ಅಡಕೆ ಆಮದು ನಿಂತರೆ ಬೆಳೆಗಾರರಿಗೆ ನೆಮ್ಮದಿ: ಶಾಸಕ ಗೋಪಾಲಕೃಷ್ಣ ಬೇಳೂರು

KannadaprabhaNewsNetwork | Published : Jun 15, 2024 1:09 AM

ಸಾರಾಂಶ

ಸಾಗರದ ಎಪಿಎಂಸಿ ಆವರಣದಲ್ಲಿ ಆಸ್ಮಾ ಸಂಸ್ಥೆಗೆ ಸಿಗಂದೂರು ಧರ್ಮದರ್ಶಿ ಡಾ.ರಾಮಪ್ಪ, ಶಾಸಕ ಗೋಪಾಲಕೃಷ್ಣ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಒಗ್ಗೂಡಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸಾಗರ

ವ್ಯಾಪಾರದಲ್ಲಿ ಎಚ್ಚರಿಕೆ, ನಂಬಿಕೆ, ಪರಸ್ಪರ ಸೌಹಾರ್ದತೆ ಮುಖ್ಯವಾಗಿದ್ದು, ಎಲ್ಲರೂ ಒಟ್ಟಾಗಿ ಕೈ ಜೋಡಿಸಿದಲ್ಲಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಬಹುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ನಡೆದ ಆರ್ಯ ಅಡಕೆ ಬೆಳೆಗಾರರು ಮತ್ತು ವ್ಯಾಪಾರಸ್ಥರು (ಆಗ್ಮಾ) ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಥೆಗಳನ್ನು ಆರಂಭಿಸುವಾಗ ಇರುವ ವ್ಯವಸ್ಥೆ, ಪದ್ಧತಿಗಳು ಮುಂದಿನ ದಿನಗಳಲ್ಲಿಯೂ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದರು.

ಬೆಳೆಗಾರರು, ಗ್ರಾಹಕರೊಂದಿಗೆ ಉತ್ತಮ ಒಡನಾಟ, ವಿಶ್ವಾಸಾರ್ಹತೆ ಇಟ್ಟುಕೊಂಡಾಗ ಇತರರಿಗೆ ಮಾದರಿಯಾಗಿ ನಿಲ್ಲಲು ಸಾಧ್ಯ ಎಂದ ಅವರು, ಅಡಕೆ ಆಮದು ನಿಲ್ಲಿಸಿದರೆ ನಮ್ಮ ಬೆಳೆಗಾರರು ನೆಮ್ಮದಿಯ ಬದುಕು ಸಾಗಿಸಬಹುದು. ಅಲ್ಲದೆ ನೂತನ ಮಾದರಿಯ ಅಡಕೆ ಬೆಳೆಗೆ ಈಗಾಗಲೇ ಹೊರ ರಾಜ್ಯಗಳು ಮುಂದಾಗಿವೆ. ನಮ್ಮಲ್ಲಿಯೂ ಈ ಮಾದರಿ ಜಾರಿಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಸಿಗಂದೂರು ದೇವಸ್ಥಾನದ ಧರ್ಮದರ್ಶಿ ಡಾ.ಎಸ್.ರಾಮಪ್ಪನವರು, ಇಂದು ಎಲ್ಲ ಕ್ಷೇತ್ರದಲ್ಲಿಯೂ ಸ್ಪರ್ಧೆ ಇದೆ. ಹಾಗಾಗಿ ಅವುಗಳನ್ನು ಎದುರಿಸಿ, ಮುನ್ನುಗ್ಗಿದಾಗ ಯಶಸ್ಸು ಕಾಣಲು ಸಾಧ್ಯ. ಇತ್ತೀಚಿನವರೆಗೂ ಹಿಂದುಳಿದಿದ್ದ ನಮ್ಮ ಸಮಾಜ ಇಂದು ಜಾಗೃತರಾಗಿ ಬದುಕು ಕಟ್ಟಿಕೊಳ್ಳುತ್ತಿದೆ. ಸಮಾಜವೊಂದು ಮಾದರಿಯಾಗಿ ಬೆಳೆಯಬೇಕಾದಲ್ಲಿ ಅಡೆತಡೆಗಳು ಸಾಮಾನ್ಯ. ಅದನ್ನು ಎದುರಿಸಿ ನಿಂತಾಗಲೇ ನಮ್ಮಲ್ಲಿ ಶಕ್ತಿ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ನಾವೆಲ್ಲ ಶ್ರಮಿಸೋಣ ಎಂದು ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಪಾಲುದಾರರಾದ ಕಲಸೆ ಶಿವಪ್ಪ, ಮರಸ ಮಂಜಪ್ಪ, ವಿ.ಸಿ.ಶಿವಪ್ಪ, ಟಿ.ಪರಮೇಶ್ವರಪ್ಪ, ರಾಮಪ್ಪ ಕಾಗೋಡು, ಎಚ್.ಆರ್. ರವಿ ಕುಮಾರ್, ಪ್ರಮುಖರಾದ ದಿನೇಶ್ ಬರದವಳ್ಳಿ, ಬಿ. ಮಂಜುನಾಥ, ಮಧುಕರ ನರಸಿಂಹ ಹೆಗಡೆ, ಇಂದುಧರಗೌಡ, ಎಂ.ವೀರಪ್ಪ, ಮೋಹನ ಗೌಡ, ನಿರಂಜನ ಕೋರಿ, ಮೊದಲಾದವರು ಉಪಸ್ಥಿತರಿದ್ದರು.

Share this article