ಕೊಪ್ಪಳ:
ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ವಿಧಾನಸಭೆ ಅಧಿವೇಶನದಲ್ಲಿ ಈ ಸಲವಾದರೂ ಮಾತನಾಡಿ ಕೊಪ್ಪಳದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಆಗ್ರಹಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊಪ್ಪಳ ವಿಧಾನಸಭಾ ಕ್ಷೇತ್ರದಾದ್ಯಂತ ರಸ್ತೆಗಳ ಪರಿಸ್ಥಿತಿ ಹದಗೆಟ್ಟಿದೆ. ಜಿಲ್ಲೆಗೆ ಮಂಜೂರಾದ ಶ್ರಮಿಕ ವಸತಿ ಶಾಲೆ ಪಕ್ಕದ ವಿಧಾನಸಭಾ ಕ್ಷೇತ್ರಕ್ಕೆ ಲಭಿಸಿದೆ. ನಗರದ ಸುತ್ತಮುತ್ತಲು ಇರುವ ಕಾರ್ಖಾನೆಗಳ ಮಾಲಿನ್ಯದಿಂದ ಜನ ಬೇಸತ್ತು ಹೋಗಿದ್ದಾರೆ. ರಸಗೊಬ್ಬರ ಕೊರತೆಯಿಂದ ರೈತರು ಬೀದಿಗಿಳಿದಿದ್ದಾರೆ. ಕೊಲೆ ಹಾಗೂ ಮಾದಕ ಪದಾರ್ಥ ದಂಧೆ ಹೆಚ್ಚಾಗಿ ''''''''ಕೂಲ್ ಕೊಪ್ಪಳ ಕಿಲ್ಲರ್ ಕೊಪ್ಪಳ'''''''' ಆಗುತ್ತಿದೆ. ಇವುಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಅನುದಾನ ತಂದು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದು ಶಾಸಕರ ಕರ್ತವ್ಯ ಎಂದಿದ್ದಾರೆ.
ಮೂರು ಬಾರಿ ಶಾಸಕರಾಗಿ ಆಯ್ಕೆಯಾದರೂ ಎಷ್ಟು ಸಲ ವಿಧಾನಸಭೆ ಕಲಾಪಗಳಲ್ಲಿ ಕೊಪ್ಪಳದ ಬಗ್ಗೆ ಮಾತನಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ನಮ್ಮ ಶಾಸಕರು ವಿಧಾನಸಭೆಯಲ್ಲಿ ಮಾತನಾಡಬೇಕೆಂದು ಜನರೇ ಒತ್ತಾಯಿಸುತ್ತಿದ್ದಾರೆ. ಬೇರೆ ಶಾಸಕರು ಮಾತನಾಡುವುದನ್ನು ಕೇಳುತ್ತಿದ್ದೇವೆ. ನಮ್ಮ ಶಾಸಕರು ಏಕೆ ಮಾತನಾಡುವುದಿಲ್ಲ ಎಂದು ಜನ ಕೇಳುವಂತಾಗಿದೆ. ಶಾಸಕರು ಮಾತನಾಡದಿದ್ದರೆ ಸರ್ಕಾರ ಅನುದಾನ ಮಂಜೂರು ಮಾಡುವುದು ಹೇಗೆ ಎಂದು ಸಿವಿಸಿ ಪ್ರಶ್ನಿಸಿದ್ದಾರೆ.ನೀವು ವಿಧಾನಸಭೆಯಲ್ಲಿ ಕ್ಷೇತ್ರದ ಪರವಾಗಿ ಮಾತನಾಡಿ ಎಂದು ದುಂಬಾಲು ಬೀಳುವ ಪರಿಸ್ಥಿತಿ ಬಂದಿರುವುದು ಕೊಪ್ಪಳದ ದುರಂತ. ಪಕ್ಕದ ಕ್ಷೇತ್ರಗಳಿಗೆ ನೂರಾರು ಕೋಟಿ ಅನುದಾನ ಬರುತ್ತಿದೆ. ಕೊಪ್ಪಳಕ್ಕೆ ಏಕೆ ಬರುತ್ತಿಲ್ಲ. ಅಲ್ಲಿನ ಶಾಸಕರು ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಶಾಸಕರು ಜನತೆಯ ಬೇಡಿಕೆಗಳಿಗೆ ಕಿವಿ ಮುಚ್ಚಿಕೊಂಡು, ವಿಧಾನಸಭೆಯಲ್ಲಿ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಹರಿಹಾಯಿದಿದ್ದಾರೆ.
ಶಾಸಕರ ಮೌನದ ವಿರುದ್ಧ ಮುಂದಿನ ದಿನಗಳಲ್ಲಿ ಜೆಡಿಎಸ್ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.