ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಹಾಳಾಗಿರುವ ಮತ್ತು ಗುಂಡಿ ಬಿದ್ದಿರುವ ರಸ್ತೆಗಳಿಗೆ ಡಾಂಬರೀಕರಣ ಮಾಡಿ ಅಭಿವೃದ್ಧಿಪಡಿಸಲು ₹2,000 ಕೋಟಿ ವಿಶೇಷ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.ಗುರುವಾರ ಜಿಬಿಎ ಕಚೇರಿಯಲ್ಲಿ ನಗರದ ಘನತ್ಯಾಜ್ಯ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಆಂತರಿಕ ರಸ್ತೆಗಳು, ವಾರ್ಡ್ ರಸ್ತೆಗಳ ಅಭಿವೃದ್ಧಿಗೆ ಈ ಅನುದಾನವನ್ನು ವಿನಿಯೋಗಿಸಲಾಗುತ್ತದೆ. ಎರಡು ತಿಂಗಳ ಒಳಗಾಗಿ ಅಲ್ಪಾವದಿ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸಲಾಗುತ್ತದೆ. ಆರು ತಿಂಗಳ ಒಳಗೆ ರಿಪೇರಿ ಮತ್ತು ಗುಂಡಿ ಮುಚ್ಚುವ ಕೆಲಸವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಹೊಸ ಸರ್ಕಾರ ರಚನೆಯಾದ ಬಳಿಕ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ನಗರದ ರಸ್ತೆಗಳ ಪರಿಸ್ಥಿತಿಯನ್ನು ಸುಧಾರಿಸಬೇಕೆಂಬುದು ಜನರ ಪ್ರಮುಖ ನಿರೀಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳನ್ನು ಹೊರತುಪಡಿಸಿ, 5 ಪಾಲಿಕೆಗಳ ವ್ಯಾಪ್ತಿಯಲ್ಲಿ ಹಾಳಾಗಿರುವ ವಾರ್ಡ್ ರಸ್ತೆಗಳನ್ನು ಗುರುತಿಸಿ, ಅವುಗಳಿಗೆ ಹೊಸದಾಗಿ ಡಾಂಬರೀಕರಣ ಮಾಡಲು ಅಂದಾಜು ಪಟ್ಟಿ ತಯಾರಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು, ಗುಣಮಟ್ಟಕ್ಕೆ ಯಾವುದೇ ಧಕ್ಕೆಯಾಗದಂತೆ ಮಳೆ ಇಲ್ಲದ ಅವಧಿಯಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಪ್ರಮಾಣಿತ ಕಾರ್ಯವಿಧಾನ ಅನುಸಾರ ಸಂಬಂಧಿತ ಎಲ್ಲಾ ಅಂಗಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗುವುದು. ಪೂರ್ವಾನುಮತಿ ಇಲ್ಲದೆ ರಸ್ತೆಗಳನ್ನು ಅಗೆಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುವ ಸಂದರ್ಭದಲ್ಲಿ ನಾನು ಸ್ವತಃ ಸ್ಥಳ ಪರಿಶೀಲನೆ ನಡೆಸುತ್ತೇನೆ. ಅಧಿಕಾರಿಗಳಿಗೂ ನಿಯಮಿತ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ರಸ್ತೆ ಗುಣಮಟ್ಟವನ್ನು ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಇರುವುದಿಲ್ಲ ಎಂದು ಸಚಿವರು ತಿಳಿಸಿದರು.ಇಲಾಖೆಗಳ ನಡುವೆ ಸಂಯೋಜನೆಇರದಿದ್ದಕ್ಕೆ ಸಚಿವ ಅಸಮಾಧಾನ ಜಲಮಂಡಳಿ, ಗ್ಯಾಸ್ ಪೈಪ್‌ಲೈನ್, ಬೆಸ್ಕಾಂ, ಕೇಬಲ್ ಸೇರಿದಂತೆ ನೆಲದಡಿ ಕಾಮಗಾರಿ ನಡೆಸುವ ವಿವಿಧ ಇಲಾಖೆಗಳು ಹಾಗೂ ಜಿಬಿಎ ನಡುವೆ ಸಂಯೋಜನೆ ಇಲ್ಲದಿರುವುದು ನನಗೆ ತಿಳಿದಿದೆ. ರಸ್ತೆ ರಿಪೇರಿಗಾಗಿ ಅಗೆದು, ಸಿಮೆಂಟ್ ಮಿಶ್ರಣ ಹಾಕಿದಾಗಲೂ ಯಾರೊಬ್ಬರು ಕಾಮಗಾರಿ ನಡೆಸುತ್ತೇವೆ ಎಂದು ಮುಂದೆ ಬರುವುದಿಲ್ಲ. ಅದೇ ಟಾರು ಹಾಕುತ್ತಿದ್ದಂತೆಯೇ ಎಲ್ಲರೂ ಬಂದು ಹೊಸ ರಸ್ತೆ ಅಗೆಯಲು ಆರಂಭಿಸುತ್ತಾರೆ. ಬಹುಶಃ ಅವರಿಗೆ ಹೊಸ ಟಾರು ರಸ್ತೆಗಳು ಕಣ್ಣು ಕುಕ್ಕುತ್ತವೆ ಎನಿಸುತ್ತದೆ ಎಂದು ವಿವಿಧ ಇಲಾಖೆಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ, ಇಲಾಖೆಗಳ ನಡುವೆ ಸಂಯೋಜನೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.