ಏನ್ರೀ ಸರ್ಕಾರ ಇದು?: ಹೈಕೋರ್ಟ್‌ ಆಕ್ರೋಶ

Published : Sep 26, 2026, 10:07 AM IST
Karnataka High court

ಸಾರಾಂಶ

ಬೆಳ್ತಂಗಡಿ ತಾಲೂಕಿನ ದಿಡುಪೆ ಜಲಪಾತಕ್ಕೆ ಭೇಟಿಗೆ ಪಾವತಿಸಿದ ಪ್ರವೇಶ ಶುಲ್ಕಕ್ಕೆ ಡಿಜಿಟಲ್‌ ಬಿಲ್‌ ಕೇಳಿದ್ದ ಪ್ರವಾಸಿಗರಿಗೆ ದಂಡ ಪಾವತಿ ರಸೀದಿ ನೀಡಿದ್ದಲ್ಲದೆ, ಹಲ್ಲೆ ಮತ್ತು 50,000 ನಗದು ಕಿತ್ತುಕೊಂಡ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌

ಬೆಂಗಳೂರು : ಬೆಳ್ತಂಗಡಿ ತಾಲೂಕಿನ ದಿಡುಪೆ ಜಲಪಾತಕ್ಕೆ ಭೇಟಿಗೆ ಪಾವತಿಸಿದ ಪ್ರವೇಶ ಶುಲ್ಕಕ್ಕೆ ಡಿಜಿಟಲ್‌ ಬಿಲ್‌ ಕೇಳಿದ್ದ ಪ್ರವಾಸಿಗರಿಗೆ ದಂಡ ಪಾವತಿ ರಸೀದಿ ನೀಡಿದ್ದಲ್ಲದೆ, ಹಲ್ಲೆ ಮತ್ತು 50,000 ನಗದು ಕಿತ್ತುಕೊಂಡ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಪ್ರಕರಣದ ಕುರಿತ ವಿವರಣೆ ನೀಡಲು ನ.6ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಮಂಗಳೂರು ವಲಯ ಅರಣ್ಯಾಧಿಕಾರಿಗೆ ಸೂಚಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಚಿಕ್ಕಮಗಳೂರಿನ ಎಸ್‌.ಪ್ರತಾಪ್‌ ಸೇರಿ ಐವರು ಯುವಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಈ ಆದೇಶ ಮಾಡಿದೆ.

ಖುದ್ದು ಹಾಜರಾತಿಗೆ ಸೂಚನೆ:

ಅಲ್ಲದೆ ಘಟನೆ ಕುರಿತು ಸಾಕ್ಷ್ಯ ಹೇಳಲು ಸ್ಥಳದಲ್ಲಿ ಸ್ವತಂತ್ರ ಸಾಕ್ಷಿ ಇಲ್ಲವಾಗಿದ್ದು, ಅರ್ಜಿದಾರರನ್ನು ಮಂಪರು ಪರೀಕ್ಷೆ ನಡೆಸಲು ಸೂಚಿಸಿರುವ ಬೆಳ್ತಂಗಡಿ ಠಾಣೆ ತನಿಖಾಧಿಕಾರಿ ಸಹ ಅರ್ಜಿಯ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಸೂಚಿಸಿರುವ ಪೀಠ, ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿದೆ,

ಪ್ರಕರಣದಲ್ಲಿ ಪ್ರವೇಶ ಶುಲ್ಕ ಪಾವತಿಸಿರುವುದಕ್ಕೆ ಡಿಜಿಟಲ್‌ ಮತ್ತು ಕೈಬರಹ ನೀಡಲು ಅರ್ಜಿದಾರರು ಕೇಳಿದ್ದಕ್ಕೆ ಬಿಲ್ಲಿಂಗ್‌ ಮಷಿನ್‌ ಹಾಳಾಗಿದೆ. ಕೈ ಬರಹ ಬಿಲ್ ಇಲ್ಲ ಎಂದು ದಂಡ ಪಾವತಿ ರಸೀದಿ ನೀಡಿದ ಮತ್ತು ಬಿಲ್ಲಿಂಗ್‌ ಕೌಂಟರ್‌ನಲ್ಲಿ ಅರಣ್ಯ ವಾಚರ್‌ ಹಣ ಸ್ವಿಕರಿಸುತ್ತಿರುವುದಕ್ಕೆ ನ್ಯಾಯಮೂರ್ತಿಗಳು ಇದೇ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಅಭಿಯೋಜಕರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಡಿಜಿಟಲ್‌ ಬಿಲ್‌ ಕೇಳಿದರೆ ಬಿಲ್ಲಿಂಗ್‌ ಯಂತ್ರ ಕೆಟ್ಟಿದೆ ಅಂತೀರಿ. ಹೋಗಲಿ ಮ್ಯಾನ್ಯುಯಲ್‌ ಬಿಲ್‌ ಕೇಳಿದರೆ ದಂಡ ಪಾವತಿ ರಸೀದಿ ಕೊಡ್ತೀರಾ? ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಕ್ಕೆ ಬಂದರೆ ದಂಡ ವಿಧಿಸುತ್ತೀರಾ? ಬಿಲ್ಲಿಂಗ್‌ ಕೌಂಟರ್‌ ಅಲ್ಲಿ ಅರಣ್ಯ ವಾಚರ್‌ ಕೆಲಸ ಮಾಡುತ್ತಾರಾ? ಏನ್ರಿ ಇದೆಲ್ಲ ಎಂದು ಕಟುವಾಗಿ ಪ್ರಶ್ನಿಸಿದರು.

ದಿನಕ್ಕೆ ನೂರಾರು ಪ್ರವಾಸಿಗರು ಜಲಪಾತ ನೋಡಲು ಬರುವವರಿಂದ ಸಂಗ್ರಹಿಸಿದ ಶುಲ್ಕಕ್ಕೆ ಎಲ್ಲಿದೆ ಲೆಕ್ಕ? ದುಡ್ಡು ಸರ್ಕಾರಕ್ಕೆ ಹೋಗುತ್ತಿದೆಯೇ ಎನ್ನುವುದೇ ಅನುಮಾನ. ಡಿಜಿಟಲ್‌ ಬಿಲ್‌ ಕೇಳಿದ್ದಕ್ಕೆ ಅರ್ಜಿದಾರರ ಮೇಲೆಯೇ ದೂರು ದಾಖಲಿಸುವುದೇ? ಏನ್ರಿ ಸರ್ಕಾರ ಇದು? ಪೊಲೀಸರೂ ದೌರ್ಜನ್ಯ ನಡೆಸುತ್ತಿದ್ದಾರೆ. ಇವರು ಬ್ರಿಟಿಷ್‌ ಪಳೆಯುಳಿಕೆಯಾಗಿದ್ದಾರೆ. ಪ್ರವಾಸೋದ್ಯಮ ಸಚಿವರಿಗೆ ಖುದ್ದು ವಿಚಾರಣೆಗೆ ಹಾಜರಾಗಲು ಸೂಚಿಸುತ್ತೇನೆ. ಅರಣ್ಯ ಇಲಾಖೆ ಕಾರ್ಯದರ್ಶಿ ಪ್ರಕರಣದ ಕುರಿತು ವಿಚಾರಣೆಗೆ ಬಂದು ಉತ್ತರ ಹೇಳಬೇಕು ಎಂದು ಮೌಖಿಕವಾಗಿ ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.

ಪ್ರಕರಣದ ಹಿನ್ನೆಲೆ:

ಅರ್ಜಿದಾರರು ಮತ್ತವರ 15 ಮಂದಿ ಸ್ನೇಹಿತರು 2026ರ ಜು.19ರಂದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ದಿಡುಪೆ ಜಲಪಾತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರವೇಶ ಶುಲ್ಕ ಒಬ್ಬೊಬ್ಬರಿಗೆ ತಲಾ 200 ರು.ನಂತೆ ಒಟ್ಟು ಮೂರು ಸಾವಿರ ರು. ಪ್ರವೇಶ ಶುಲ್ಕ ಪಾವತಿಸಿದ್ದರು. ಅರ್ಜಿದಾರರು ಕೇಳಿದರೂ ಸಿಬ್ಬಂದಿ ಭರತೇಶ್‌ ಡಿಜಿಟಲ್‌ ಬಿಲ್‌ ಕೊಟ್ಟಿರಲಿಲ್ಲ. ಆಗ ಅರ್ಜಿದಾರರು ಮತ್ತು ಭರತೇಶ್‌ ನಡುವೆ ವಾಗ್ವಾದ ನಡೆದಿದೆ. ನಂತರ ಅರಣ್ಯ ವಾಚರ್‌ ಗೋಪಾಲ್‌, ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಅರ್ಜಿದಾರರು ಭರತೇಶ್‌ ಮೇಲೆ ಹಲ್ಲೆ ನಡೆಸಿ ಅವರ ಕೈಯಿಂದ 50,500 ಹಣವಿದ್ದ ಬ್ಯಾಗ್‌ ಕಿತ್ತುಕೊಂಡು ಹೋದ ಆರೋಪದ ಮೇಲೆ ದೂರು ನೀಡಿದ್ದರು. ಇದರಿಂದ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿರುವ ಅರ್ಜಿದಾರರು, ಘಟನೆ ನಡೆದಾಗ ವಿಡಿಯೋ ಚಿತ್ರೀಕರಿಸಲಾಗಿದೆ. ತಾವು ಹಲ್ಲೆ ನಡೆಸಿಲ್ಲ ಮತ್ತು ಹಣದ ಬ್ಯಾಗ್‌ ಕಿತ್ತುಕೊಂಡಿಲ್ಲ ಎಂದು ತಿಳಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬಿಡಬ್ಲ್ಯೂಎಸ್ಎಸ್ಬಿ ವ್ಯಾಪ್ತಿಗೆ ಬೆಂಗ್ಳೂರು ನಗರ ಜಿಲ್ಲೆ ಸೇರ್ಪಡೆಗೆ ಸರ್ಕಾರ ಆದೇಶ
ವಿಶಾಲ್‌ ಮಾರ್ಟ್‌ನ ಬಟ್ಟೆ ಟ್ಯಾಗಿಂದ ಸಿಕ್ಬಿದ್ದ ಕಿಲ್ಲರ್‌