾಲಿನ್ಯ ಮತ್ತು ನೈರ್ಮಲ್ಯ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ, ಸಕ್ಕರೆ ಕಾರ್ಖಾನೆಗಳು ಕೊಳಚೆ ನೀರು ಬಿಡದಂತೆ ನೋಡಿಕೊಂಡು ಮಾಲಿನ್ಯವಾಗದಂತೆ ನಿಗಾ ವಹಿಸಬೇಕು ಎಂದರು.ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ ಅಳವಡಿಸಿಕೊಂಡಿರುವ ಡಿಜಿಟಲ್ ತೂಕದ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ತೂಕ ಅಳತೆ ಮಾಪನ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಉಪವಿಭಾಗಾಧಿಕಾರಿಗಳು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಮೇಲಿಂದ ಮೇಲೆ ಕಾರ್ಖಾನೆಗಳಿಗೆ ಭೇಟಿ ನೀಡಿ ಕಬ್ಬು ನುರಿಸುವ ಕಾರ್ಖಾನೆಗಳು ಎಲ್ಲ ನಿಯಮಗಳನು ಪಾಲಿಸುತ್ತಿರುವ ಕುರಿತು ಪರಿಶೀಲಿಸಬೇಕು. ತೂಕದ ಯಂತ್ರ, ಸ್ಟ್ಯಾಪಿಂಗ್ ಕುರಿತು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.ರೈತರಿಂದ ವಿವಿಧ ಸಲಹೆಕಬ್ಬು ನುರಿಸುವ ಮುಂಚೆ ಸಭೆ ನಡೆಸಿ, ರೈತರ ಅಹವಾಲುಗಳನ್ನು ಆಲಿಸಬೇಕು. ಇತ್ತಿಚೆಗೆ ಕಬ್ಬು ಬೆಳೆಗಾರರು ಕಡಿಮೆಯಾಗಿರುವುದರಿಂದ ರೈತರ ಸಹಾಯಕ್ಕೆ ಮುಂದಾಗಬೇಕು. ಕೆಲವು ಸಕ್ಕರೆ ಕಾರ್ಖಾನೆಗಳಿಂದ ಕಲುಷಿತ ನೀರು ಹೊರಗಡೆ ಬಿಡುಗಡೆಯಾಗುತ್ತಿರುವುದುರಿಂಧ ಮಾಲಿನ್ಯ ಉಂಟಾಗಿ ಜಲಚರಗಳ ಮೇಲೆ ದುಷ್ಟರಿಣಾಮ ಬೀರುತ್ತಿದೆ. ಈ ಕುರಿತು ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಕಬ್ಬು ಒದಗಿಸುವ ರೈತರಿಗೆ ಎಚ್‌ಎನ್‌ಟಿ ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಏಕರೂಪದಲ್ಲಿ ಪಾವತಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ಆಹಾರ ಮತ್ತು ನಾಗರಿಕರ ಸಬರಾಜು ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ, ಆಹಾರ ಇಲಾಖೆ ಶಿರಸ್ತೇದಾರ ಅಮರೇಶ ತಾಂಡೂರ ಸೇರಿದಂತೆ ವಿವಿಧ ಅಧಿಕಾರಿಗಳು, ಜಿಲ್ಲೆಯ ರೈತ ಮುಖಂಡರಾದ ಸುಭಾಷ ಶಿರಬೂರ, ಸಂಗಮೇಶ ಸಗರ, ಸೋಮು ಬಿರಾದಾರ, ರಾಮನಗೌಡ ಪಾಟೀಲ, ಶಾನೂರ ನಂದರಗಿ, ಹಣಮಂತ ಬ್ಯಾಡಗಿ, ಧರೆಪ್ಪ ಸೊರಡಿ, ಜಕರಾಯ ಪೂಜಾರಿ, ಕುಲಕರ್ಣಿ, ಸೇರಿದಂತೆ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.

Share this article