ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಬಿಡದಿ-ಹಾರೋಹಳ್ಳಿ ರಸ್ತೆ ಬಂದ್ ಗೊಳಿಸಿ ಪ್ರತಿಭಟಿಸಿದ್ದರಿಂದ ಬಂಧನಕ್ಕೊಳಗಾಗಿರುವ ರೈತರು, ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ಸಂಪೂರ್ಣವಾಗಿ ರದ್ದುಗೊಳಿಸಿಬೇಕು. ಇಲ್ಲವಾದಲ್ಲಿ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ
ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಬಿಡದಿ-ಹಾರೋಹಳ್ಳಿ ರಸ್ತೆ ಬಂದ್ ಗೊಳಿಸಿ ಪ್ರತಿಭಟಿಸಿದ್ದರಿಂದ ಬಂಧನಕ್ಕೊಳಗಾಗಿರುವ ರೈತರು, ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ಸಂಪೂರ್ಣವಾಗಿ ರದ್ದುಗೊಳಿಸಿಬೇಕು. ಇಲ್ಲವಾದಲ್ಲಿ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ರೈತರ ನಡುವೆ ಸಂಘರ್ಷ ಮುಂದುವರೆದಿದೆ. ರೈತರ ಪ್ರತಿಭಟನೆ ಹಾಗೂ ಜೆಡಿಎಸ್ ಹೋರಾಟಕ್ಕೆ ಸ್ಪಂದಿಸದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೌನ್‌ಶಿಪ್ ಜಾರಿ ಮಾಡಲು ಪಣ ತೊಟ್ಟಿದ್ದಾರೆ. ಇತ್ತ ತೀವ್ರ ಹೋರಾಟ ನಡೆಸಿದ್ದ ರೈತರು, ಇದೀಗ ಉಪವಾಸ ಸತ್ಯಾಗ್ರಹದ ಹಾದಿ ಹಿಡಿದಿದ್ದಾರೆ.
ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಯದಿದ್ದಲ್ಲಿ, ತಮಗೆ ಗೌರವಯುತ ಸಾವನ್ನಪ್ಪಲು ದಯಾಮರಣ ನೀಡುವಂತೆ ಕೋರಿ ಬೈರಗಮಂಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಸುಮಾರು 60ಕ್ಕೂ ಹೆಚ್ಚು ರೈತರು ಸಹಿ ಮಾಡಿ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಪ್ರಸ್ತಾವಿತ ಬಿದದಿ ಸ್ಮಾರ್ಟ್ ಸಿಟಿ (GBIT) ಯೋಜನೆಗೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ತಕ್ಷಣವೇ ಸಂಪೂರ್ಣವಾಗಿ ರದ್ದುಗೊಳಿಸುವುದು. ತಪ್ಪಿದಲ್ಲಿ ಜೀವನೋಪಾಯವಿಲ್ಲದ ನರಳಿ ಸಾಯುವುದಕ್ಕಿಂತ ''''''''ದಯಾಮರಣಕ್ಕೆ'''''''' ಅನುಮತಿ ನೀಡುವಂತೆ ರೈತರು ಕೋರಿದ್ದಾರೆ.
ಮನವಿ ಪತ್ರದಲ್ಲಿ ಏನಿದೆ?
ನಮ್ಮ ಏಕೈಕ ಜೀವನಾಧಾರ ಕೃಷಿ ಭೂಮಿ:
ನಾವು ರಾಮನಗರ ಜಿಲ್ಲೆಯ ಬಿಡದಿ ಹೊಬ್ಳಿಯ ರೈತರಾಗಿದ್ದು, ತಲತಲಾಂತರಗಳಿಂದ ಕೃಷಿಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದೇವೆ. ನಮ್ಮ ಸ್ವಾಧೀನದಲ್ಲಿರುವ ಕೃಷಿ ಜಮೀನುಗಳು ಬಹುಬೆಳೆ ಬೆಳೆಯುವ ಫಲವತ್ತಾದ ನೀರಾವರಿ ಭೂಮಿಯಾಗಿದ್ದು, ನಮ್ಮ ಕುಟುಂಬಗಳ ದೈನಂದಿನ ಅನ್ನ, ಮಕ್ಕಳ ವಿದ್ಯಾಭ್ಯಾಸ ಹಾಗೂ ಜಾನುವಾರುಗಳ ಪೋಷಣೆಗೆ ಇದೊಂದೇ ಏಕೈಕ ಆಧಾರವಾಗಿದೆ. ನಮಗೆ ಕೃಷಿಯನ್ನು ಹೊರತುಪಡಿಸಿ ಬೇರೆ ಯಾವುದೇ ವೃತ್ತಿ, ಉದ್ಯೋಗ ಅಥವಾ ಪರ್ಯಾಯ ಆದಾಯದ ಮೂಲಗಳಿಲ್ಲ.
ಸರ್ಕಾರವು ಕೈಗಾರಿಕಾ ಹಾಗೂ ಟೆಕ್ನಾಲಜಿ ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಅನ್ನದಾತ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ನಮಗೆ ಮರಣಶಾಸನ ಬರೆದಂತಾಗಿದೆ. ಫಲವತ್ತಾದ ಕೃಷಿ ಭೂಮಿಯನ್ನು ಕಸಿದುಕೊಳ್ಳುವುದು ಭಾರತ ಸಂವಿಧಾನದ 21ನೇ ವಿಧಿಯಡಿ ನೀಡಿರುವ ಬದುಕುವ ಹಕ್ಕಿನ ನೇರ ಉಲ್ಲಂಘನೆಯಾಗಿದೆ ಅಂತ ಪ್ರಸ್ತಾಪಿಸಿದ್ದಾರೆ.
ಕೃಷಿ ಭೂಮಿ ಬಿಟ್ಟುಕೊಡಲು ಸಿದ್ಧರಿಲ್ಲ:
ನಾವ್ಯಾರೂ ಯಾವುದೇ ಕಾರಣಕ್ಕೂ ನಮ್ಮ ಜೀವನಾವಲಂಬಿತ ಕೃಷಿ ಭೂಮಿಯನ್ನು ಯೋಜನೆಗೆ ಬಿಟ್ಟುಕೊಡಲು ಸಿದ್ಧರಿಲ್ಲ. ಆದ್ದರಿಂದ ಈ ಪ್ರಸ್ತಾವಿತ ಭೂಸ್ವಾಧೀನವನ್ನು ಕೂಡಲೇ ರದ್ದುಪಡಿಸಬೇಕು. ರೈತನಿಂದ ಭೂಮಿಯನ್ನು ಕಸಿದುಕೊಂಡರೆ, ಅವನನ್ನು ಜೀವಂತ ಸಮಾಧಿ ಮಾಡಿದಂತೆಯೇ ಸರಿ. ನಮ್ಮ ಕಣ್ಣೆದುರೇ ನಮ್ಮ ಭೂಮಿ ಕಸಿದುಕೊಂಡು, ನಿರುದ್ಯೋಗಿಗಳಾಗಿ, ಅನ್ನ-ಆಹಾರವಿಲ್ಲದೆ ಬೀದಿಗೆ ಬಿದ್ದು ಭಿಕ್ಷೆ ಬೇಡುವ ಹೀನಾಯ ಸ್ಥಿತಿಗೆ ತಳ್ಳಲ್ಪಡುವುದಕ್ಕಿಂತ, ಸರ್ಕಾರದ ಸಮ್ಮುಖದಲ್ಲೇ ಗೌರವಯುತವಾಗಿ ಪ್ರಾಣತ್ಯಾಗ ಮಾಡುವುದು ಲೇಸು ಅಂತ ತಿಳಿಸಿದ್ದಾರೆ.
ದಯಾಮರಣಕ್ಕೆ ಅನುಮತಿ ನೀಡಿ :
ಸರ್ಕಾರವೇನಾದರೂ ನಮ್ಮ ಈ ಕೃಷಿ ಭೂಸ್ವಾಧೀನ ಪ್ರಕ್ರಿಯೆಯನ್ನು ಹಿಂಪಡೆಯದೆ, ಬಲವಂತವಾಗಿ ಮುಂದುವರಿಸಿದ್ದೇ ಆದರೆ, ನಮಗೆ ಭಾರತೀಯ ಸಂವಿಧಾನದ ನಿಯಮಾವಳಿಗಳಡಿ ಅಧಿಕೃತವಾಗಿ ''''''''ದಯಾಮರಣಕ್ಕೆ'''''''' ಅನುಮತಿ ನೀಡಬೇಕೆಂದು ಕಣ್ಣೀರಿನಿಂದ ಪ್ರಾರ್ಥಿಸುತ್ತೇವೆ ಅಂತ ಪತ್ರದಲ್ಲಿ ಮನವಿ ಮಾಡಿದ್ದಾರೆ.
ರೈತರ ಪ್ರಮುಖ ಹಕ್ಕೊತ್ತಾಯಗಳು :
ಬಿಡದಿ ಸ್ಮಾರ್ಟ್ ಸಿಟಿಶಿಪ್ (GBIT) ಯೋಜನೆಗಾಗಿ ನಮ್ಮ ಗ್ರಾಮಗಳ ಕೃಷಿ ಭೂಮಿಗೆ ಸಂಬಂಧಿಸಿದಂತೆ ಹೊರಡಿಸಲಾದ ಎಲ್ಲಾ ಪ್ರಾಥಮಿಕ ಹಾಗೂ ಅಂತಿಮ ಭೂಸ್ವಾಧೀನ ಅಧಿಸೂಚನೆಗಳನ್ನು ಈ ಕೂಡಲೇ ಷರತು ರಹಿತವಾಗಿ ರದ್ದುಗೊಳಿಸಬೇಕು.
ರೈತರ ಒಪ್ಪಿಗೆಯಿಲ್ಲದೆ ಯಾವುದೇ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದು ಮತ್ತು ಜಮೀನುಗಳನ್ನು ಶಾಶ್ವತವಾಗಿ ಕೃಷಿ ಚಟುವಟಿಕೆಗಳಿಗಾಗಿಯೇ ಮುಕ್ತವಾಗಿ ಬಿಡಬೇಕು.
ಅಭಿವೃದ್ಧಿ ಯೋಜನೆಗಳಿಗೆ ಕೃಷಿ ಭೂಮಿಯ ಬದಲು ಬಂಜರು ಅಥವಾ ಕೃಷಿಯೋಗ್ಯವಲ್ಲದ ಸರ್ಕಾರಿ ಭೂಮಿಯನ್ನು ಮಾತ್ರ ಬಳಸಿಕೊಳ್ಳಬೇಕು.
ಒಂದು ವೇಳೆ ಸರ್ಕಾರ ರೈತರ ಈ ನ್ಯಾಯಯುತ ಬೇಡಿಕೆಯನ್ನು ತಿರಸ್ಕರಿಸಿ, ಭೂಸ್ವಾಧೀನ ಮುಂದುವರಿಸಿದರೆ, ಸಂತ್ರಸ್ತ ರೈತರೆಲ್ಲರಿಗೂ ಸಾಮೂಹಿಕವಾಗಿ ''''''''ದಯಾಮರಣ'''''''' ಹೊಂದಲು ಅನುಮತಿ ಪತ್ರ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
26ಕೆಆರ್ ಎಂಎನ್ 3.ಜೆಪಿಜಿ
ಚನ್ನಪಟ್ಟಣದ ಡಿಎಆರ್ ಕವಾಯತು ಮೈದಾನದ ಪೊಲೀಸ್ ಸಮುದಾಯ ಭವನದಲ್ಲಿ ರೈತ ಮಹಿಳೆಯರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.