ದಾವಣಗೆರೆಗೆ ಕರ್ನಾಟಕ ಆಕ್ಸ್‌ಫರ್ಡ್ ಎಂಬ ಹೆಗ್ಗಳಿಕೆ ತಂದು ಕೊಟ್ಟ, ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ಸವ್ಯಸಾಚಿಯಂತೆ ಜೀವನ ಸಾಧನೆ ಮಾಡಿ ತಮ್ಮ 95ನೇ ವಯಸ್ಸಿನ ಶಿವೈಕ್ಯರಾದ ದಕ್ಷಿಣ ಶಾಸಕ, ಹಿರಿಯ ದಾನಿ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಜಿಲ್ಲಾ ವರದಿಗಾರರ ಕೂಟದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
- ವರದಿಗಾರರ ಕೂಟದಿಂದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಿ.ಎನ್. ಮಲ್ಲೇಶ ಶ್ಲಾಘನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆಗೆ ಕರ್ನಾಟಕ ಆಕ್ಸ್‌ಫರ್ಡ್ ಎಂಬ ಹೆಗ್ಗಳಿಕೆ ತಂದು ಕೊಟ್ಟ, ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ಸವ್ಯಸಾಚಿಯಂತೆ ಜೀವನ ಸಾಧನೆ ಮಾಡಿ ತಮ್ಮ 95ನೇ ವಯಸ್ಸಿನ ಶಿವೈಕ್ಯರಾದ ದಕ್ಷಿಣ ಶಾಸಕ, ಹಿರಿಯ ದಾನಿ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಜಿಲ್ಲಾ ವರದಿಗಾರರ ಕೂಟದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಕೆ.ಬಿ. ಬಡಾವಣೆಯ ವರದಿಗಾರರ ಕೂಟದಲ್ಲಿ ಮಂಗಳವಾರ ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪವೃಷ್ಟಿ ಮಾಡುವ ಮೂಲಕ ಸದಾ ಪತ್ರಕರ್ತರ ಬಗ್ಗೆ ಕಾಳಜಿ ತೋರುತ್ತಿದ್ದ ಶಾಮನೂರು ಕುಟುಂಬದ ಹಿರಿಯ ಜೀವಕ್ಕೆ ದೇವರು ಚಿರಶಾಂತಿ ದಯ ಪಾಲಿಸಲಿ, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿ, ಮೃತರ ಗೌರವಾರ್ತ ಒಂದು ನಿಮಿಷ ಮೌನ ಆಚರಿಸಲಾಯಿತು.ಕೂಟದ ಗೌರವಾಧ್ಯಕ್ಷ, ನಗರವಾಣಿ ಸಹ ಸಂಪಾದಕ ಬಿ.ಎನ್. ಮಲ್ಲೇಶ ಮಾತನಾಡಿ, ದಾವಣಗೆರೆ ಇತಿಹಾಸದಲ್ಲಿ ಮರೆಯಲಾರದ ಮೇರು ವ್ಯಕ್ತಿತ್ವದ, ಜಾತ್ಯಾತೀತ, ಧರ್ಮಾತೀತ, ನಿಕಲ್ಮಶ ವ್ಯಕ್ತಿ, ಅಜಾತಶತ್ರು ಶಾಸಕ ಶಾಮನೂರು ಶಿವಶಂಕರಪ್ಪ ಅವರಾಗಿದ್ದರು. ದಾವಣಗೆರೆ ಇತಿಹಾಸದಲ್ಲಿ ಇನ್ನೂ 100 ವರ್ಷವಲ್ಲ 500 ವರ್ಷ ಕಳೆದರೂ ಶಾಮನೂರು ಹೆಸರು ಅಜರಾಮರವಾಗಿರಲಿದೆ. ಶಿವಶಂಕರಪ್ಪನವರ ಅಪರಿಮಿತ ಜೀವನೋತ್ಸಾಹವೇ 95 ವರ್ಷಗಳ ಕಾಲ ಆರೋಗ್ಯವಾಗಿ ಬಾಳಲು ಕಾರಣ ಎಂದರು.
ಕೂಟದ ಹಿರಿಯ ಉಪಾಧ್ಯಕ್ಷ, ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ ಮಾತನಾಡಿ, ಶ್ರೀಮಂತ ಕುಟುಂಬದವರಾಗಿದ್ದರೂ ಸರಳಾಗಿದ್ದ, ಯಾರಿಗೂ ಕೇಡು ಬಯಸದೇ, ಎಲ್ಲರನ್ನೂ ಅಪ್ಪಿಕೊಳ್ಳುವ ವ್ಯಕ್ತಿಯಾಗಿದ್ದವರು ಶಾಮನೂರು. ಸರಳತೆ, ಸ್ನೇಹಜೀವಿ, ಶಾಮನೂರು ಶಿವಶಂಕರಪ್ಪನವರು. ಹೊಸಬರು, ಹಳಬರು, ನಮ್ಮವರು, ಬೇರೆಯವರು ಎನ್ನುವ ತಾರತಮ್ಯ ತೋರಿಸುತ್ತಿರಲಿಲ್ಲ. ಸದಾ ಸಾಂಪ್ರದಾಯಿಕ, ದೈವಿಕವಾಗಿದ್ದುಕೊಂಡೇ, ಯಾವುದೇ ವಿಷಯಕ್ಕೂ ರಾಜಿಯಾಗದೇ ನೇರನುಡಿಯ ವ್ಯಕ್ತಿತ್ವ ಹೊಂದಿದ್ದರು ಎಂದರು.ಹಿರಿಯ ಉಪಾಧ್ಯಕ್ಷ, ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ಮಂಜುನಾಥ ಗೌರಕ್ಕಳವರ್ ಮಾತನಾಡಿ, ದೇಶದ ಅತ್ಯಂತ ಹಿರಿಯ ರಾಜಕಾರಣಿ, ದಾವಣಗೆರೆ ಹೆಸರನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ದ ಕೀರ್ತಿ ಶಾಮನೂರರದ್ದು. ಇಂತಹ ಹಿರಿಯರ ಆದರ್ಶಗಳಲ್ಲಿ ಶೇ.10ರಷ್ಟು ನಾವು ಮೈಗೂಡಿಸಿಕೊಂಡು ಬದುಕಿದರೆ ನಮ್ಮ ಬದುಕು ಶಾಂತಿ ನೆಮ್ಮದಿಯಿಂದ ಕೂಡಿರುತ್ತದೆ. ಯಾರನ್ನೇ ಬರಿಗೈಯಲ್ಲಿ ವಾಪಸು ಕಳಿಸದ ವ್ಯಕ್ತಿ ಶಾಮನೂರು ಶಿವಶಂಕರಪ್ಪ. ದಾವಣಗೆರೆಯನ್ನು ವಿದ್ಯಾ ಕಾಶಿ ಮಾಡಿದ ಮೇರು ವ್ಯಕ್ತಿತ್ವದವರಾಗಿದ್ದರು ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೂಟದ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್.ಬಡದಾಳ್ ಮಾತನಾಡಿ, ಯಾವುದೇ ವಿಷಯಕ್ಕೂ ಸಿಟ್ಟಾಗದೇ ಎಲ್ಲರಿಗೂ ಒಳಿತನ್ನೇ ಮಾಡಿದವರು ಶಾಮನೂರು. ದಾವಣಗೆರೆಗೆ ದೊಡ್ಡ ಆಲದ ಮರದಂತೆ ಹೃದಯ ವೈಶಾಲ್ಯತೆ ಹೊಂದಿದ್ದರು. ಅವರ ಅಗಲಿಕೆ ಜಿಲ್ಲೆಗಷ್ಟೇ ಅಲ್ಲ, ರಾಜ್ಯಕ್ಕೂ ತುಂಬಲಾರದ ನಷ್ಟ. ಮುಂದಿನದ ದಿನಗಳಲ್ಲಿ ವರದಿಗಾರರ ಕೂಟಕ್ಕೆ ಜಾಗ ಮಂಜೂರಾದರೆ, ಅಲ್ಲಿ ನಿರ್ಮಿಸುವ ಪತ್ರಿಕಾ ಭವನಕ್ಕೆ ಶಾಮನೂರು ಶಿವಶಂಕರಪ್ಪನವರ ಹೆಸರನ್ನಿಡುವ ಬಗ್ಗೆ ಚರ್ಚಿಸಲಾಗುವುದು ಎಂದರು.ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಉಪಾಧ್ಯಕ್ಷ, ದೂರದರ್ಶನದ ಹಿರಿಯ ವರದಿಗಾರ ಎ.ಎಲ್.ತಾರಾನಾಥ, ಪಿಆರ್‌ಓ ಪಿ.ಎಸ್.ಲೋಕೇಶ, ನಿಂಗಪ್ಪ, ಮಹಮ್ಮದ್ ರಫೀಕ್, ನಟರಾಜ, ಡಾ.ಕೆ.ಜೈಮುನಿ, ಓ.ಎನ್.ಸಿದ್ದಯ್ಯ ಒಡೆಯರ್, ಕುಣಿಬೆಳಕೆರೆ ಸುರೇಶ, ಚನ್ನಬಸವ ಶೀಲವಂತ್, ಎಚ್.ಎಂ.ಪಿ.ಕುಮಾರ, ಸಿ.ಗಿರೀಶ, ಎಚ್.ಎಂ.ರಾಜೇಶ, ಮಲ್ಲಿಕಾರ್ಜುನ ಕೈದಾಳೆ, ಎ.ಪಿ. ಸಂಜಯ್ ಕುಂದುವಾಡ, ಬಿ.ಜಿ.ಮಹದೇವ, ಕಿರಣಕುಮಾರ, ಡಿ.ನೂರುಲ್ಲಾ, ಎನ್.ಲಿಂಗರಾಜ, ಮಹಾಂತೇಶ ಕುರಬೆಟ್, ಶಿವರಾಜ ಈಳಿಗೇರ, ಜಯಪ್ಪ, ಭಾಸ್ಕರ ಇತರರು ಇದ್ದರು.
- - --16ಕೆಡಿವಿಜಿ4, 5:
ದಾವಣಗೆರೆ ವರದಿಗಾರರ ಕೂಟದಲ್ಲಿ ಮಂಗಳವಾರ ದಿವಂಗತ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.