ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಜಾತಿ, ಪಕ್ಷ ಇಲ್ಲದ ರೈತರ ಸಂಕಷ್ಟಗಳಿಗೆ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಸ್ಪಂದಿಸಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಹೇಳಿದರು.ಲಕ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಗ್ರಾಮಗಳಿಗೆ ನೀರೊದಗಿಸುವ ಮಾದರಸನ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಸುಮಾರು 70 ಕೋಟಿ ರು. ವೆಚ್ಚದ ಭೈರಾಪುರ ಪಿಕಪ್‌ನಿಂದ ಮಾದರಸನಕೆರೆಗೆ ನೀರಾವರಿ ಯೋಜನೆಯನ್ನು ಬೀರೂರು ಕ್ಷೇತ್ರದ ಶಾಸಕ ಎಸ್.ಎಲ್. ಧರ್ಮೇಗೌಡ ಜಾರಿಗೆ ತರುವುದರಲ್ಲಿ ಶ್ರಮಿಸಿದ್ದರು ಎಂದರು.
ಈ ಬಾರಿ ದೈವ ಕೃಪೆಯಿಂದ ಹೆಚ್ಚು ಮಳೆ ಬಂದು ಕ್ಷೇತ್ರದ ಎಲ್ಲಾ ಕೆರೆಕಟ್ಟೆಗಳು ಭರ್ತಿಯಾಗಿರುವುದು ಸಂತಸ ತಂದಿದೆ. ಈ ನಿಟ್ಟಿನಲ್ಲಿ ರೈತರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಬಂದು ಸಮೃದ್ಧಿಯಾಗಲಿ ಎಂದು ಹಾರೈಸಿದರು. ಇಂತಹ ಅನ್ನದಾತನ ಕೆಲಸ ಮಾಡುವಲ್ಲಿ ಪಕ್ಷಬೇಧ, ಭಿನ್ನಾಭಿಪ್ರಾಯ ಮರೆತು, ಎಲ್ಲಾ ಜನ ಪ್ರತಿನಿಧಿಗಳು ಒಗ್ಗಟ್ಟಿನಿಂದ ಬಂದು ಬಾಗಿನ ಅರ್ಪಿಸುವ ಕಾಯಕದಲ್ಲಿ ನಿರತರಾಗಬೇಕು ಎಂದು ತಿಳಿಸಿದರು.ಮುಂದೆ ಭದ್ರಾ ಉಪ ಕಣಿವೆ, ರಣಘಟ್ಟ ಸೇರಿದಂತೆ ಎಲ್ಲಾ ನೀರಾವರಿ ಯೋಜನೆಗಳನ್ನು ಒಗ್ಗಟ್ಟಿನಿಂದ ಜಾರಿ ಮಾಡಲು ಬದ್ಧರಾಗಿದ್ದೇವೆ. ರೈತರ ವಿಚಾರದಲ್ಲಿ ಪಕ್ಷಾಧಾರಿದ ರಾಜಕಾರಣ ಸಲ್ಲದು. ಎಲ್ಲರೂ ಸೇರಿ ರೈತರಿಗೆ ನೆರವಾಗಬೇಕಾಗಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಮಾದರಸನ ಕೆರೆ ಕೋಡಿ ಬಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇದು ಕಾವೇರಿ ಬೇಸಿನ್ ನೀರಾವರಿ ಯೋಜನೆಯಾಗಿದ್ದು, ಸುಪ್ರೀಂಕೋರ್ಟ್ ಆದೇಶದಂತೆ ಈ ಭಾಗದಲ್ಲಿ ಯಾವುದೇ ಹೊಸ ಯೋಜನೆ ಜಾರಿ ಮಾಡಬಾರದೆಂದು ತಡೆಯಾಜ್ಞೆ ನೀಡಲಾಗಿತ್ತು ಎಂದರು.ಇಲ್ಲಿಂದ ಕೆಆರ್‌ಎಸ್ ವರೆಗೆ ಯಾವುದೇ ಹೊಸ ನೀರಾವರಿ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂಬ ನ್ಯಾಯಾಲಯದ ಆದೇಶವಿದ್ದು, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಶಾಸಕರಾಗಿದ್ದ ಎಸ್.ಎಲ್. ಧರ್ಮೇಗೌಡ ಅವರು ಭೈರಾಪುರ ಪಿಕಪ್ ಎಂದು ಮರು ನಾಮಕರಣ ಮಾಡಿ ಸುಮಾರು 3.50 ಕೋಟಿ ರು. ಅನುದಾನ ಮಂಜೂರು ಮಾಡಿಸಿದ್ದರು ಎಂದು ತಿಳಿಸಿದರು. ಈ ಕೆರೆ ನೀರಾವರಿಯನ್ನು ಬಳಸುವ ಅಚ್ಚುಕಟ್ಟುದಾರರು ಕೆರೆಯನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ ಇದು ನಮ್ಮ ಕೆರೆ ಎಂಬ ಭಾವನೆ 7 ಹಳ್ಳಿ ಗ್ರಾಮಸ್ಥರಲ್ಲಿ ಬರಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಮಾದರಸನ ಕೆರೆ ಕೋಡಿ ಬಿದ್ದು ಬಾಗಿನ ಅರ್ಪಿಸುತ್ತಿರುವ ಇಂತಹ ಪುಣ್ಯದ ಕಾಯಕದಲ್ಲಿ ಸರ್ವರೂ ಭಾಗಿಯಾಗಿ ರೈತರ ನೆರವಿಗೆ ಧಾವಿಸಬೇಕಾಗಿದೆ ಎಂದು ಹೇಳಿದರು.2013ರಲ್ಲಿ ದಾಸರಹಳ್ಳಿ ಕೆರೆಗೆ 4.50 ಕೋಟಿ ರು. ಅನುದಾನ ಮಂಜೂರು ಮಾಡಿಸಿ, ಲಕ್ಯಾ ಹೋಬಳಿಯ ಗ್ರಾಮಗಳಿಗೆ ನೀರಾವರಿ ಯೋಜನೆ ಕಲ್ಪಿಸಲು ಮುಂದಾದಾಗ ಶಾಸಕ ಸಿ.ಟಿ. ರವಿ ಅವರು ಕೃಷ್ಣ ಬೇಸಿನ್, ಕಾವೇರಿ ಬೇಸಿನ್ ವ್ಯಾಪ್ತಿಗೆ ಈ ಕೆರೆ ಬರುತ್ತದೆ ಎಂದು ಹೇಳಿ ತಡೆದಿದ್ದರು ಎಂದು ಆರೋಪಿಸಿದರು.ಈಗ ಸಮೃದ್ಧ ಮಳೆಯಾಗುತ್ತಿರುವುದರಿಂದ ರೈತರು ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗಿದೆ ಎಂದು ಹಾರೈಸಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ೨೦ ಕೋಟಿ ರು.ಗಳನ್ನು ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದು, ಈ ಹಣದಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದೆಂದರು.ಹಿಂದೆ ಶಾಸಕರಾಗಿದ್ದ ಸಿ.ಟಿ ರವಿ ಅವರು ತಮ್ಮ ಅವಧಿಯಲ್ಲಿ ಬಯಲು ಭಾಗಕ್ಕೆ ನೀರಾವರಿ ಯೋಜನೆಗಳನ್ನು ತರುವಲ್ಲಿ ವಿಫಲರಾಗಿದ್ದಾರೆಂದು ದೂರಿದರು. ರೈತರು, ಕೂಲಿ ಕಾರ್ಮಿಕರಿಗೆ ಇವರ ಅವಧಿಯಲ್ಲಿ ಯಾವುದೇ ಜನಪರವಾದ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ, ವಕ್ತಾರ ರವೀಶ್ ಬಸಪ್ಪ ಮಾತನಾಡಿದರು. ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಲಕ್ಯಾ ಗ್ರಾಪಂ ಅಧ್ಯಕ್ಷ ಹನೀಫ್, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಗ್ರಾಮಸ್ಥರಾದ ಶಶಿಧರ್, ರವಿ, ಶಿವಣ್ಣ ಉಪಸ್ಥಿತರಿದ್ದರು.