;Resize=(412,232))
ತುಮಕೂರು : 12-13 ವರ್ಷದಿಂದ ಬಿಜೆಪಿಯನ್ನು, ನರೇಂದ್ರ ಮೋದಿಯನ್ನು ಬೈಯುತ್ತಿದ್ದೇನೆ. ನನ್ನ ಬಂಧಿಸಲು ಧಮ್ ಇದೆಯಾ ಎಂದು ನಟ ಪ್ರಕಾಶ್ ರಾಜ್ ಸವಾಲು ಹಾಕಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಳ್ಳನ ಕಳ್ಳ ಅಂತಿದ್ದೇನೆ, ಅರೆಸ್ಟ್ ಮಾಡಿ ನನ್ನ ನೋಡೋಣ ಎಂದರು. ನಾನು ಸೆಕ್ಯೂರಿಟಿ ಇಲ್ಲದೆ ಓಡಾಡುತ್ತೇನೆ. ಒಬ್ಬ ಬಂದು ನನ್ನ ಮುಟ್ಟಲಿ ನೋಡೋಣ ಎಂದ ಪ್ರಕಾಶ ರಾಜ್, ನಾನು ಜನರ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳಿದರು.
ಮತದಾರರ ವಿಶೇಷ ಪರಿಷ್ಕರಣೆ ಹಿಂದೆ ಷಡ್ಯಂತರವಿದ್ದು ಭಾರತದ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಹಿಂದೆ ಯಾವತ್ತೂ ಆಗದ ಎಸ್‌ಐಆರ್ ಪ್ರಕ್ರಿಯೆ ಈಗ ನಡೆಯುತ್ತಿರುವುದರ ಉದ್ದೇಶ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ದೇಶದಲ್ಲಿ ಬಡವರು, ತಳ ಸಮುದಾಯ, ಅನಕ್ಷರಸ್ಥರು, ಆದಿವಾಸಿಗಳ ಮೇಲೆ ಇದು ತುಂಬಾ ಗಂಭೀರ ಪರಿಣಾಮ ಉಂಟು ಮಾಡುತ್ತಿದೆ. ಅಂತಹ ಧ್ವನಿ ಇಲ್ಲದವರ ಹಕ್ಕುಗಳನ್ನು ದಮನ ಮಾಡಲು ಹೊರಟಂತಿದೆ. ಆ ಕಾರಣಕ್ಕಾಗಿ ಎಸ್‌ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದರು.
ದೇಶದ ವಿವಿಧ ರಾಜ್ಯಗಳಲ್ಲಿ ನಡೆದಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಗಮನಿಸಿದಾಗ ಅರ್ಧಕ್ಕಿಂತಲೂ ಹೆಚ್ಚು ಜನರ ಮತದಾನದ ಹಕ್ಕನ್ನೇ ಕಸಿಯಲಾಗಿದೆ. ಇವರೆಲ್ಲ ನಿಜವಾಗಿಯೂ ಅರ್ಹರೇ ಆಗಿದ್ದಾರೆ. ಈ ದೇಶದಲ್ಲಿ ಹುಟ್ಟಿ ಬದುಕು ಕಂಡುಕೊಂಡಿರುವ ಇಂತಹ ಅಮಾಯಕರ ಹಕ್ಕುಗಳನ್ನು ದಮನ ಮಾಡುವ ಈ ಪ್ರಕ್ರಿಯೆ ಬೇಕೆ ಎಂದು ಪ್ರಶ್ನಿಸಿದ ಅವರು, ಬಂಗಾಳದ ಪರಿಸ್ಥಿತಿ ಇಲ್ಲಿಯೂ ಬರಬಾರದು. ಗೈರು, ಸ್ಥಳಾಂತರದ ಹೆಸರಿನಲ್ಲಿ ಲಕ್ಷಾಂತರ ಜನರನ್ನು ಅನರ್ಹಗೊಳಿಸಲಾಗಿದೆ ಎಂದು ಟೀಕಾ ಪ್ರಹಾರ ಮಾಡಿದರು.