ಕೃಷಿಕರು ತಮ್ಮ ಹೊಲದಲ್ಲೇ ದುಡಿದು ಮಾಲೀಕರಾಗಿ: ಡಾ. ಪ್ರಕಾಶ ಹೊಳೇರ

KannadaprabhaNewsNetwork | Published : Dec 25, 2024 12:47 AM

ಸಾರಾಂಶ

ಸರ್ಕಾರಗಳು ಕೃಷಿಗೆ ಅನೇಕ ಸವಲತ್ತು, ಯೋಜನೆಗಳನ್ನು ರೂಪಿಸಿದ್ದು, ಅವುಗಳ ಲಾಭದಾಯಕ ಕೃಷಿ ಮಾಡಬಹುದಾಗಿದೆ ಎಂದು ಡಾ. ಪ್ರಕಾಶ ಹೊಳೇರ ಹೇಳಿದರು.

ಹಾನಗಲ್ಲ: ಹೊಲ-ಗದ್ದೆ ಉಳ್ಳವರು ಅಲ್ಪ ಹಿಡುವಳಿ ಇದೆ ಎಂದು ಹಿಂಜರಿತಕ್ಕೆ ಒಳಗಾಗಿ ಕಡಿಮೆ ಸಂಬಳಕ್ಕೆ ದೂರದ ಊರಿಗೆ ಹೋಗಿ ಜೀವನ ಪೂರ್ತಿ ಕೂಲಿಯವನಾಗಿ ಕಷ್ಟಪಡುವುದರ ಬದಲು ಕೃಷಿಯ ಮಹತ್ವವನ್ನು ಅರಿತು ತಮ್ಮ ಹೊಲದಲ್ಲೇ ದುಡಿದು ಮಾಲೀಕರಾಗಿ ಬದುಕನ್ನು ಕಟ್ಟಿಕೊಳ್ಳುವ ಆನಂದ ಎಲ್ಲೂ ಸಿಗುವುದಿಲ್ಲ ಎಂದು ಪ್ರಭಾರಿ ಪ್ರಾಂಶುಪಾಲ ಡಾ. ಪ್ರಕಾಶ ಹೊಳೇರ ನುಡಿದರು.

ಪಟ್ಟಣದ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಯೋಜಿಸಿದ ರಾಷ್ಟ್ರೀಯ ರೈತರ ದಿನಾಚರಣೆ ನಿಮಿತ್ತ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇಂದಿನ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದು, ಸರ್ಕಾರಗಳು ಕೃಷಿಗೆ ಅನೇಕ ಸವಲತ್ತು, ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸಹಾಯದಿಂದ ತಂತ್ರಜ್ಞಾನ ಅಳವಡಿಸಿಕೊಂಡು ಇರುವ ಭೂಮಿಯಲ್ಲೇ ಲಾಭದಾಯಕ ಕೃಷಿ ಮಾಡಬಹುದಾಗಿದೆ. ಸರ್ಕಾರಗಳು ರೈತರು ತಮ್ಮ ಉತ್ಪನ್ನಗಳಿಗೆ ಸಿಗುವ ಅನಿಶ್ಚಿತ ಬೆಲೆಗಳಿಂದ ಧೃತಿಗೆಡದೇ ಇದು ವರೆಗೂ ಕೃಷಿ ಮುಂದುವರೆಸಿರುವುದು ಪ್ರಶಂಸನೀಯ. ತಮ್ಮೆಲ್ಲ ನೋವುಗಳನ್ನು ನುಂಗಿಕೊಂಡು ಕೇವಲ ಕೃಷಿ ಉಳಿವಿಕೆ ಹಾಗೂ ದೇಶಕ್ಕೆ ಅನ್ನ ನೀಡುವ ದಿಟ್ಟತನದಿಂದ ರೈತ ಇಟ್ಟಿರುವ ಹೆಜ್ಜೆಗಾಗಿ ಪ್ರತಿಯೊಬ್ಬ ರೈತರನ್ನು ಬೆನ್ನು ತಟ್ಟಬೇಕು. ಇದು ರೈತ ದಿನದ ಮೊದಲ ಆದ್ಯತೆಯಾಗಲಿ ಎಂದರು.

ಕನ್ನಡ ವಿಭಾಗದ ಪ್ರೊ. ಮಹಮ್ಮದಸಾಧಿಕ್ ಬಡಗಿ ಉಪನ್ಯಾಸ ನೀಡಿ, ಕೃಷಿ ಪ್ರಧಾನ ರಾಷ್ಟ್ರದಲ್ಲಿ ಕೃಷಿ ಚಟುವಟಿಕೆಗೆ ಸರ್ಕಾರಗಳು ದಿಟ್ಟ ಹೆಜ್ಜೆ ಇಡಬೇಕಾದದು ಅವಶ್ಯಕ. ರೈತರು ಇಂದು ಎದುರಿಸುತ್ತಿರುವ ಪ್ರಕೃತಿ ವಿಕೋಪ, ಸಮಯಕ್ಕೆ ಸರಿಯಾಗಿ ಮಳೆ ಬಾರದಿರುವುದು, ನೀರಾವರಿ ಸೌಲಭ್ಯದ ಕೊರತೆ, ಕೀಟ ರೋಗದ ಬಾಧೆ, ಬೆಲೆಯ ಏರಿಳಿತ, ವಿಮಾ ಮೊತ್ತಗಳನ್ನು ಪಡೆಯುವಲ್ಲಿನ ಸವಾಲುಗಳು, ಕೂಲಿ ಕಾರ್ಮಿಕರ ಸಮಸ್ಯೆ ಇವೆಲ್ಲವೂ ರೈತರ ನಿದ್ದೆ ಕೆಡಸಿದೆ. ಇವೆಲ್ಲವಕ್ಕೂ ಸರ್ಕಾರಗಳು ತಕ್ಕ ಸಮಯದಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕು ಎಂದರು.

ಐಕ್ಯೂಎಸಿ ಸಂಯೋಜಕ ಪ್ರೊ. ಅಶೋಕ ಪಾಗಾದ, ಎನ್‌ಎಸ್‌ಎಸ್ ಅಧಿಕಾರಿ ಡಾ. ಸತ್ಯಸಾವಿತ್ರಿ ವ್ಹಿ.ಬಿ. ಮಾತನಾಡಿದರು. ವಿದ್ಯಾರ್ಥಿ ರಾಹುಲ್ ಹಕ್ಕಲಮನಿ ತನ್ನ ಅಭಿಪ್ರಾಯ ಹಂಚಿಕೊಂಡರು. ನಾಡಿನ ರೈತ ಗೀತೆಯೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮಲ್ಲಿ ರೋಶನಿ ಎಸ್. ಪ್ರಾರ್ಥಿಸಿದರು. ಆದರ್ಶ ಪಾಟೀಲ ಸ್ವಾಗತಿಸಿದರು. ರಾಹುಲ್ ಹಕ್ಕಲಮನಿ ವಂದಿಸಿದರು. ಸುಪ್ರಿತಾ ಯಳ್ಳೂರ ನಿರೂಪಿಸಿದರು.

Share this article