ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಜೆಡಿಎಸ್ ಕಾರ್ಯಕರ್ತರೊಬ್ಬರು ೨೫ ಗ್ರಾಂ ತೂಕದ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡುವ ಮೂಲಕ ಅಭಿಮಾನವನ್ನು ಮೆರೆದರು. ಇದು ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ನೀಡಿದ ದುಬಾರಿ ಗಿಫ್ಟ್ ಆಗಿದ್ದು ವಿಶೇಷವಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಜೆಡಿಎಸ್ ಕಾರ್ಯಕರ್ತರೊಬ್ಬರು ೨೫ ಗ್ರಾಂ ತೂಕದ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡುವ ಮೂಲಕ ಅಭಿಮಾನವನ್ನು ಮೆರೆದರು. ಇದು ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ನೀಡಿದ ದುಬಾರಿ ಗಿಫ್ಟ್ ಆಗಿದ್ದು ವಿಶೇಷವಾಗಿತ್ತು.

ಮುದಗಂದೂರು ಗ್ರಾಪಂ ಮಾಜಿ ಅಧ್ಯಕ್ಷ ಶಂಕರೇಗೌಡ ಅವರು ನೆಚ್ಚಿನ ನಾಯಕನಿಗೆ ದುಬಾರಿ ಉಡುಗೊರೆ ನೀಡಿದ ಕಾರ್ಯಕರ್ತರಾಗಿದ್ದಾರೆ. ಮೂರೂವರೆ ಲಕ್ಷ ರು. ಮೌಲ್ಯದ ೨೫ ಗ್ರಾಂ ತೂಕದ ಚಿನ್ನದ ಸರವನ್ನು ಸ್ವತಃ ತಂದು ಕುಮಾರಸ್ವಾಮಿ ಕೊರಳಿಗೆ ತೊಡಿಸಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದರು.

ಮಂಡ್ಯದ ವಿ.ಸಿ.ಫಾರಂ ಗೇಟ್ ಬಳಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ನಡೆದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ತಿನ್ನಿಸುವ ಜೊತೆಯಲ್ಲೇ ಚಿನ್ನದ ಸರವನ್ನೂ ತೊಡಿಸಿ ಎಲ್ಲರ ಗಮನಸೆಳೆದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನೂರಾರು ಮುಖಂಡರು-ಕಾರ್ಯಕರ್ತರು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅಭಿನಂದಿಸಿದರು.

ಕುಮಾರಸ್ವಾಮಿ ಅವರು ವಿ.ಸಿ.ಫಾರಂ ಗೇಟ್‌ಗೆ ಆಗಮಿಸುತ್ತಿದ್ದಂತೆಯೇ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಬೃಹತ್ ಹಾರ ಹಾಕಿ, ಮಂಗಳವಾದ್ಯ, ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ೨೦೨೮ರ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಅಭೂತಪೂರ್ವ ಜಯಗಳಿಸುವುದರೊಂದಿಗೆ ಎಚ್.ಡಿ.ಕುಮಾರಸ್ವಾಮಿ ನಾಡಿನ ಮುಖ್ಯಮಂತ್ರಿಯಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಸುರೇಶ್‌ಗೌಡ, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯ ಅಶೋಕ್ ಸೇರಿದಂತೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನೂರಾರು ಮುಖಂಡರು ಭಾಗವಹಿಸಿದ್ದರು.

ಮಾಜಿ ಸಿಎಂ ಎಚ್ಡಿಕೆ ಹುಟ್ಟುಹಬ್ಬ: ಅನ್ನದಾನಿ ನೇತೃತ್ವದಲ್ಲಿ ದೇಗುಲದಲ್ಲಿ ಪೂಜೆ

ಮಳವಳ್ಳಿ: ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಗಂಗಾಧರೇಶ್ವರ ದೇವಾಲಯದಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.

ಬೆಳಗ್ಗೆ ದೇಗುಲಕ್ಕೆ ಆಗಮಿಸಿದ ಮಾಜಿ ಶಾಸಕರು, ಜೆಡಿಎಸ್ ಮುಖಂಡರು, ಎಚ್.ಡಿ.ಕುಮಾರಸ್ವಾಮಿ ಹೆಸರಿನಲ್ಲಿ ಅರ್ಚನೆ ಮಾಡಿಸಿ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ, ಮುಂದಿನ ದಿನಗಳಲ್ಲಿ ರಾಜ್ಯದ ಸೇವೆ ಮಾಡಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ನಂತರ ಅಭಿಮಾನಿಗಳು, ಕಾರ್ಯಕರ್ತರಿಗೆ ಸಿಹಿ ವಿತರಿಸಿದರು. ಈ ವೇಳೆ ಪುರಸಭೆ ಮಾಜಿ ಸದಸ್ಯರಾದ ಪ್ರಶಾಂತ್, ನಂದಕುಮಾರ್, ಟಿಎಪಿಸಿಎಂಎಸ್ ಸದಸ್ಯ ರಾಜೇಶ್ , ಮುಖಂಡರಾದ ಮಧು ಸೇರಿದಂತೆ ಹಲವರು ಇದ್ದರು.