ವರ್ಷ ಕಳೆದರೂ ಪ್ರಾರಂಭವಾಗದ ಡಾ. ಅಂಬೇಡ್ಕರ್ ವಸತಿ ಶಾಲೆ

KannadaprabhaNewsNetwork |  
Published : Jun 15, 2024, 01:09 AM IST
ಸರ್ ನಮಸ್ಕಾರ ಈ ಸುದ್ದಿ, ಫೋಟೋ ಅತಿಮುಖ್ಯ | Kannada Prabha

ಸಾರಾಂಶ

ನೊಣವಿನಕೆರೆ ಹೋಬಳಿಯ ಕಂಪಾರಹಳ್ಳಿಯಲ್ಲಿ ವಸತಿ ಶಾಲೆಯನ್ನು ನಿರ್ಮಿಸಲಾಗಿದೆ. ಉತ್ತಮ ಸೌಲಭ್ಯವಿರುವ ಹಾಸ್ಟೆಲ್, ಶಾಲಾ ಕಟ್ಟಡಗಳು, ವಸತಿ ಸಂಕೀರ್ಣ, 13 ವಸತಿ ನಿಲಯಗಳು, ಸಿಬ್ಬಂದಿಗೆ ಕೊಠಡಿ, ಸಭಾ ಭವನ, ಪ್ರಾಂಶುಪಾಲರ ಕೊಠಡಿ, ಬೋಧಕ ಬೋಧಕೇತರ ಸಿಬ್ಬಂದಿಗೆ ಕೊಠಡಿ, ಭೋಜನಾಲಯ ಸೇರಿ ವಿಶಾಲವಾದ ವಾತಾವರಣದಲ್ಲಿ ವಸತಿ ಶಾಲೆಯು ಉದ್ಘಾಟನೆಯನ್ನೂ ಕಂಡಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ಬಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿರುವ ಪ್ರತಿಬಾವಂತ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದೆಂಬ ದೃಷ್ಟಿಯಿಂದ ಸರ್ಕಾರ ರಾಜ್ಯಾದ್ಯಂತ ಕೋಟ್ಯಾಂತರ ರು. ವೆಚ್ಚದಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಿ, ಉತ್ತಮ ಭವಿಷ್ಯವನ್ನು ರೂಪಿಸುತ್ತಿರುವುದು ಒಂದು ಕಡೆಯಾದರೆ, ತಿಪಟೂರು ತಾಲೂಕಿನಲ್ಲಿ ಬರೋಬರಿ 21 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿ ವರ್ಷದ ಹಿಂದೆ ಉದ್ಘಾಟನೆಗೊಂಡಿರುವ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ಕೊನೇಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸದೇ ಅನ್ಯಾಯ ಎಸಗಲಾಗುತ್ತಿದೆ ಎಂದು ಮಕ್ಕಳ ಪೋಷಕರು ತಾಲೂಕು ಹಾಗೂ ಜಿಲ್ಲಾ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು! ತಿಪಟೂರು ತಾಲೂಕಿನ ನೊಣವಿನಕೆರೆಗೆ 2017-18ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಮಂಜೂರಾಗಿತ್ತು. ಆದರೆ ಈ ಹೋಬಳಿಯಲ್ಲಿ ಶಾಲೆ ನಡೆಸಲು ಯಾವುದೇ ಉತ್ತಮ ಮೂಲಭೂತ ಸೌಲಭ್ಯವಿರುವ ಕಟ್ಟಡ ದೊರೆಯದ ಕಾರಣ ತಾಲೂಕಿನ ಕೊನೇಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಂಯೋಜನೆಗೊಳಿಸಿ ಶಾಲೆಯನ್ನು ಆರಂಭಿಸಲಾಗಿತ್ತು. ತದನಂತರ ನೊಣವಿನಕೆರೆ ಹೋಬಳಿಯ ಕಂಪಾರಹಳ್ಳಿ ಎಂಬ ಗ್ರಾಮದಲ್ಲಿ ಬರೋಬರಿ 21ಕೋಟಿ ರು. ವೆಚ್ಚದಲ್ಲಿ ಡಾ. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯನ್ನು ನೂತನವಾಗಿ ನಿರ್ಮಿಸಿ, ಕಳೆದ ವರ್ಷದ ಮಾರ್ಚ್(2023)ನಲ್ಲಿ ಆಗಿನ ಶಿಕ್ಷಣ ಸಚಿವರ ನೇತೃತ್ವದಲ್ಲಿ ಉದ್ಘಾಟನೆಗೊಂಡಿದ್ದರೂ ಇದುವರೆಗೆ ಮಕ್ಕಳಿಗೆ ಪ್ರಯೋಜನಕ್ಕೆ ಬಂದಿಲ್ಲ.

ತಾಲೂಕಿನ ಕೊನೇಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಒಟ್ಟು ಬಾಲಕ ಹಾಗೂ ಬಾಲಕಿಯರು ಸೇರಿ 250 ಮಕ್ಕಳಿಗೆ ಮಾತ್ರ ಸ್ಥಳಾವಕಾಶವಿದ್ದು, ಇದರಲ್ಲಿ 125 ಬಾಲಕಿಯರಿಗೆ, 125 ಬಾಲಕರಿಗೆ ಮಾತ್ರ ವಸತಿ ವ್ಯವಸ್ಥೆ ಇದೆ. ಆದರೆ ಇದೇ ಶಾಲೆಯಲ್ಲೇ ಸಂಯೋಜನೆಗೊಂಡಿರುವ ಡಾ. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲೂ 250 ಬಾಲಕಿಯರು ದಾಖಲಾಗಿ ವ್ಯಾಸಂಗ ಮಾಡುತ್ತಿದ್ದು, 125 ವಿದ್ಯಾರ್ಥಿನಿಯರ ವಸತಿ ಕಟ್ಟಡದಲ್ಲಿ ಒಟ್ಟು 375 ವಿದ್ಯಾರ್ಥಿನಿಯರು ಇರಬೇಕಾದ ಅನಿವಾರ್ಯತೆ ಉಂಟಾಗಿದೆ. ಹಾಗಾಗಿ ಎಲ್ಲ ಬಾಲಕಿಯರಿಗೂ ಹಾಸ್ಟೆಲ್‌ನಲ್ಲಿ ಮೂಲಭೂತ ಸೌಲಭ್ಯಗಳ ಜೊತೆ ಶೌಚಾಲಯ, ಸ್ನಾನಗೃಹಗಳ ಕೊರತೆಯೂ ವಿಪರೀತವಾಗಿದ್ದು, ಆರೋಗ್ಯ ಸಮಸ್ಯೆ ಕಾಡುತ್ತಿರುವುದಲ್ಲದೇ, ಉತ್ತಮ ಭೋದನಾ ಸಮಸ್ಯೆಯೂ ಕಾಡುತ್ತಿದೆ. ಹಾಗಾಗಿ ಈ ಶಾಲೆಯ ಶಿಕ್ಷಕರು ಉಳಿದುಕೊಳ್ಳಲಿರುವ ವಸತಿ ಗೃಹಗಳು, ಕಾರಿಡಾರ್ ಮತ್ತು ಮರಗಳ ಕೆಳಗಡೆಯೂ ಮಕ್ಕಳಿಗೆ ಪಾಠ ಮಾಡಲಾಗುತ್ತಿದ್ದು, ಮಳೆ, ಬಿಸಿಲಿನಲ್ಲಿ ವಿದ್ಯಾರ್ಥಿಗಳಿಗೂ ಹಾಗೂ ಶಿಕ್ಷಕರಿಗೂ ತುಂಬಾ ತೊಂದರೆಯಾಗುತ್ತಿದೆ.ಕಂಪಾರಹಳ್ಳಿ ವಸತಿ ಶಾಲೆ ಪ್ರಾರಂಭಿಸಲು ಮೀನಮೇಷ:

ನೊಣವಿನಕೆರೆ ಹೋಬಳಿಯ ಕಂಪಾರಹಳ್ಳಿಯಲ್ಲಿ ವಸತಿ ಶಾಲೆಯನ್ನು ನಿರ್ಮಿಸಲಾಗಿದೆ. ಉತ್ತಮ ಸೌಲಭ್ಯವಿರುವ ಹಾಸ್ಟೆಲ್, ಶಾಲಾ ಕಟ್ಟಡಗಳು, ವಸತಿ ಸಂಕೀರ್ಣ, 13 ವಸತಿ ನಿಲಯಗಳು, ಸಿಬ್ಬಂದಿಗೆ ಕೊಠಡಿ, ಸಭಾ ಭವನ, ಪ್ರಾಂಶುಪಾಲರ ಕೊಠಡಿ, ಬೋಧಕ ಬೋಧಕೇತರ ಸಿಬ್ಬಂದಿಗೆ ಕೊಠಡಿ, ಭೋಜನಾಲಯ ಸೇರಿ ವಿಶಾಲವಾದ ವಾತಾವರಣದಲ್ಲಿ ವಸತಿ ಶಾಲೆಯು ಉದ್ಘಾಟನೆಯನ್ನೂ ಕಂಡಿದೆ. ಆದ್ದರಿಂದ ಕೊನೇಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೪೫೦ಕ್ಕೂ ಹೆಚ್ಚು ಮಕ್ಕಳಿರುವುದರಿಂದ ಎಲ್ಲರಿಗೂ ವಾಸ್ತವ್ಯ, ತರಗತಿ ಕೊಠಡಿಗಳ, ಕುಡಿಯುವ ನೀರು ಸೇರಿ ಶೌಚಾಲಯಗಳ ಸಮಸ್ಯೆ ವಿಪರೀತ ಎದುರಾಗಿರುವುದರಿಂದ ನಮ್ಮ ಮಕ್ಕಳ ಆರೋಗ್ಯ ಏರುಪೇರಾಗುತ್ತಿದೆ. ನಮ್ಮ ಮಕ್ಕಳನ್ನು ಕೂಡಲೇ ಕಂಪಾರಹಳ್ಳಿ ವಸತಿ ಶಾಲೆಗೆ ಸ್ಥಳಾಂತರಿಸುವಂತೆ ಮಕ್ಕಳ ಪೋಷಕರು ಒತ್ತಾಯಿಸಿದ್ದಾರೆ. ಕೂಡಲೇ ಜಿಲ್ಲಾಡಳಿತ ಸಂಬಂಧಿಸಿದ ಇಲಾಖೆಗಳ ಜೊತೆ ಚರ್ಚಿಸಿ, ನೂತನ ವಸತಿ ಶಾಲೆ ಆರಂಭಿಸುವುದಕ್ಕೆ ಸೂಕ್ತ ಕ್ರಮ ಜರುಗಿಸುವುದೋ ಕಾಯ್ದು ನೋಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ