ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಸಿಂಗಟಾಲೂರು ರಸ್ತೆ, ಮುಂಡರಗಿ ರಾಮೇನಹಳ್ಳಿ, ನಾಗರಹಳ್ಳಿ ರಸ್ತೆ ಸೇರಿದಂತೆ ಅನೇಕ ಪಿಡಬ್ಲ್ಯುಡಿ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕಾಮಗಾರಿ ವಿಳಂಬವಾಗುತ್ತಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯ ಕೊಟ್ರೇಶ ಬಳ್ಳೊಳ್ಳಿ ಒತ್ತಾಯಿಸಿದ್ದಾರೆ.

ಈ ಕುರಿತು ಗುರುವಾರ ಪ್ರಕಟಣೆ ನೀಡಿರುವ ಅವರು, ಕೊರ್ಲಹಳ್ಳಿಯಿಂದ ಸಿಂಗಟಾಲೂರುವರೆಗಿನ ಪಿಡಬ್ಲ್ಯುಡಿ ರಸ್ತೆಗಳಲ್ಲಿನ ತಗ್ಗುಗಳನ್ನು ಮುಚ್ಚುವುದಕ್ಕಾಗಿ ಕಳೆದ ಒಂದೂವರೆ ತಿಂಗಳ ಹಿಂದೆ ಎಲ್ಲ ತಗ್ಗುಗಳಿಗೂ ದೊಡ್ಡ ದೊಡ್ಡ ಕಡಿಗಳನ್ನು ಹಾಕಿ ಹಾಗೇ ಬಿಟ್ಟಿದ್ದಾರೆ. ಹೀಗಾಗಿ ನಿತ್ಯ ಈ ರಸ್ತೆಯಲ್ಲಿ ಓಡಾಡುವ ಮೋಟರ್ ಸೈಕಲ್, ಕಾರು, ಬಸ್ಸು, ಟಂಟಂ ಸೇರಿದಂತೆ ಎಲ್ಲ ವಾಹನಗಳ ಸವಾರರು ಹರಸಾಹಸ ಪಡುತ್ತಿರುವುದು ಕಂಡುಬರುತ್ತಿದೆ. ಅನೇಕ ಬಾರಿ ಕಲ್ಲು ಬಡಿದು ಅನೇಕ ಮೋಟರ್ ಸೈಕಲ್ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ.

ಇದೀಗ ಮಾ. 23ರಂದು ಸುಕ್ಷೇತ್ರ ಸಿಂಗಟಾಲೂರು ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಜರುಗಲಿದ್ದು, ಈ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಐದು ದಿನಗಳ ಕಾಲ ಸಾವಿರಾರು ಭಕ್ತರು ಬಂದು ವೀರಭದ್ರೇಶ್ವರ ದೇವರ ದರ್ಶನಾಶೀರ್ವಾದ ಪಡೆದುಕೊಂಡು ಹೋಗುತ್ತಿದ್ದು, ಈ ತಗ್ಗು ತುಂಬುವ ಕಾಮಗಾರಿ ವಿಳಂಬವಾಗಿರುವುದರಿಂದ ಇಲ್ಲಿಗೆ ಬರುವ ಭಕ್ತರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಕೂಡಲೇ ಇತ್ತ ಕಡೆಗೆ ಗಮನಹರಿಸುವ ಮೂಲಕ ಆಗಮಿಸುವ ಭಕ್ತರಿಗೆ ಆಗುವ ತೊಂದರೆಯನ್ನು ತಪ್ಪಿಸಿ, ಸುಲಭ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಕೊಟ್ರೇಶ ಬಳ್ಳೊಳ್ಳಿ ಒತ್ತಾಯಿಸಿದ್ದಾರೆ.