ಸೈಕಲ್ ಎಡೆಕುಂಟೆ ಮೋರೆ ಹೋದ ರೈತರು

KannadaprabhaNewsNetwork | Published : Jun 28, 2024 12:51 AM

ಸಾರಾಂಶ

ಕೂಲಿಕಾರರ ಕೊರತೆ ಹಾಗೂ ಎತ್ತುಗಳ ಕೊರತೆಯ ಹಿನ್ನೆಲೆ ಹೊಲದಲ್ಲಿ ಬೆಳೆಗಳ ನಡುವೆ ಇರುವ ಕಳೆ ತೆಗೆಯಲು ರೈತರು ಸೈಕಲ್ ಎಡೆಕುಂಟೆ ಬಳಸುತ್ತಿದ್ದು, ಇದು ಅವರಿಗೆ ತುಂಬಾ ಸಹಕಾರಿಯಾಗಿದೆ.

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಕೂಲಿಕಾರರ ಕೊರತೆ ಹಾಗೂ ಎತ್ತುಗಳ ಕೊರತೆಯ ಹಿನ್ನೆಲೆ ಹೊಲದಲ್ಲಿ ಬೆಳೆಗಳ ನಡುವೆ ಇರುವ ಕಳೆ ತೆಗೆಯಲು ರೈತರು ಸೈಕಲ್ ಎಡೆಕುಂಟೆ ಬಳಸುತ್ತಿದ್ದು, ಇದು ಅವರಿಗೆ ತುಂಬಾ ಸಹಕಾರಿಯಾಗಿದೆ.

ಕೃಷಿ ಚಟುವಟಿಕೆಯಲ್ಲಿ ದುಡಿಯುವರ ಸಂಖ್ಯೆ ಕಡಿಮೆಯಾಗುತ್ತಿದೆ. ರೈತರ ಮನೆಯಲ್ಲಿ ಎತ್ತುಗಳ ಸಂಖ್ಯೆಯು ಕಡಿಮೆಯಾದ ಪರಿಣಾಮವಾಗಿ ಕೂಲಿಕಾರರು ಹಾಗೂ ಎತ್ತುಗಳ ಗಳೆಯು ಕಳೆ ತೆಗೆಯಲು ಸಿಗುತ್ತಿಲ್ಲ. ಈ ಸೈಕಲ್ ಎಡೆಕುಂಟೆಯಿಂದ ಆ ಕೆಲಸ ಮಾಡಿಕೊಳ್ಳಬಹುದಾಗಿದೆ.

ಈ ಸೈಕಲ್‌ ಎಡೆ ಕುಂಟೆಗೆ ಸರಳ ಮತ್ತು ಸುಲಭ ವಿಧಾನವಾಗಿದೆ. ಮುಂಗಾರು ಬೆಳೆಗಳಾದ ಹೆಸರು, ತೊಗರಿ ಇತ್ಯಾದಿ ಬೆಳೆಗಳಲ್ಲಿ ಕಸ ತೆಗೆಯಲು ಕೂಲಿಯಾಳು ಕೊರತೆ ಎದುರಾಗಿದೆ. ಪ್ರತಿ ಕೂಲಿಯಾಳುವಿಗೆ ಸುಮಾರು ₹ 400 ಕೊಡಬೇಕಾಗಿದ್ದು, ಒಟ್ಟು ಗಳೆ ಬಾಡಿಗೆಯು ಸಾವಿರಾರು ರೂಪಾಯಿಯು ಆಗಲಿದ್ದು, ಇದು ರೈತರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಸರಿಯಾದ ಸಮಯಕ್ಕೆ ಕೂಲಿಯಾಳುಗಳು ಸಹ ಲಭ್ಯವಾಗುವುದಿಲ್ಲ. ಈ ಹಿನ್ನೆಲೆ ಸರ್ಕಾರವು ನೂತನ ತಂತ್ರಜ್ಞಾನ ಬಳಸಿ ಸೈಕಲ್ ಎಡೆಕುಂಟೆಯನ್ನು ಹೊರತಂದಿದ್ದು, ಈ ಸೈಕಲ್ ಎಡೆಕುಂಟೆಗಳು ಕೃಷಿ ಇಲಾಖೆಯಲ್ಲಿ ಲಭ್ಯವಿವೆ. ಇದಕ್ಕೆ ಈಗ ಬೇಡಿಕೆ ಬಂದಿದೆ. ಇದನ್ನು ಬಳಸಿ ಹೊಲದಲ್ಲಿನ ಬೆಳೆಗಳ ನಡುವೆ ಇರುವ ಕಳೆ ತೆಗೆಯಬಹುದು. ಈ ಕುಂಟೆ ಹಗುರವಾಗಿದ್ದು, ಒಬ್ಬರೆ ಇದನ್ನು ನಿರ್ವಹಿಸಲು ಸಾಧ್ಯವಿದೆ. ಸರಳ, ಸುಲಭವಾಗಿ ಇದರಿಂದ ಕಳೆ ತೆಗೆಯಬಹುದು. ಎತ್ತುಗಳನ್ನು ಬಳಸಿ ಎಡೆ ಕುಂಟೆ ಹೊಡೆಯಲು ಮೂರ್ನಾಲ್ಕು ಕೃಷಿ ಕೂಲಿ ಕಾರ್ಮಿಕರು ಬೇಕು. ಇದಕ್ಕೆ ದುಬಾರಿ ಖರ್ಚು ಭರಿಸುವುದು ಅನಿವಾರ್ಯ. ಕೂಲಿಯ ದರ ಗಗನಕ್ಕೇರಿದೆ. ಮತ್ತೊಂದೆಡೆ ಕೃಷಿ ಚಟುವಟಿಕೆಗೆ ಕೂಲಿ ಕಾರ್ಮಿಕರನ್ನು ಹುಡುಕುವುದು ಹರಸಾಹಸ ಎನಿಸಿದೆ. ಬಾಡಿಗೆ ಎತ್ತುಗಳನ್ನು ಪಡೆದು, ಕೃಷಿ ಕೂಲಿಕಾರ್ಮಿಕರಿಗೂ ದಿನಗೂಲಿ ನೀಡಿ ಎಡೆ ಕುಂಟೆ ಹೊಡೆಯುವುದು ಬಡ ಹಾಗೂ ಸಣ್ಣ ರೈತರಿಗೆ ಕಷ್ಟವಾಗಿದೆ. ರೈತರ ಇಂತಹ ಕಷ್ಟಗಳಿಗೆ ಸೈಕಲ್ ಎಡೆ ಕುಂಟೆ ಪರಿಹಾರವಾಗಿದೆ ಎನ್ನಬಹುದು.

ನಾನು ಎರಡು ಎಕರೆಯ ಹೊಲ ಹೊಂದಿದ್ದು, ಎರಡು ದಿನಗಳಲ್ಲಿ ಬೆಳೆಗಳ ನಡುವೆ ಬೆಳೆದ ಕಸ ತೆಗೆದಿದ್ದೇನೆ. ಇದರಿಂದಾಗಿ ನನಗೆ ಸಾವಿರಾರು ರೂಪಾಯಿ ಖರ್ಚು ಉಳಿದಿದೆ. ಇದು ಲಾಭದಾಯಕವಾಗಿದೆ ಎಂದು ಕೇಸೂರು ರೈತ ಶರಣಪ್ಪ ಗುರಿಕಾರ ತಿಳಿಸಿದ್ದಾರೆ.

ಈ ಸೈಕಲ್ ಎಡೆಕುಂಟೆಯಿಂದ ಹೊಲದಲ್ಲಿ ಬೆಳೆದ ಕಳೆ ತೆಗೆಯುವುದು ಸುಲಭ. ಕಡಿಮೆ ಖರ್ಚು, ಒಬ್ಬರೇ ಹೊಲದಲ್ಲಿನ ಕಳೆ ತೆಗೆಯಬಹುದು. ಈ ಸೈಕಲ್ ಕೂಲಿಯಾಳುಗಳ ಕೊರತೆ ನೀಗಿಸುತ್ತದೆ. ಹಳೆಯ ಸೈಕಲ್‌ಗಳು ಇದ್ದರೆ ಎಡೆಕುಂಟೆಯನ್ನು ತಯಾರಿಸಿಕೊಳ್ಳಬಹುದು, ಇಲ್ಲವಾದರೆ ಸೈಕಲ್‌ ಎಡೆಕುಂಟೆಗಳು ಇಲಾಖೆಯಲ್ಲಿ ದೊರೆಯುತ್ತಿದ್ದು, ಖರೀದಿಸಬಹುದಾಗಿದೆ ಎಂದು

ಕೃಷಿ ಸಹಾಯಕ ನಿರ್ದೇಶಕ ಅಜಮೀರ್ ಅಲಿ ಮಾಹಿತಿ ನೀಡಿದ್ದಾರೆ.

Share this article