ತುಂಗಭದ್ರೆ ಒಡಲಲ್ಲಿ ಭತ್ತ ಬೆಳೆಯುತ್ತಿದ್ದ ರೈತರೀಗ ಸಾಸಿವೆ ಕೃಷಿಗೆ ಮೊರೆ

KannadaprabhaNewsNetwork |  
Published : Feb 05, 2026, 03:00 AM IST
2 ಎಸ್ ಜಿ ಪಿ 1:ಸಿರುಗುಪ್ಪ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದ ಕಾಳಿಂಗಪ್ಪ ಅವರ ಜಮೀನಿನಲ್ಲಿ ಬೆಳೆದ ಸಾಸಿವೆ ಬೆಳೆಯನ್ನು ವೀಕ್ಷಿಸಿದ ಕೃಷಿ ಅಧಿಕಾರಿಗಳು. | Kannada Prabha

ಸಾರಾಂಶ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಕಟಾವಿನ ನಂತರ ಕಡಿಮೆ ನೀರು ಬಳಸಿ ಸಾಸಿವೆಯನ್ನು ಪ್ರಮುಖ ಪರ್ಯಾಯ ಬೆಳೆಯಾಗಿ ಬೆಳೆಯಬಹುದು ಎನ್ನುವುದನ್ನು ಇಲ್ಲಿನ ರೈತರು ನಿರೂಪಿಸಿದ್ದಾರೆ.

ಮಲ್ಲಿಕಾರ್ಜುನ ಎಚ್.

ಸಿರುಗುಪ್ಪ: ತಾಲೂಕಿನ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಕಟಾವಿನ ನಂತರ ಕಡಿಮೆ ನೀರು ಬಳಸಿ ಸಾಸಿವೆಯನ್ನು ಪ್ರಮುಖ ಪರ್ಯಾಯ ಬೆಳೆಯಾಗಿ ಬೆಳೆಯಬಹುದು ಎನ್ನುವುದನ್ನು ಇಲ್ಲಿನ ರೈತರು ನಿರೂಪಿಸಿದ್ದಾರೆ.

ನೀರಾವರಿ ಕೊರತೆಯಿರುವಾಗ ಅಥವಾ ಭತ್ತದ ಕಟಾವಿನ ನಂತರ ಭೂಮಿಯಲ್ಲಿ ಇರುವ ತೇವಾಂಶ ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಈ ಬೆಳೆ ಬೆಳೆಯಲು ಸಾಧ್ಯವಿದೆ. ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳ ಬದಲಾವಣೆಗಾಗಿ ಎರಡನೇ ಬೆಳೆಗೆ ನೀರಿಲ್ಲದಂತಾಗಿದೆ. ಹೀಗಾಗಿ ಬೇಸಿಗೆಯಲ್ಲಿ ಭತ್ತದ ಬೆಳೆಗೆ ನೀರು ಲಭ್ಯವಿಲ್ಲದ ಕಾರಣ ಈ ಭಾಗದ ರೈತರು ಭತ್ತದ ಕಟಾವು ನಂತರ ತೇವಾಂಶ ಮತ್ತು ಕಡಿಮೆ ನೀರನ್ನು ಬಳಸಿಕೊಂಡು ಭತ್ತ ಬೆಳೆಯುವ ಅನೇಕ ರೈತರು ಬೇಸಿಗೆ ಬೆಳೆಯಾಗಿ ಸಾಸಿವೆ ಬೆಳೆದಿರುವುದು ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭದ ನಿರೀಕ್ಷೆ ವರದಾನವಾಗಿದೆ.

ತಾಲೂಕಿನ ತುಂಗಭದ್ರಾ ನದಿಯ ಪಕ್ಕದಲ್ಲಿನ ಮತ್ತು ಕಾಲುವೆ ನೀರು ಆಶ್ರಯಿತ ಕೊಳವೆಬಾವಿ ಕೆರೆ ನೀರು ಸೌಲಭ್ಯ ಇರುವ ಪ್ರದೇಶದ ನೂರಾರು ರೈತರು ಸಾವಿರಾರು ಎಕರೆಯಲ್ಲಿ ಈ ವರ್ಷ ಸಾಸಿವೆ ಬೆಳೆ ಬೆಳೆದಿದ್ದಾರೆ. ಭತ್ತದ ಬೆಳೆ ಹಚ್ಚ ಹಸಿರಿನಿಂದ ಕಂಗೊಳಿಸಿದರೆ, ಈಗ ಹಳದಿ ಮಿಶ್ರಿತ ಹಸಿರು ಬಣ್ಣದ ಸಾಸಿವೆಯ ಹೂಗಳು ಕಣ್ಮನ ಸೆಳೆಯುತ್ತಿವೆ.

ಭತ್ತದ ಕಟಾವು ಹಂತದಲ್ಲಿರುವಾಗ ಒಂದು ಎಕರೆಗೆ 2 ಕೆಜಿ ಸಾಸಿವೆ ಬೀಜಗಳನ್ನು ಎರಚಿದ್ದೆವು. ಮಧ್ಯದಲ್ಲಿ ಒಂದು ಬಾರಿ ಯೂರಿಯ ಸಿಂಪರಣೆ ಮಾಡಿದ್ದೇನೆ. ಭತ್ತದ ಗದ್ದೆಯಲ್ಲಿದ್ದ ತೇವಾಂಶ ಹಾಗೂ ಈ ಬಾರಿ ಚಳಿಯು ಈ ಬೆಳೆಗೆ ಸಹಕಾರಿಯಾಗಿದೆ. ಬೀಜ ಹಾಕಿದಾಗಿನಿಂದ ಇಲ್ಲಿಯವರೆಗೆ ನೀರು ಹರಿಸಿಲ್ಲ. ತೇವಾಂಶದಿಂದ ಕೊಯ್ಲಿಗೆ ಬಂದಿದೆ. 75 ರಿಂದ 85 ದಿನಗಳವರೆಗೆ ಬೆಳೆ ಬರುತ್ತದೆ. ಪ್ರತಿ ಎಕರೆಗೆ ₹2000 ವರೆಗೆ ಖರ್ಚು ಬರುತ್ತದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹7 ರಿಂದ 8 ಸಾವಿರ ಬೆಲೆ ಇದೆ. ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವ ನಿರೀಕ್ಷೆ ಇದೆ ಎನ್ನುತ್ತಾರೆ ಪ್ರಗತಿಪರ ರೈತರಾದ ರವಿ, ಅಂಜಿನಪ್ಪ, ಕಾಳಿಂಗಪ್ಪ.

ಸಾಸಿವೆ ಬೆಳೆಗೆ ಕೀಟ ಹಾಗೂ ರೋಗಗಳ ಬಾಧೆಗೆ ಇಲ್ಲ. ಕಡಿಮೆ ವೆಚ್ಚದಲ್ಲಿ ಬೇಸಾಯ ಮಾಡಬಹುದಾಗಿದೆ. ಪರ್ಯಾಯ ಬೆಳೆಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಮಣ್ಣಿನ ಸವಕಳಿ ತಡೆಯುತ್ತದೆ. ಮುಂದಿನ ಬೆಳೆಗೆ ಅನುಕೂಲಕರವಾಗುತ್ತದೆ. ಈ ಎಣ್ಣೆ ಕಾಳಿನ ಬೆಳೆಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದ್ದು, ಶೂನ್ಯ ಬಂಡವಾಳದಲ್ಲಿನ ಕೃಷಿ ರೈತರ ಆರ್ಥಿಕತೆ ಹೆಚ್ಚಿಸುತ್ತದೆ. ಈ ಬಾರಿ ಸಾಸಿವೆ ಬೆಳೆಗೆ ಚಳಿಗಾಲದ ವಾತಾವರಣ ತುಂಬ ಅನುಕೂಲಕರವಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ.

ಹಿಂಗಾರಿನಲ್ಲಿ ಭತ್ತಕ್ಕೆ ಸಾಸಿವೆ ಕೃಷಿ ಪರ್ಯಾಯವಾಗಿದೆ. ರೈತರ ಆರ್ಥಿಕತೆಯ ಆಶಾಕಿರಣವಾಗಿ ಭತ್ತಕ್ಕೆ ಬದಲಾಗಿ ಸಾಸಿವೆ ಬೆಳೆ ಬೆಳೆದು ಪ್ರತಿಯೊಬ್ಬ ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಕೆಮಿಕಲ್‌ ಫ್ಯಾಕ್ಟರಿಗಳ ಮೇಲೀಗ ಪೊಲೀಸರಿಂದ ಅಲರ್ಟ್‌
2000 ಬೋಧಕ ಹುದ್ದೆ ಭರ್ತಿಗೆ ಅಸ್ತು : ನೇರ ನೇಮಮಾತಿ ಮೂಲಕ ಭರ್ತಿ