ಬಿಡಬ್ಲ್ಯೂಎಸ್ಎಸ್ಬಿ ವ್ಯಾಪ್ತಿಗೆ ಬೆಂಗ್ಳೂರು ನಗರ ಜಿಲ್ಲೆ ಸೇರ್ಪಡೆಗೆ ಸರ್ಕಾರ ಆದೇಶ

Published : Sep 26, 2026, 09:59 AM IST
BWSSB

ಸಾರಾಂಶ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ. ಮಂಡಳಿಯ ಅಧಿಕಾರ ವ್ಯಾಪ್ತಿಯು ಹಿಂದಿನ 7 ಸಿಎಂಸಿ, 1 ಟಿಎಂಸಿ ಮತ್ತು 110 ಹಳ್ಳಿಗಳನ್ನು ಒಳಗೊಂಡಿದ್ದು, ಒಟ್ಟು 800 ಚದರ ಕಿ.ಮೀ. ವಿಸ್ತೀರ್ಣ ವ್ಯಾಪಿಸಿತ್ತು.

ಬೆಂಗಳೂರು : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ. ಮಂಡಳಿಯ ಅಧಿಕಾರ ವ್ಯಾಪ್ತಿಯು ಹಿಂದಿನ 7 ಸಿಎಂಸಿ, 1 ಟಿಎಂಸಿ ಮತ್ತು 110 ಹಳ್ಳಿಗಳನ್ನು ಒಳಗೊಂಡಿದ್ದು, ಒಟ್ಟು 800 ಚದರ ಕಿ.ಮೀ. ವಿಸ್ತೀರ್ಣ ವ್ಯಾಪಿಸಿತ್ತು. ಇದೀಗ ಇದರ ವ್ಯಾಪ್ತಿ ಬೆಂಗಳೂರು ನಗರ ಜಿಲ್ಲೆಗೆ ವಿಸ್ತರಿಸಿರುವುದರಿಂದ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಯ ಜಾಲವೂ ವಿಸ್ತರಿಸಲಿದೆ ಎಂದು ಸರ್ಕಾರ ತಿಳಿಸಿದೆ.

ಕುಡಿಯುವ ನೀರು ಸರಬರಾಜು, ಭೂಗತ ಒಳಚರಂಡಿ ಸೌಲಭ್ಯ ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳ ಮೂಲಕ ಕೊಳಚೆ ನೀರಿನ ಸುರಕ್ಷಿತ ವಿಲೇವಾರಿಯ ಯೋಜನೆ, ಅನುಷ್ಠಾನ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಮಂಡಳಿ ವಹಿಸಿಕೊಳ್ಳಲಿದೆ. ಗುರುವಾರದಿಂದಲೇ ಬೆಂಗಳೂರು ನಗರ ಜಿಲ್ಲೆಯ ಉತ್ತರ, ಪೂರ್ವ, ದಕ್ಷಿಣ, ಯಲಹಂಕ, ಆನೇಕಲ್ ತಾಲೂಕುಗಳ ಸಂಪೂರ್ಣ ಪ್ರದೇಶ ಹಾಗೂ ಜಿಲ್ಲೆಯ ಸಂಪೂರ್ಣ ಗಡಿಭಾಗಗಳು ಮಂಡಳಿಯ ವ್ಯಾಪ್ತಿಗೆ ಒಳಪಡಲಿವೆ.

ಗುರುವಾರದಿಂದಲೇ ಅಧಿಕೃತವಾಗಿ ಜಾರಿಗೆ

ಗುರುವಾರದಿಂದಲೇ ಅಧಿಕೃತವಾಗಿ ಜಾರಿಗೆ ಬಂದಿದ್ದು, ಸಮಗ್ರ ಬೆಂಗಳೂರು ಜಿಲ್ಲೆಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗಾಗಿ ದೀರ್ಘಾವಧಿ ಯೋಜನೆ ರೂಪಿಸಲು ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಲಾಗಿದೆ. ಹೆಚ್ಚುತ್ತಿರುವ ನಗರೀಕರಣಕ್ಕೆ ತಕ್ಕಂತೆ ರಸ್ತೆಗಳು, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯಂತಹ ಮೂಲಭೂತ ನಗರ ಸೌಕರ್ಯ ಒದಗಿಸಲು ಸರ್ಕಾರ ಯೋಜನೆ ಪ್ರಾರಂಭಿಸಿದೆ.

ಬಿಡಬ್ಲ್ಯೂಎಸ್ಎಸ್‌ಬಿ, ಬಿಎಂಆರ್‌ಡಿಎ ಹಾಗೂ ಸಣ್ಣ ನೀರಾವರಿ ಇಲಾಖೆಯೊಂದಿಗೆ ನಡೆದ ಸಭೆ

ಬಿಡಬ್ಲ್ಯೂಎಸ್ಎಸ್‌ಬಿ, ಬಿಎಂಆರ್‌ಡಿಎ ಹಾಗೂ ಸಣ್ಣ ನೀರಾವರಿ ಇಲಾಖೆಯೊಂದಿಗೆ ನಡೆದ ಸಭೆಯಲ್ಲಿ, ಜಿಬಿಎ ವ್ಯಾಪ್ತಿಗಿಂತ ಹೊರಗಿನ ನಗರದ ಮೂಲಸೌಕರ್ಯಗಳನ್ನು ಪೂರೈಸುವ ಕುರಿತು ಚರ್ಚಿಸಲಾಗಿದ್ದು, ಮುಂದಿನ 2030ರ ನಂತರ ಕುಡಿಯುವ ನೀರಿನ ಅಗತ್ಯತೆಗಳನ್ನು ಅಂದಾಜಿಸಲು ಮಂಡಳಿಗೆ ಸರ್ಕಾರ ಸೂಚಿಸಿದೆ.

ಈ ಅಧಿಸೂಚನೆಯ ನಂತರ ಕೇವಲ ನೀರಿನ ಪ್ರಮಾಣ ಅಂದಾಜಿಸುವುದು ಮಾತ್ರವಲ್ಲ, ನೀರು ಸಂಗ್ರಹಣೆ, ನೀರು ಸಂಸ್ಕರಣಾ ಘಟಕಗಳು ಮತ್ತು ವಿತರಣಾ ಜಾಲಗಳ ಅಗತ್ಯತೆಗಳನ್ನು ಒಳಗೊಂಡಿರುತ್ತದೆ. ಹಂತ-ಹಂತವಾಗಿ ಒಳಚರಂಡಿ ವ್ಯವಸ್ಥೆ, ತ್ಯಾಜ್ಯನೀರು ಸಂಸ್ಕರಣಾ ಘಟಕ ಸ್ಥಾಪಿಸುವುದನ್ನು ಒಳಗೊಂಡಿರುತ್ತದೆ. ಜಿಬಿಎ ಹೊರಗಿನ ಇಡೀ ಬೆಂಗಳೂರು ನಗರ ಜಿಲ್ಲೆಗೆ ಜಂಟಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಹೆಚ್ಚುವರಿ ಸೇರ್ಪಡೆಯ ಗ್ರಾಮಗಳಿಗೆ ಕುಡಿಯುವ ನೀರಿಗೆ ಸದ್ಯಕ್ಕೆ ಕಾವೇರಿ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ. ಆದರೆ, ಈ ತಾಲೂಕುಗಳಲ್ಲಿ ಪ್ರಸ್ತುತ ಇರುವಂತೆಯೇ ಅಂತರ್ಜಲ ಮೂಲವನ್ನೇ ಅವಲಂಬಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಅಂತರ್ಜಲ ಮಟ್ಟ ಮರುಸ್ಥಾಪಿಸಲು ಅಂತರ್ಜಲ ಮರುಪೂರಣಗೊಳಿಸಲು ಮತ್ತು ಜಿಬಿಎ ಸುತ್ತಮುತ್ತಲ ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯದ ನೀರನ್ನು ತುಂಬಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯಗಳಿಗಾಗಿ ಈಗಾಗಲೇ ಸಣ್ಣ ನೀರಾವರಿ ಇಲಾಖೆಗೆ ಸೂಚಿಸಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ವಿಶಾಲ್‌ ಮಾರ್ಟ್‌ನ ಬಟ್ಟೆ ಟ್ಯಾಗಿಂದ ಸಿಕ್ಬಿದ್ದ ಕಿಲ್ಲರ್‌
ಹಲವು ಶಾಸಕರು ಬೆಂಗ್ಳೂರಿಗೆ ಬಂದು 2 ಮದ್ವೆ ಆಗಿದ್ದಾರೆ: ಡಿಕೆ ಶಿವಕುಮಾರ್‌