ಮನುಷ್ಯರ ಆರೋಗ್ಯ ಕಾಪಾಡಿದ ಪುಣ್ಯ ರೈತರಿಗೆ ಸಿಗಲಿದೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

KannadaprabhaNewsNetwork | Published : Jan 25, 2024 2:08 AM

ಸಾರಾಂಶ

ಪೂರಿಗಾಲಿ ಹನಿ ನೀರಾವರಿ ಮೂಲಕ ಸಾವಯವ ಕೃಷಿಯಲ್ಲಿ ಸಾಮೂಹಿಕ ಏಕ ಬೆಳೆ ಬೆಳೆದರೇ ಭೂಮಿ ಹಾಗೂ ಮನುಷ್ಯರ ಆರೋಗ್ಯವನ್ನು ಕಾಪಾಡಿದ ಪುಣ್ಯ ರೈತರಿಗೆ ಸಿಗಲಿದೆ. ಮಳೆಯನ್ನೇ ನಂಬಿದ ಬಹುತೇಕ ಪ್ರದೇಶಗಳಿಗೆ ಹಲವಾರು ನೀರಾವರಿ ಯೋಜನೆಗಳ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಬೊಪ್ಪೇಗೌಡನಪುರ(ಬಿ.ಜಿ.ಪುರ) ಹೋಬಳಿಗೆ ನೀರಾವರಿ ಕಲ್ಪಿಸುವ ಈ ಯೋಜನೆ ಜಾರಿ ಮಾಡಲು ಹಲವು ಅಧಿಕಾರಿಗಳು ಕೈಜೋಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪೂರಿಗಾಲಿ ಹನಿ ನೀರಾವರಿ ಮೂಲಕ ಸಾವಯವ ಕೃಷಿಯಲ್ಲಿ ಸಾಮೂಹಿಕ ಏಕ ಬೆಳೆ ಬೆಳೆದರೇ ಭೂಮಿ ಹಾಗೂ ಮನುಷ್ಯರ ಆರೋಗ್ಯವನ್ನು ಕಾಪಾಡಿದ ಪುಣ್ಯ ರೈತರಿಗೆ ಸಿಗಲಿದೆ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ತಾಲೂಕಿನ ನೆಲ್ಲಿಗೆರೆ ಗ್ರಾಮದಲ್ಲಿ ಜೈನ್ ಇರಿಗೇಷನ್ ಜಾರಿಗೊಳಿಸುತ್ತಿರುವ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯಡಿ ಕಾವೇರಿ ನೀರಾವರಿ ನಿಗಮದ ಆಯೋಜಿಸಿದ್ದ ಫಲಾನುಭವಿಗಳ ಜೊತೆ ಯೋಜನೆ ಉದ್ದೇಶ ಮತ್ತು ಆಧುನಿಕ ಕೃಷಿ ಪದ್ಧತಿಯ ಬಗ್ಗೆ ಚರ್ಚೆ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಳೆಯನ್ನೇ ನಂಬಿದ ಬಹುತೇಕ ಪ್ರದೇಶಗಳಿಗೆ ಹಲವಾರು ನೀರಾವರಿ ಯೋಜನೆಗಳ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಬೊಪ್ಪೇಗೌಡನಪುರ(ಬಿ ಜಿ ಪುರ) ಹೋಬಳಿಗೆ ನೀರಾವರಿ ಕಲ್ಪಿಸುವ ಈ ಯೋಜನೆ ಜಾರಿ ಮಾಡಲು ಹಲವು ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂದರು.

ಅತಿಯಾದ ರಾಸಾಯನಿಕ ವಸ್ತುಗಳನ್ನು ಬಳಸಿ ಬೆಳೆ ಬೆಳೆಯುತ್ತಿರುವುದರಿಂದ ರೋಗಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾವಯವ ಕೃಷಿಯಲ್ಲಿ ಬೆಳೆದ ಬೆಳೆಗೆ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಅತಿಯಾದ ಬೇಡಿಕೆ ಇದೆ. ಸಾವಯವ ಕೃಷಿ ಬೆಳೆಯಲು ಬಿಜಿಪುರ ಹೋಬಳಿಯ ಭೂಮಿ ಯೋಗ್ಯವಾಗಿದೆ. ರೈತರು ಸಹಕಾರ ನೀಡಿದರೇ ಕೃಷಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ಆರಂಭಿಸಿ ಹೆಚ್ಚು ಲಾಭ ಗಳಿಸಿಕೊಳ್ಳಬಹುದು ಎಂದರು.

ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ ನನಗೆ ಸಚಿನ ಸ್ಥಾನ ಕೈ ತಪ್ಪಿದ್ದ ಪ್ರತಿಫಲವಾಗಿ ಪೂರಿಗಾಲಿ ಹನಿ ನೀರಾವರಿ ಯೋಜನೆಯೂ ತಾಲೂಕಿಗೆ ಸಿಕ್ಕಿತ್ತು. ಮಳೆಯಾಶ್ರಿತ ಪ್ರದೇಶದಲ್ಲಿ ಹಸಿರು ಕಾಣಬೇಕೆಂಬ ಕನಸ್ಸು ನನಸಾಗುವ ಸಮಯ ಬಂದಿದೆ. ರೈತರು ಸಹಕಾರ ನೀಡಿದರೇ ಮಾತ್ರ ಯೋಜನೆ ಸಫಲತೆ ಕಾಣಲಿದೆ ಎಂದರು.

ನೀರು ಜಮೀನುಗಳಿಗೆ ತಲುಪಿದ್ದರೂ ಕೂಡ ಇಂದಿಗೂ ಯೋಜನೆ ಬಗ್ಗೆ ರೈತರಿಗೆ ಅರಿವಿಲ್ಲ. ಅರಿವು ಮೂಡಿಸುವ ಉದ್ದೇಶದಿಂದಲೇ ತೋಟಗಾರಿಕೆ, ನೀರಾವರಿ, ಕೃಷಿ ತಜ್ಞರನ್ನು ಕರೆಸಿ ರೈತರೊಂದಿಗೆ ಸಂವಾದ ಆಯೋಜಿಸಲಾಗುತ್ತಿದೆ. ರಾಜಕರಣ ಬದಿಗೊತ್ತಿ ದೂರಸೃಷ್ಠಿಯಿಂದ ರೈತರು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ವಿಸಿ ಫಾರ್ಮ್ ಕೃಷಿ ಯಂತ್ರೋಪಕರಣಗಳ ವಿಭಾಗದ ಮುಖ್ಯಸ್ಥೆ ಡಾ.ಶ್ರೀದೇವಿ, ಇಂದಿರಾ ಫುಡ್ಸ್ ನ ವ್ಯವಸ್ಥಾಪಕ ವಿಜಯ್ ಕುಮಾರ್ ಮಾತನಾಡಿದರು. ತೋಟಗಾರಿಕೆ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿ ಉಪ ನಿರ್ದೇಶಕ ರುದ್ರೇಶ್, ಜಿಲ್ಲಾ ಉಪ ನಿರ್ದೇಶಕಿ ರೂಪಾಶ್ರೀ, ಹಿರಿಯ ಸಹಾಯಕ ನಿರ್ದೇಶಕ ಶಾಂತರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ.ಎಸ್.ದೀಪಿಕ್, ಬೇಸಾಯ ತಜ್ಞ ಪಾಡರಂಗ ವಿಠಲ ಜೋಶಿ ಸೇರಿದಂತೆ ಇತರರು ಇದ್ದರು.

Share this article