ಕೃಷಿ ಚಟುವಟಿಕೆ ಬಿರುಸು, ರೈತರ ಮೊಗದಲ್ಲಿ ಮಂದಹಾಸ

KannadaprabhaNewsNetwork |  
Published : Jun 28, 2024, 12:48 AM IST
ಸೋಮವಾರಪೇಟೆ ತಾಲೂಕಿನಾದ್ಯಂತ ಉತ್ತಮ ಮಳೆ: ಕೃಷಿ ಚಟುವಟಿಕೆ ಬಿರುಸು, ರೈತರ ಮೊಗದಲ್ಲಿ ಮಂದಹಾಸ | Kannada Prabha

ಸಾರಾಂಶ

ಹಲೆವಡೆ ಉತ್ತಮ ಮಳೆ ಹಿನ್ನೆಲೆ ರೈತ ವರ್ಗ ಕೃಷಿ ಚಟುವಟಿಕೆಯತ್ತ ತೊಡಗಿಸಿಕೊಂಡಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ದೇಶದ ಬೆನ್ನೆಲುಬಾದ ರೈತರು ಬೆಳೆ ಬೆಳೆಯಲು ಮುಖ ಮಾಡಿದ್ದಾರೆ.

ಮುರಳೀಧರ್‌ ಶಾಂತಳ್ಳಿ

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಮೇ ಮತ್ತು ಜೂನ್‌ ತಿಂಗಳಿನಲ್ಲಿ ತಾಲೂಕಿನ ಹಲವೆಡೆ ಉತ್ತಮ ಮಳೆಯಾದ ಹಿನ್ನೆಲೆ ರೈತಾಪಿ ವರ್ಗ ಕೃಷಿ ಚಟುವಟಿಕೆಯತ್ತ ತೊಡಗಿಸಿಕೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ದೇಶದ ಬೆನ್ನೆಲುಬಾದ ರೈತಾಪಿ ವರ್ಗ ಭೂಮಿಯಲ್ಲಿ ಶೀತ ಇರುವ ಕಾರಣ, ಭೂಮಿಯನ್ನು ಹದಗೊಳಿಸಿ, ಬೆಳೆ ಬೆಳೆಯುವತ್ತ ಮುಖ ಮಾಡಿದ್ದಾರೆ. ತಾಲೂಕಿನ ಗ್ರಾಮೀಣ ಭಾಗದಲ್ಲಿನ ಗದ್ದೆ, ಹೊಲಗಳನ್ನು ಹದಗೊಳಿಸುವ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು, ಬತ್ತ, ಜೋಳ ಸೇರಿದಂತೆ ಇನ್ನಿತರ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.

ತಾಲೂಕಿನಲ್ಲಿ ಬತ್ತ ಕೃಷಿಗೆ ಸಂಬಂಧಿಸಿದಂತೆ ಬಿತ್ತನೆ ಬೀಜವನ್ನು ಒದಗಿಸಲು ಕರ್ನಾಟಕ ಸ್ಟೇಟ್ ಸೀಡ್ ಕಾರ್ಪೋರೇಷನ್ ಮೂಲಕ ತರಿಸಿಕೊಂಡು ರೈತರಿಗೆ ವಿತರಿಸಲಾಗುತ್ತಿದೆ. ಬಿಆರ್2655(ಬಾಂಗ್ಲಾರೈಸ್), ಇಂಟಾನ್, ಐಆರ್64, ತನು, ಅತಿರ ತಳಿ ಬೀಜ ದಾಸ್ತಾನು ಮಾಡಲಾಗಿದೆ. ಎಲ್ಲಾ ಸಹಕಾರ ಸಂಘ, ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಸೌಲಭ್ಯ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಸುಕಿನ ಜೋಳ ಬಿತ್ತನೆಗೆ ಸೂಕ್ತ ಸಮಯವಾಗಿರುವುದರಿಂದ ತಾಲೂಕಿನ ಯಡವನಾಡು, ಹುದುಗೂರು, ಹೆಬ್ಬಾಲೆ, ಕೂಡಿಗೆ, ಗುಡ್ಡೆಹೊಸೂರು, ಮದಲಾಪುರ, ಶಿರಂಗಾಲ, ತೊರೆನೂರು, ಬಾಣಾವರ, ಆಲೂರು ಸಿದ್ದಾಪುರ, ಶನಿವಾರಸಂತೆ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಬಿರುಸಿನಿಂದ ನಡೆಯುತ್ತಿದೆ.

ಈಗಾಗಲೇ ಕೃಷಿ ಇಲಾಖೆಯಿಂದ ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಸ್ಥಳೀಯ ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ದಾಸ್ತಾನಿರಿಸಲಾಗಿದೆ. ರೈತರ ಬೇಡಿಕೆ ಪೂರೈಸುವಷ್ಟು ಬಿತ್ತನೆ ಬೀಜವನ್ನು ದಾಸ್ತಾನಿರಿಸಲಾಗಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಕೃಷಿ ಇಲಾಖೆ ಕ್ರಮಕೈಗೊಂಡಿದೆ.ಗಂಗಾಕಾವೇರಿ, ಕಾವೇರಿ 25ಕೆ55, ಸಿಪಿ818, ಪಯನೀರ್30 ಬಿ07 ಮುಸುಕಿನ ಜೋಳದ ತಳಿಗಳ ಬಿತ್ತನೆ ಬೀಜ ಲಭ್ಯವಿದೆ. ತಾಲೂಕಿನ ಗುಡ್ಡೆಹೊಸೂರು, ಕೂಡಿಗೆ, ತೊರೆನೂರು, ಹೆಬ್ಬಾಲೆ, ಶಿರಂಗಾಲ, ಶನಿವಾರಸಂತೆಯ ಸಹಕಾರ ಸಂಘ, ಕುಶಾಲನಗರ ಹಾಗೂ ಸೋಮವಾರಪೇಟೆ ಕಸಾಬ ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಬಿತ್ತನೆ ಬೀಜವನ್ನು ದಾಸ್ತಾನಿರಿಸಲಾಗಿದೆ.ಈಗಾಗಲೇ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಈ ಹಿಂದಿನ ವರ್ಷಗಳಲ್ಲಿ 4500 ರಿಂದ 5 ಸಾವಿರ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆಯಲಾಗುತ್ತಿತ್ತು. ಇತ್ತೀಚೆಗೆ ಮುಸುಕಿನ ಜೋಳ ಬೆಳೆಯುವ ಕೃಷಿಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಜೋಳ ಬೆಳೆಯುತ್ತಿದ್ದ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಕೃಷಿಕರು ಸುವರ್ಣ ಗಡ್ಡೆ, ಕೆಸ, ಸಿಹಿ ಗೆಣಸು, ಶುಂಠಿ ಬೆಳೆಯಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಮುಸುಕಿನ ಜೋಳ ಬೆಳೆಯುವರರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಕೃಷಿ ಇಲಾಖೆಯಿಂದ ಕೃಷಿಕರಿಗೆ ಸಕಾಲದಲ್ಲಿ ಸೌಕರ್ಯಗಳನ್ನು ವಿತರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಾಮೂಲಿಯಾಗಿ ನಾವು ತುಂಗಾ ಭತ್ತವನ್ನು ನಾಟಿ ಮಾಡುತ್ತಿದ್ದೆವು. ಆದರೆ, ಈ ಭಾರಿ ತುಂಗ ಬತ್ತದ ಬೀಜ ಸಿಗುತ್ತಿಲ್ಲ. ಕಳೆದ ವರ್ಷ ನಮ್ಮ ಗದ್ದೆಯಲ್ಲಿ ಬೆಳೆದಿದ್ದ ತುಂಗ ಬತ್ತದ ಬೀಜವನ್ನು ಬಿತ್ತನೆಗೆ ಬಳಸುತ್ತಿದ್ದೇವೆ ಎಂದು ಗೌಡಳ್ಳಿ ಗ್ರಾಮದ ಕೃಷಿಕ ನಾಗರಾಜು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಗದ್ದೆಯಲ್ಲಿ ಕೃಷಿ ಚಟುವಟಿಕೆ ಪ್ರಾರಂಭಿಸಿದ್ದೇವೆ. ಆದರೆ, ತುಂಗಾ ಬತ್ತದ ಬಿತ್ತೆನೆ ಬೀಜ ಸಿಗುತ್ತಿಲ್ಲ. ಈ ಭಾರಿ ಬತ್ತದ ಬೀಜಕ್ಕೆ ಬೆಲೆ ಹೆಚ್ಚಳವಾಗಿದೆ. ಮುಂದೆ ಯಾವ ಬಿತ್ತನೆ ಬೀಜ ಸಿಗುತ್ತದೆಯೋ ಅದನ್ನೇ ಬಳಸಿ ಕೃಷಿ ಮಾಡಲಾಗುವುದು. ಎಂದು ಕೊಮಾರಪ್ಪ ಗೌಡಳ್ಳಿ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ 9500 ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬೆಳೆಯುವ ಗುರಿ ಹೊಂದಲಾಗಿದೆ. ಈ ಭಾರಿ ಸರಿಯಾಗಿ ತುಂಗಾ ಭತ್ತದ ಬೀಜವನ್ನು ರೈತರು ಸಂಗ್ರಹಿಸದ ಕಾರಣ ತುಂಗಾ ಬತ್ತದ ಬೀಜವನ್ನು ಸರ್ಕಾರ ನೀಡುತ್ತಿಲ್ಲ. ಉಳಿದಂತೆ ಹೈಬ್ರೀಡ್ ಸೇರಿದಂತೆ ಹಿಂದೆ ನೀಡುತ್ತಿದ್ದ ಎಲ್ಲ ರೀತಿಯ ಬತ್ತದ ಬೀಜವನ್ನು ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಇಲಾಖೆಯಲ್ಲಿ ನೀಡಲಾಗುತ್ತಿದೆ. ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ