ಕುಷ್ಟಗಿ ಜಾನುವಾರು ಸಂತೆಯಲ್ಲಿ ಎತ್ತುಗಳಿಗೆ ಹೆಚ್ಚಿದ ಬೇಡಿಕೆ
ಬಡ, ಮಧ್ಯಮ ವರ್ಗದವರಿಗೆ ಕೈಗೆಟುಕದ ದರಪರಶಿವಮೂರ್ತಿ ದೋಟಿಹಾಳಕನ್ನಡಪ್ರಭ ವಾರ್ತೆ ಕುಷ್ಟಗಿ
ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಚುರುಕುಗೊಂಡ ಹಿನ್ನೆಲೆ ಎತ್ತುಗಳ ಬೆಲೆ ಏರಿಕೆ ಕಂಡಿದೆ. ಇದರಿಂದ ಬಡರೈತರು ಎತ್ತುಗಳನ್ನು ಕೊಂಡುಕೊಳ್ಳಲು ಹಿಂದೆಮುಂದೆ ನೋಡುವಂತಾಗಿದೆ.ಪಟ್ಟಣದ ಎಪಿಎಂಸಿ ಆವರಣದಲ್ಲಿ ಪ್ರತಿ ಭಾನುವಾರ ದನದ ಸಂತೆ ನಡೆಯುತ್ತದೆ. ಈ ಸಂತೆಯಲ್ಲಿ ಕೊಪ್ಪಳ, ಬಾಗಲಕೋಟೆ, ರಾಯಚೂರು, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ಹಲವು ಗ್ರಾಮಗಳ ರೈತರು ಬಂದು ವ್ಯಾಪಾರ ವಹಿವಾಟು ನಡೆಸುತ್ತಾರೆ. ಆದರೆ ಈ ವಾರ ನಡೆದ ದನದ ಸಂತೆಯಲ್ಲಿ ಎತ್ತುಗಳ ಬೆಲೆಯು ಗಗನಕ್ಕೇರಿದೆ.
ಕಳೆದ ವರ್ಷ ಹಿಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗದೆ ರೈತಾಪಿ ಜನರು ಬರಗಾಲದಲ್ಲಿ ಅತ್ಯಂತ ಸಂಕಷ್ಟದ ದಿನ ಎದುರಿಸಿದ್ದಾರೆ. ಈ ವರ್ಷ ಮುಂಗಾರು ಪೂರ್ವದಲ್ಲಿಯೇ ಮಳೆರಾಯ ಧರೆಗೆ ಇಳಿದಿದ್ದಾನೆ. ಬಿತ್ತನೆ ಪೂರ್ವ ಸಿದ್ಧತೆಗಳಲ್ಲಿ ತೊಡಗಿಕೊಂಡಿರುವ ರೈತರು ಎತ್ತುಗಳ ಖರೀದಿಯತ್ತ ಚಿತ್ತ ಹರಿಸಿದ್ದಾರೆ. ಆ ಹಿನ್ನೆಲೆ ಎತ್ತುಗಳ ಬೆಲೆ ಸಾಮಾನ್ಯವಾಗಿ ಏರಿಕೆ ಕಂಡಿದೆ.ಜೋಡಿಗೆ ₹60-70 ಸಾವಿರ ದರದಲ್ಲಿ ಮಾರಾಟವಾಗುತ್ತಿದ್ದ ಎತ್ತುಗಳ ದರ ಈಗ ಸುಮಾರು ₹1 ಲಕ್ಷ ದಾಟಿದೆ. ಸಣ್ಣ ರೈತರಿಗೆ ಎತ್ತುಗಳ ಬೆಲೆ ಏರಿಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿತ್ತನೆ ಪೂರ್ವ ಚಟುವಟಿಕೆ ಮಾಡಬೇಕು ಎಂದು ನಿರ್ಧರಿಸಿರುವ ಮಧ್ಯಮ ವರ್ಗದ ರೈತರಿಗೆ ಎತ್ತುಗಳ ಬೆಲೆ ಹೆಚ್ಚಳ ಅಚ್ಚರಿ ಮೂಡಿಸಿತು.
ಒಳ್ಳೆಯ ತಳಿಯ ಬದಲಿಗೆ ಸಾಮಾನ್ಯ ತಳಿಯ ಎತ್ತುಗಳನ್ನಾದರೂ ಖರೀದಿಸಿದರಾಯಿತು ಎಂಬ ರೈತನ ಲೆಕ್ಕಾಚಾರವೂ ಕೈಗೂಡುತ್ತಿಲ್ಲ. ಸಾಮಾನ್ಯ ತಳಿಗಳ ಎತ್ತುಗಳ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ಒಳ್ಳೆಯ ತಳಿಗಳ ಎತ್ತುಗಳು ಒಂದು ಜೋಡಿಗೆ ಸುಮಾರು 80 ಸಾವಿರದಿಂದ ₹ 1.25 ಲಕ್ಷದ ವರೆಗೆ ಮಾರಾಟವಾದವು. ಕೃಷಿಗೆ ಯೋಗ್ಯವಲ್ಲದ ಎತ್ತುಗಳ ಬೆಲೆ ಸುಮಾರು ₹50 ಸಾವಿರ ತಲುಪಿತ್ತು. ಇದರಿಂದ ಜಾನುವಾರು ಖರೀದಿಸಲು ಬಂದ ಬಹುತೇಕ ಸಣ್ಣಪುಟ್ಟ ರೈತರು ದರ ಕೇಳಿ, ಖಾಲಿ ಕೈಯಲ್ಲಿ ವಾಪಸ್ ತೆರಳುವಂತಾಯಿತು.ಕಳೆದ ವರ್ಷ ಆರ್ಥಿಕ ಸಂಕಷ್ಟ ಎದುರಿಸಿರುವ ರೈತ ಮತ್ತೆ ಬಿತ್ತನೆ ಚಟುವಟಿಕೆಗೆ ಸಾಲ ಮಾಡುವ ಅನಿವಾರ್ಯತೆ ಇದೆ. ಬಿತ್ತನೆ ಬೀಜ, ರಸಗೊಬ್ಬರ ಹೀಗೆ ರೈತ ತನ್ನೆಲ್ಲ ಅವಶ್ಯಕತೆ ಪೂರೈಸಿಕೊಳ್ಳಬೇಕಿದೆ. ಇಂತಹ ಸಂದರ್ಭದಲ್ಲಿ ಎತ್ತು ಖರೀದಿಸುವುದು ಕಷ್ಟಕರವೇ ಸರಿ.
ಕಳೆದ ವರ್ಷ ಬರಗಾಲದಲ್ಲಿ ಆರ್ಥಿಕ ಸಮಸ್ಯೆ ತಲೆದೋರಿದಾಗ ರೈತರು ಎತ್ತುಗಳನ್ನು ಒಲ್ಲದ ಮನಸ್ಸಿನಿಂದ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು. ಅದರಿಂದ ಬಂದ ಹಣದಿಂದ ತಕ್ಕಮಟ್ಟಿನ ಸಮಸ್ಯೆ ಪರಿಹರಿಸಿಕೊಂಡಿದ್ದರು. ಈಗ ಮುಂಗಾರು ಹಂಗಾಮು ಆರಂಭದ ಮೊದಲಿಗೆ ಎತ್ತು ಖರೀದಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿದರಾಯಿತು ಎಂಬ ಭಾವನೆ ರೈತನ ಮನದಲ್ಲಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಎತ್ತುಗಳ ಬೆಲೆ ಸಾಮಾನ್ಯ ರೈತನಿಗೆ ಎಟುಕದಂತಾಗಿದೆ.