ಹಾನಗಲ್ಲ: ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಗೊಬ್ಬರದ ಕೊರತೆಯಾಗುವುದಿಲ್ಲ ಎಂಬ ಭರವಸೆ ಇದ್ದು, ರೈತರು ಶಾಂತ ರೀತಿಯಿಂದ ಬಿತ್ತನೆ ಬೀಜ ಖರೀದಿಸಲು ಮುಂದಾಗಬೇಕು. ಅಲ್ಲದೆ, ಸಮಸ್ಯೆಗಳಿದ್ದರೆ ಕೂಡಲೆ ಕೃಷಿಕ ಸಮಾಜ ಅಥವಾ ಕೃಷಿ ಇಲಾಖೆ ಸಂಪರ್ಕಿಸಿ ಆತಂಕ ಸರಿಪಡಿಸಿಕೊಳ್ಳಬೇಕು ಎಂದು ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಕೆ.ಟಿ. ಕಲಗೌಡರ ತಿಳಿಸಿದರು.
ರೈತ ಸ್ನೇಹಿಯಾದ ಕೃಷಿ ಇಲಾಖೆಯೊಂದಿಗೆ ನಾವೆಲ್ಲ ಉತ್ತಮ ಸಂಬಂಧ ಹೊಂದಿರೋಣ. ಸರ್ಕಾರ ಹಾಗೂ ರೈತರ ನಡುವೆ ಕೊಂಡಿಯಾಗಿರುವ ಕೃಷಿ ಇಲಾಖೆಯಿಂದ ನಮಗೆ ಬರಬೇಕಾದ ಎಲ್ಲ ಸೌಲಭ್ಯಗಳನ್ನು ಪಡೆಯೋಣ. ಕೊರತೆಯಾದಲ್ಲಿ ಕೃಷಿ ಇಲಾಖೆಯ ಗಮನಕ್ಕೆ ತಂದು ಸರಿಪಡಿಸಿಕೊಳ್ಳೋಣ. ಅನಿವಾರ್ಯವಾದರೆ ನಮ್ಮ ಪ್ರತಿಭಟನೆ ಇತರೆ ಇರಲಿ. ಆದರೆ ಅನಗತ್ಯವಾಗಿ ಕೃಷಿ ಇಲಾಖೆಯ ಮೇಲೆ ಹರಿಹಾಯುವುದು ಬೇಡ. ಕೃಷಿ ಸಿಬ್ಬಂದಿ ನಮ್ಮ ಒಳಿತಿಗಾಗಿಯೇ ಕೆಲಸ ಮಾಡುತ್ತಾರೆ ಎಂದರು.
ತಾಲೂಕು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಮೆಕ್ಕೆಜೋಳ ಭತ್ತದ ಬಿತ್ತನೆ ಬೀಜಗಳು ಕೊರತೆಯಾಗದಂತೆ ಕೃಷಿ ಇಲಾಖೆ ಗಮನ ಕೊಡಬೇಕು. ಎಲ್ಲಿಯೂ ಬಿತ್ತನೆ ಬೀಜ ವಿತರಣೆಯಲ್ಲಿ ಗೊಂದಲಕ್ಕೆ ಅವಕಾಶ ನೀಡುವುದು ಬೇಡ. ರೈತರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಬಿತ್ತನೆ ಬೀಜ ದಾಸ್ತಾನು ಮಾಡಿ ವಿತರಿಸಬೇಕು. ಬಿತ್ತನೆ ಬೀಜದ ತಳಿಗಳ ಗುಣಮಟ್ಟದ ವಿಷಯದಲ್ಲಿ ಕೃಷಿ ಇಲಾಖೆ ಪರಿಶೀಲಿಸಿ ವಿತರಣೆ ಮಾಡಬೇಕು. ಯಾವುದೇ ಸಂದರ್ಭದಲ್ಲಿ ರೈತರಿಗೆ ಮೋಸವಾಗದಂತೆ ನಿಗಾವಹಿಸುವುದು ಕೃಷಿ ಇಲಾಖೆ ಮುಖ್ಯ ಜವಾಬ್ದಾರಿ ಎಂದು ಎಚ್ಚರಿಸಿದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಟಿ. ಸುರೇಶ ಮಾತನಾಡಿ, ಹಾನಗಲ್ಲ ತಾಲೂಕಿನ ೮ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಬಿತ್ತನೆ ಬೀಜದ ಯಾವುದೇ ರೀತಿಯ ಕೊರತೆ ಆಗದು. ಅದಕ್ಕಾಗಿ ಮುಂಜಾಗ್ರತೆವಹಿಸಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರೈತರ ಬೇಡಿಕೆಯನ್ನು ಪರಿಗಣಿಸಿಯೇ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದರು.