ಸವಣೂರು:ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ ಭಾನುವಾರ ಆಕರ್ಷಕ ಪಥ ಸಂಚಲನ ಜರುಗಿತು. ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಿಂದ ಆರಂಭಗೊಂಡ ಪಥ ಸಂಚಲನದಲ್ಲಿ ಐದುನೂರಕ್ಕು ಹೆಚ್ಚು ಗಣವೇಷಧಾರಿ ಸ್ವಯಂಸೇವಕರು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶಿಸ್ತಿನ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ನಾಡಪರ, ಸಮಾಜಪರ ಸಂದೇಶಗಳು ಪ್ರತಿಧ್ವನಿಸಿದವು. ಸಂಚಲನದ ವೇಳೆ ವೇಷಭೂಷಣ, ಶಿಸ್ತುಬದ್ಧ ಪಥಸಂಚಲನ ಹಾಗೂ ಘೋಷಣೆಗಳು ಸಾರ್ವಜನಿಕರ ಗಮನ ಸೆಳೆದವು. ನಾಗರಿಕರು ಮನೆ ಮುಂಭಾಗದಲ್ಲಿ ರಂಗೋಲಿ ಹಾಕಿ ಪುಷ್ಪದಳಗಳನ್ನು ಅರ್ಪಿಸುವ ಮೂಲಕ ಸ್ವಯಂಸೇವಕರಿಗೆ ಸ್ವಾಗತ ಕೋರಿದರು. ಪಥ ಸಂಚಲನವು ತಾಲೂಕು ಕ್ರೀಡಾಂಗಣದಲ್ಲಿ ಸಮಾವೇಶಗೊಂಡು ಸಮಾರೋಪಗೊಂಡಿತು.ಕಾರ್ಯಕ್ರಮದ ಅಂಗವಾಗಿ ಸಂಘದ ವಿಭಾಗ ಶಾರೀರಿಕ ಸಹ ಪ್ರಮುಖ ಅವರು, ಸಂಘದ ಶತಮಾನೋತ್ಸವದ ಮಹತ್ವ ಹಾಗೂ ಯುವಪೀಳಿಗೆಗೆ ಅದರ ಸಂದೇಶಗಳ ಕುರಿತು ಮನ ಕಲುಕುವ ಮಾತುಗಳನ್ನು ಹಂಚಿಕೊಂಡರು. ಸಾಮಾಜಿಕ ಬಾಂಧವ್ಯ, ಶಿಸ್ತು, ಸೇವಾ ಚಟುವಟಿಕೆಗಳ ಅಗತ್ಯತೆಯನ್ನು ಅವರು ಒತ್ತಿಹೇಳಿದರು. ಜನ ಜಾಗೃತಿಗಾಗಿ ಸ್ವಯಂ ಸೇವಕರು, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋಧನ, ಸ್ವ-ಆಧಾರಿತ ಜೀವನ, ನಾಗರಿಕ ಕರ್ತವ್ಯ ಎಂಬ ಪಂಚ ಪರಿವರ್ತನೆ ಕುರಿತು ಸಮಾಜದ ಸಜ್ಜನಶಕ್ತಿಯ ಸಹಕಾರದೊಂದಿಗೆ ಜನಜಾಗೃತಿ ಕೈಗೊಳ್ಳಲು ಸ್ವಯಂ ಸೇವಕರಿಗೆ ಕರೆ ನೀಡಿದರು.