ಸ್ಥಳಕ್ಕೆ ನಗರ ಶಾಸಕ ನಾರಾ ಭರತ್ ರೆಡ್ಡಿ ಭೇಟಿ
ಕನ್ನಡಪ್ರಭ ವಾರ್ತೆ ಬಳ್ಳಾರಿಹಿಂಗಾರು ಹಂಗಾಮಿನ ಅವಧಿಯಲ್ಲಿ ಬೆಳೆದಿದ್ದ ಜೋಳವನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲು ನಿಗದಿಪಡಿಸಿದ್ದ ಮಿತಿಯನ್ನು ಹೆಚ್ಚಳಗೊಳಿಸುವಂತೆ ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಹಿಂದಕ್ಕೆ ಪಡೆದರು.
ಧರಣಿ ಸ್ಥಳಕ್ಕೆ ಆಗಮಿಸಿದ ನಗರ ಶಾಸಕ ನಾರಾ ಭರತ್ ರೆಡ್ಡಿ ರೈತರ ಮನವಿಯನ್ನು ಪುರಸ್ಕರಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಫೋನ್ ಮೂಲಕ ಮಾತಾಡಿ ಕೋರಿದರು. ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದ ಬಳಿಕ ಧರಣಿ ವಾಪಸ್ ಪಡೆಯಲಾಯಿತು.ಇದೇ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಕರೂರು, ಹಿಂಗಾರು ಹಂಗಾಮಿನಲ್ಲಿ ಜೋಳ ಖರೀದಿಸಲು ಆದೇಶ ಮಾಡಿರುವುದು ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಅನುಕೂಲವಾಗಿದೆ. ಉಳಿದ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಬೆಂಬಲ ಬೆಲೆ ಖರೀದಿಗೆ ನಿಗದಿಪಡಿಸಿರುವ ಮಿತಿ ಹೆಚ್ಚಳ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರಲ್ಲದೆ, ಜಿಲ್ಲೆಯಲ್ಲಿ ಮಾರಾಟಕ್ಕೆ ಲಭ್ಯವಿರುವ 10 ಲಕ್ಷ ಕ್ವಿಂಟಲ್ ಜೋಳ ಬೆಂಬಲಬೆಲೆ ಯೋಜನೆಯಡಿ ಖರೀದಿಸಲು ಆದೇಶ ಹೊರಡಿಸಬೇಕು. ಜೋಳ ಮಾರಾಟಕ್ಕೆ ನೊಂದಾಯಿಸಿಕೊಂಡ ರೈತರಿಂದ ಜೋಳ ಮಾರಾಟಕ್ಕೆ ಬೇಕಾದ ಗೋಣಿಚೀಲ ಹಾಗೂ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಜೋಳ ಖರೀದಿಗೆ ಸಂಬಂಧಿಸಿದಂತೆ ರೈತರ ಬೇಡಿಕೆಗಳನ್ನು ಈಡೇರಿಸಲು ಸಚಿವರು ಸಮ್ಮತಿ ನೀಡಿದ್ದು, ಖರೀದಿದಾರರು ಯಾವುದೇ ಆತಂಕವಿಲ್ಲದೆ ಜೋಳ ಮಾರಾಟ ಮಾಡಬಹುದಾಗಿದೆ ಎಂದು ಶಾಸಕ ಭರತ್ ರೆಡ್ಡಿ ರೈತರಿಗೆ ತಿಳಿಸಿದರು.ರೈತ ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿ, ಲೇಪಾಕ್ಷಿ, ವೀರಭದ್ರ ರೆಡ್ಡಿ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ರೈತರು ಧರಣಿಯಲ್ಲಿ ಭಾಗವಹಿಸಿದ್ದರು.