ಶಿರಸಿ: ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ಕಾಮಗಾರಿಯ ಪ್ರಗತಿಯನ್ನು ಶಾಸಕ ಭೀಮಣ್ಣ ನಾಯ್ಕ ವೀಕ್ಷಿಸಿದರು.ಹಳೆ ಬಸ್ ನಿಲ್ದಾಣದ ಕಟ್ಟಡವನ್ನು ತೆರವುಗೊಳಿಸಿ, ಕಳೆದ ಕೆಲ ವರ್ಷಗಳ ಹಿಂದೆ ಹೊಸ ಬಸ್ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಾರಣಾಂತರಗಳಿಂದ ವಿಳಂಬವಾಗಿದ್ದ ಕೆಲಸ ಈಗ ಪುನಃ ವೇಗ ದೊರೆತಿದ್ದು, ಇದರಿಂದ ಶುಕ್ರವಾರ ಶಾಸಕರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿದರು.ನಂತರ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ಶಿರಸಿಯಲ್ಲಿ ನೂತನ ಬಸ್ ನಿಲ್ದಾಣಕ್ಕೆ ಅನುದಾನ ಒದಗಿಸಿದ್ದರು. ಬಳಿಕ ಕಾರಣಾಂತರದಿಂದ ವಿಳಂಬವಾಗಿತ್ತು. ಆದರೆ ಈಗ ಜನರಿಗೆ ತೊಂದರೆಯಾಗುತ್ತಿರುವ ಕಾರಣ ೨- ೩ ಬಾರಿ ವೀಕ್ಷಣೆ ಮಾಡಿ ಬೇಗ ಮುಗಿಸಲು ಸೂಚನೆ ನೀಡಲಾಗಿದೆ. ಇನ್ನು ಸ್ವಲ್ಪ ಕೆಲಸ ಉಳಿದಿದ್ದು, ಅ. ೩೦ರೊಳಗೆ ಬಿಟ್ಟುಕೊಡುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.
ಹೊಸದಾಗಿ ನಿರ್ಮಾಣ ಆಗಿರುವ ಕಟ್ಟಡದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಯಾಗಿದೆ. ಪ್ರಯಾಣಿಕರಿಗೆ ಎಲ್ಲ ಸೌಲಭ್ಯ ಒಳಗೊಂಡ ಬಸ್ ನಿಲ್ದಾಣ ಸಿಗಲಿದೆ ಎಂದ ಭೀಮಣ್ಣ, ಶಿರಸಿ ವಿಭಾಗಕ್ಕೆ ಹೊಸದಾಗಿ ೪೫ ಬಸ್ಸುಗಳು ಬಂದಿದೆ. ಶಿರಸಿ ಘಟಕಕ್ಕೆ ೧೦ ಬಸ್ಸುಗಳನ್ನು ನೀಡಲಾಗಿದೆ. ಹೆಚ್ಚಿನ ಬಸ್ಸುಗಳಿಗೆ ಬೇಡಿಕೆ ಇಡಲಾಗಿದ್ದು, ಸಾರಿಗೆ ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ನಂತರ ಹೊಸದಾದ ಆರ್‌ಟಿಒ ಕಚೇರಿಗೆ ಭೇಟಿ ನೀಡಿ, ಗುಣಮಟ್ಟದ ಕೆಲಸ ಮಾಡಲು ಸೂಚನೆ ನೀಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸಾರಿಗೆ ಇಲಾಖೆಯ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, ಪ್ರಮುಖರಾದ ದೀಪಕ ದೊಡ್ಡೂರು, ಎಸ್.ಕೆ. ಭಾಗ್ವತ್, ಶ್ರೀನಿವಾಸ ನಾಯ್ಕ ಮತ್ತಿತತರು ಇದ್ದರು.