ಗುಳೆ ತಡೆಗೆ ಜಿ ರಾಂ ಜಿ ಅಡಿ ಹೆಚ್ಚುವರಿ ಮಾನವ ದಿನ ಸೃಷ್ಟಿ

Published : Sep 26, 2026, 11:18 AM IST
VB G RAM G

ಸಾರಾಂಶ

ಬರ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದಲ್ಲಿ ಗುಳೆ ತಡೆಯಲು ವಿಬಿ ಜಿ ರಾಮ್‌ ಜಿ ಯೋಜನೆ ಸಹಕಾರಿಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದ ಮೊದಲ 3 ತಿಂಗಳಿನಲ್ಲಿ 14.85 ಲಕ್ಷ ಹೆಚ್ಚುವರಿ ಮಾನವ ದಿನಗಳನ್ನು ಸೃಜಿಸಲಾಗಿದೆ.

ಗಿರೀಶ್‌ ಗರಗ

 ಬೆಂಗಳೂರು : ಬರ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದಲ್ಲಿ ಗುಳೆ ತಡೆಯಲು ವಿಬಿ ಜಿ ರಾಮ್‌ ಜಿ ಯೋಜನೆ ಸಹಕಾರಿಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದ ಮೊದಲ 3 ತಿಂಗಳಿನಲ್ಲಿ 14.85 ಲಕ್ಷ ಹೆಚ್ಚುವರಿ ಮಾನವ ದಿನಗಳನ್ನು ಸೃಜಿಸಲಾಗಿದೆ. ಅದರಲ್ಲೂ ವಿಜಯನಗರ, ಕಲಬುರಗಿ ಸೇರಿ 10 ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಅತಿ ಹೆಚ್ಚಿನ ಮಾನವ ದಿನ ಸೃಜಿಸಲಾಗಿದೆ.

ವಿಬಿ ಜಿ ರಾಮ್‌ ಜಿ ಯೋಜನೆ ಆರಂಭದ ತಿಂಗಳಲ್ಲಿ ಕುಂಟುತ್ತಾ ಸಾಗಿದ್ದ ಮಾನವ ದಿನಗಳ ಸೃಜನೆಯು, ಇದೀಗ ಭಾರೀ ಏರಿಕೆಯಾಗಿದೆ. ಜುಲೈ ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಶೇ.78.77ರಷ್ಟು ಕಡಿಮೆ ಮಾನವ ದಿನಗಳ ಸೃಜನೆಯಾಗಿತ್ತು. ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಈಶ್ವರ್‌ ಖಂಡ್ರೆ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಣಾಮ 10 ಜಿಲ್ಲೆಗಳಲ್ಲಿ ಯೋಜನೆಯಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದ ಮಾನವ ದಿನ ಸೃಜಿಸಲಾಗಿದೆ.

ಶೇ.10.49 ಹೆಚ್ಚುವರಿ ಕೆಲಸ:

ಜು.1ರಿಂದ ವಿಬಿ ಜಿ ರಾಮ್‌ ಜಿ ಕಾಯ್ದೆ ದೇಶದೆಲ್ಲೆಡೆ ಜಾರಿಯಾಗಿದೆ. ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ವರ್ಷ ಕೆಲಸ ಸೃಷ್ಟಿ ಪ್ರಮಾಣ ಕಡಿಮೆಯಾಗಿತ್ತು. ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಕೆಲಸ ಸೃಜನೆ ಪ್ರಮಾಣ ಹೆಚ್ಚಾಗಿದೆ. 2025ರ ಜುಲೈನಿಂದ ಸೆಪ್ಟೆಂಬರ್‌ವರೆಗೆ 141.55 ಲಕ್ಷ ಮಾನವ ದಿನ ಸೃಜಿಸಲಾಗಿದ್ದರೆ, ಈ ವರ್ಷದ ಜು.1ರಿಂದ ಸೆ.22ರವರೆಗೆ 156.40 ಲಕ್ಷ ಮಾನವ ದಿನ ಸೃಜಿಸಲಾಗಿದೆ.

ವಿಜಯನಗರ ಪ್ರಥಮ:

ಇಲಾಖೆ ಮಾಹಿತಿಯಂತೆ ಮಾನವ ದಿನಗಳ ಸೃಜನೆಯಲ್ಲಿ ರಾಜ್ಯದಲ್ಲೇ ವಿಜಯನಗರ ಪ್ರಥಮ ಸ್ಥಾನದಲ್ಲಿದೆ. ಕಳೆದ ವರ್ಷದ ಮೂರು ತಿಂಗಳಲ್ಲಿ ವಿಜಯನಗರ ಜಿಲ್ಲೆಯಲ್ಲಿ 3.27 ಲಕ್ಷ ಮಾನವ ದಿನ ಸೃಜಿಸಲಾಗಿದ್ದರೆ, ಈ ವರ್ಷ 12.16 ಲಕ್ಷ ಮಾನವ ದಿನ ಸೃಜಿಸಲಾಗಿದೆ. ಉಳಿದಂತೆ ಕಲಬುರಗಿಯಲ್ಲಿ ಕಳೆದ ವರ್ಷ 2.78 ಲಕ್ಷ ಮಾನವ ದಿನ, ಈ ವರ್ಷ 9.39 ಲಕ್ಷ, ಕೊಪ್ಪಳದಲ್ಲಿ ಕಳೆದ ವರ್ಷ 4.97 ಲಕ್ಷ, ಈ ವರ್ಷ 14.20 ಲಕ್ಷ, ಬೀದರ್‌ ಕಳೆದ ವರ್ಷ 6.39 ಲಕ್ಷ, ಈ ವರ್ಷ 16.01 ಲಕ್ಷ, ಬಳ್ಳಾರಿ ಕಳೆದ ವರ್ಷ 3.89 ಲಕ್ಷ, ಈ ವರ್ಷ 9.60 ಲಕ್ಷ ಮಾನವ ದಿನ ಸೃಷ್ಟಿಸಲಾಗಿದೆ. 10 ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚುವರಿ ಮಾನವ ದಿನಗಳನ್ನು ಸೃಜಿಸಲಾಗಿದೆ.

ಬೆಂಗಳೂರು ನಗರ ಕಳಪೆ:

ಉಳಿದಂತೆ 21 ಜಿಲ್ಲೆಗಳು ಕಳೆದ ವರ್ಷಕ್ಕಿಂತ ಕಡಿಮೆ ಮಾನವ ದಿನ ಸೃಜಿಸಿವೆ. ಅದರಲ್ಲೂ ಬೆಂಗಳೂರು ನಗರ, ಕೊಡಗು, ಹಾಸನ, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ದಕ್ಷಿಣ, ಕೋಲಾರ, ಉತ್ತರ ಕನ್ನಡ ಜಿಲ್ಲೆಗಳು ಕಳೆದ ವರ್ಷಕ್ಕಿಂತ ಶೇ.50ಕ್ಕಿಂತ ಕಡಿಮೆ ಮಾನವ ದಿನಗಳನ್ನು ಸೃಜಿಸಿವೆ. ಬೆಂಗಳೂರು ನಗರ ಕೇವಲ 407 ಮಾನವ ದಿನಗಳನ್ನು ಸೃಜಿಸಿದ್ದು, ಕಳೆದ ವರ್ಷಕ್ಕಿಂತ ಶೇ. 96.85ರಷ್ಟು ಕಡಿಮೆಯಿದೆ.

92 ಗ್ರಾಪಂಗಳು ಕೆಲಸ ಸೃಷ್ಟಿಸಿಲ್ಲ:

ರಾಜ್ಯದ 5958 ಗ್ರಾಪಂಗಳ ಪೈಕಿ 5234 ಗ್ರಾಪಂಗಳಲ್ಲಿ ವಿಬಿ ಜಿ ರಾಮ್‌ ಜಿ ಅಡಿ 17,383 ಕಾಮಗಾರಿಗಳು ಚಾಲ್ತಿಯಲ್ಲಿವೆ. ಒಟ್ಟು 233 ಬ್ಲಾಕ್‌ಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 58 ಗ್ರಾಪಂಗಳು ಸೇರಿ 92 ಗ್ರಾಪಂಗಳು ಒಂದೇ ಒಂದು ಮಾನವ ದಿನಗಳನ್ನು ಸೃಜಿಸಿಲ್ಲ.

ಕಳೆದ ವರ್ಷಕ್ಕಿಂತ ಅತಿಹೆಚ್ಚು ಮಾನವ ದಿನ ಸೃಜಿಸಿದ ಜಿಲ್ಲೆಗಳು: (ಜು.1ರಿಂದ ಸೆ. 22ರವರೆಗೆ)

-ವಿಜಯನಗರ, ಕಲಬುರಗಿ, ಕೊಪ್ಪಳ, ಬೀದರ್‌, ಬಳ್ಳಾರಿ, ದಾವಣಗೆರೆ, ಹಾವೇರಿ, ಶಿವಮೊಗ್ಗ, ರಾಯಚೂರು, ಯಾದಗಿರಿ

ಕಳೆದ ವರ್ಷಕ್ಕಿಂತ ಅತಿ ಕಡಿಮೆ ಮಾನವ ದಿನ ಸೃಜಿಸಿದ ಜಿಲ್ಲೆಗಳು:

- ಬೆಂಗಳೂರು ನಗರ, ಕೊಡಗು, ಹಾಸನ, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ದಕ್ಷಿಣ, ಕೋಲಾರ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಧಾರವಾಡ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಿತ್ರದುರ್ಗ, ಬಾಗಲಕೋಟೆ, ವಿಜಯಪುರ, ಗದಗ, ಬೆಳಗಾವಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪಹಣಿಯಲ್ಲಿ ಇನ್ನು ರೈತರ ಫೋಟೋ, ವಿಳಾಸ
ಏನ್ರೀ ಸರ್ಕಾರ ಇದು?: ಹೈಕೋರ್ಟ್‌ ಆಕ್ರೋಶ