ಯಲಬುರ್ಗಾ:
ಕೃಷಿ ಇಲಾಖೆ ಜಾರಿಗೊಳಿಸಿದ ಕೃಷಿಭಾಗ್ಯ ಯೋಜನೆಯಡಿ ತಾಲೂಕಿನ ರೈತರ ಜಮೀನಲ್ಲಿ ನಿರ್ಮಾಣಗೊಂಡ ಬಹುತೇಕ ಕೃಷಿ ಹೊಂಡಗಳು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಗೆ ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಕೃಷಿಭಾಗ್ಯ ಯೋಜನೆಯಡಿ ನಿರ್ಮಿಸಲಾದ ಹೊಂಡಗಳು ಬರಪೀಡಿತ ರೈತರಿಗೆ ವರದಾನವಾಗಿವೆ. ಅಲ್ಲದೆ ಹೊಂಡಗಳಿಂದ ಅಂತರ್ಜಲ ಮಟ್ಟ ಹೆಚ್ಚಾಗುವುದರಿಂದ ರೈತರ ಕೊಳವೆಬಾಯಿಗಳ ಜಲ ಮರುಪೂರಣವಾಗಲಿವೆ.೫೯೮೨ ಕೃಷಿಹೊಂಡ ನಿರ್ಮಾಣ:
ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ೨೦೧೪-೧೫ರಿಂದ ೨೦೨೫-೨೬ನೇ ಸಾಲಿನ ವರೆಗೆ ಒಟ್ಟು ೫೯೮೨ ಕೃಷಿಹೊಂಡ ನಿರ್ಮಾಣಗೊಂಡಿವೆ. ಎರೆ ಭಾಗದ ರೈತರ ಜಮೀನಲ್ಲಿ ಹೆಚ್ಚು ಹೊಂಡಗಳ ನಿರ್ಮಾಣಗೊಂಡಿವೆ. ಕಳೆದ ವಾರದಿಂದ ಸುರಿಯುತ್ತಿರುವ ಮಳೆಗೆ ಮೈದುಂಬಿಕೊಂಡಿವೆ. ಕೃಷಿಹೊಂಡ ನಿರ್ಮಾಣದಿಂದ ಮಣ್ಣಿನ ಸವಕಳಿ ತಡೆಯುವುದಲ್ಲದೆ, ಹರಿಯುವ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅಲ್ಲದೆ ಮಳೆ ಕೈಕೊಟ್ಟ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊಂಡದ ನೀರನ್ನು ಇಂಜಿನ್ ಮೂಲಕ ಹಾಯಿಸುವ ಮೂಲಕ ಒಣಗುವ ಬೆಳೆಗಳನ್ನು ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ.ಜಾನುವಾರುಗಳ ದಾಹ ನೀಗಿಸಲು ಅನುಕೂಲ:
ಮಳೆ ಕೊರತೆ ಮತ್ತು ಬೇಸಿಗೆ ಕಾಲದಲ್ಲಿ ಜನ-ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆ ಉಂಟಾಗಿ ಪರಿತಪಿಸಬೇಕಾಗುವ ಪರಿಸ್ಥಿತಿ ಇರುತ್ತದೆ. ಅಧಿಕ ಮಳೆಯಿಂದಾಗಿ ಕೃಷಿಹೊಂಡಗಳು ಭರ್ತಿಯಾಗಿದ್ದು, ಬೇಸಿಗೆಯಲ್ಲಿ ಜಾನುವಾರುಗಳ ದಾಹ ನೀಗಿಸಲು ಅನುಕೂಲವಾಗಲಿವೆ.500 ಕೃಷಿಹೊಂಡ ನಿರ್ಮಾಣದ ಗುರಿ:
ಕೆಲ ಸಂದರ್ಭದಲ್ಲಿ ಮುಂಗಾರು ಮಳೆ ಬಿತ್ತನೆ ಬಳಿಕ ಕಣ್ಮರೆಯಾಗುತ್ತಿದೆ. ಈ ವರ್ಷವೂ ಬಿತ್ತನೆ ಬಳಿಕ ಮಳೆ ಮುನಿಸಿಕೊಂಡ ಪರಿಣಾಮ ಬಿತ್ತಿದ ಬೆಳೆ ಒಣಗಲು ಆರಂಭಿಸಿದ್ದವು. ಕೃಷಿ ಹೊಂಡವಿದ್ದರೆ ಅದರಲ್ಲಿನ ನೀರು ಬಳಸಿಕೊಂಡು ಬೆಳೆ ರಕ್ಷಿಸಿಕೊಳ್ಳಬಹುದಿತ್ತು ಎಂದು ರೈತರು ಮಾತನಾಡಿಕೊಂಡಿದ್ದರು. ಅದರ ಭಾಗವಾಗಿಯೇ ಕೃಷಿ ಹೊಂಡಗಳ ಬೇಡಿಕೆ ಹೆಚ್ಚಾಗಿದ್ದು ರೈತರು ಕೃಷಿ ಇಲಾಖೆಗೆ ದುಂಬಾಲು ಬಿದ್ದಿದ್ದಾರೆ. ಹೀಗಾಗಿ ಕೃಷಿ ಇಲಾಖೆ 2025-26ನೇ ಸಾಲಿನಲ್ಲಿ 500 ಕೃಷಿ ಹೊಂಡ ನಿರ್ಮಿಸುವ ಗುರಿ ಹೊಂದಿದೆ.ಕಳೆದ ವಾರದಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಬಹುತೇಕ ಕೃಷಿಹೊಂಡಗಳು ಭರ್ತಿಯಾಗಿವೆ. ಇದರಿಂದ ಮಣ್ಣು ಮತ್ತು ನೀರು ಸಂರಕ್ಷಣೆಯಲ್ಲದೆ ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ. ಮಳೆ ಕೈಕೊಟ್ಟ ಪರಿಸ್ಥಿತಿಯಲ್ಲಿ ಬೆಳೆ ಉಳಿಸಿಕೊಳ್ಳಲು ಅನುಕೂಲವಾಗಲಿದೆ. ೨೦೨೫-೨೬ನೇ ಸಾಲಿಗೆ ಯಲಬುರ್ಗಾ ಮತ್ತು ಕುಕನೂರು ತಾಲೂಕಿನಲ್ಲಿ ೫೦೦ ಕೃಷಿಹೊಂಡ ನಿರ್ಮಾಣ ಗುರಿ ಹೊಂದಲಾಗಿದೆ.
ಪ್ರಮೋದ ತುಂಬಳ, ಸಹಾಯಕ ಕೃಷಿ ನಿರ್ದೇಶಕ ಯಲಬುರ್ಗಾ