ಪಥಸಂಚಲನಕ್ಕೆ ಬ್ಯಾಡಗಿಯಲ್ಲೂ ರಂಗೋಲಿ ಹಾಕಿ ಸ್ವಾಗತ

KannadaprabhaNewsNetwork |  
Published : Nov 24, 2025, 02:45 AM IST
ಮ | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ (ಆರ್‌ಎಸ್‌ಎಸ್) ಸಂಘದ ಶತಮಾನೋತ್ಸವ ಅಂಗವಾಗಿ ಪಟ್ಟಣದಲ್ಲಿ ಅದ್ಧೂರಿಯಾಗಿ ಪಥಸಂಚಲನ ಜರುಗಿತು.

ಬ್ಯಾಡಗಿ: ರಾಷ್ಟ್ರೀಯ ಸ್ವಯಂ ಸೇವಕ (ಆರ್‌ಎಸ್‌ಎಸ್) ಸಂಘದ ಶತಮಾನೋತ್ಸವ ಅಂಗವಾಗಿ ಪಟ್ಟಣದಲ್ಲಿ ಅದ್ಧೂರಿಯಾಗಿ ಪಥಸಂಚಲನ ಜರುಗಿತು.ಇಲ್ಲಿನ ಎಸ್‌ಜೆಜೆಎಂ ಸರ್ಕಾರಿ ಕ್ರೀಡಾಂಗಣದಿಂದ ಆರಂಭವಾದ ಸ್ವಯಂ ಸೇವಕರ ಪಥ ಸಂಚಲನ ಮುಖ್ಯರಸ್ತೆ, ಚಾವಡಿ ಓಣಿ, ವೀರಭದ್ರೇಶ್ವರ ದೇವಸ್ಥಾನ ರಸ್ತೆ, ಹಳೇ ಪೇಟೆ ಮಾರ್ಗವಾಗಿ ರಟ್ಟಿಹಳ್ಳಿ ರಸ್ತೆ ಮೂಲಕ ಮರಳಿ ಮೈದಾನ ತಲುಪಿತು.

ದಾರಿಯುದ್ದಕ್ಕೂ ಎಲ್ಲ ಮನೆಗಳ ಮುಂದೆ ಮಹಿಳೆಯರು ರಂಗೋಲಿ ಹಾಗೂ ಶುಭಕೋರುವ ಚಿತ್ರಾವಳಿ ಬಿಡಿಸಿದ್ದರು. ಕೆಲ ಮಹಿಳೆಯರು ಆರತಿ ಹಿಡಿದು ಭಕ್ತಿಯಿಂದ ಸ್ವಾಗತಿಸಿ ಹೂಗಳನ್ನು ಸುರಿದು ಜೈ ಘೋಷ ಹಾಕಿದರು.ಗಣ ವೇಷಧಾರಿಗಳ ಹಿಂದೆ ನೂರಾರು ಸಾರ್ವಜನಿಕರು ತೆರಳುವ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದು ಕೊಟ್ಟರು. ಗಣ ವೇಷಧಾರಿಗಳಾಗಿ ಪುಟ್ಟ ಪುಟ್ಟ ಮಕ್ಕಳು ಗಮನಸೆಳೆದರು. ಇವರೊಂದಿಗೆ ಬಹುತೇಕ ನಾಗರಿಕ ಸಮೂಹ ಪಾಲ್ಗೊಂಡು ದೇಶಭಕ್ತಿ ಹಾಗೂ ಸಂಘದ ಧ್ಯೇಯಗಳನ್ನು ಎಲ್ಲರೂ ಗೌರವಿಸಿದರು.

ಸುಮಾರು 400 ಅಧಿಕ ಗಣವೇಷಧಾರಿಗಳು ಪಾಲ್ಗೊಳ್ಳುವ ಮೂಲಕ ಪಥಸಂಚಲನ ಯಶಸ್ವಿಗೊಳಿಸಿದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಮಳೆರಾಯನ ಆಗಮನವಾಯಿತು. ತೆರೆದ ವಾಹನದಲ್ಲಿ ಭಾರತಮಾತೆ ಹಾಗೂ ಡಾ. ಕೇಶವ ಬಲಿರಾಮ ಹೆಗಡೇವಾರು ಮಾಧವರಾವ್ ಗೊಳವಲಕರ ಶ್ರೀ ಗುರೂಜಿ ಇವರ ಭಾವಚಿತ್ರಗಳ ಮೆರವಣಿಗೆ ನಡೆಸಿದರು.ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಧಾರವಾಡ ವಿಭಾಗ ಬೌದ್ಧಿಕ ಪ್ರಮುಖ, ಗುರುರಾಜ ಕುಲಕರ್ಣಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನ ಕಳೆದಿದ್ದು, ರಾಷ್ಟ್ರೀಯ ಧ್ಯೇಯದೊಂದಿಗೆ ದೇಶದ ಐಕ್ಯತೆ, ಸ್ವಾಮರಸ್ಯ, ದೇಶಿಯ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವಲ್ಲಿ ಸಂಘ ಪ್ರಮುಖವಾಗಿ ಕಾರ್ಯ ನಿರ್ವಹಿಸಿದೆ ಎಂದರು.

ಸ್ವಯಂ ಸೇವಕರು ಗೃಹ ಸಂಪರ್ಕ ಅಭಿಯಾನ ಮೂಲಕ ಪಂಚ ಪರಿವರ್ತನೆ ಮೂಲಕ ಸಂದೇಶ ತಲುಪಿಸಬೇಕಿದೆ. ಪ್ರಕೃತಿ, ಕುಟುಂಬ ಜೀವನ, ಸ್ವಾಮರಸ್ಯ ಬದುಕು, ಸ್ವಯಂ ಜೀವನ, ನಾಗರಿಕ ಕರ್ತವ್ಯ ಇವುಗಳ ಕುರಿತು ಸೇವಕರು ಮನೆ ಮನೆಗೂ ತೆರಳಿ ತಿಳಿಸಬೇಕಿದೆ ಎಂದರು.ಪಥಸಂಚಲದಲ್ಲಿ ಹಾವೇರಿ ಸಂಘ ಚಾಲಕರಾದ ಶ್ರೀಕಾಂತ ಹುಲ್ಮನಿ, ತಾಲೂಕು ಸಂಪರ್ಕ ಪ್ರಮುಖ, ಮಾಲತೇಶ ಅಂಕಲಕೋಟಿ, ಜಿಲ್ಲಾ ಸೇವಾ ಪ್ರಮುಖ ಸುನಿಲ ತೊಗಟಗೇರ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಸ್ವಯಂ ಸೇವಕರಾದ ಮುರಿಗೆಪ್ಪ ಶೆಟ್ಟರ, ಎಂ.ಎಸ್. ಪಾಟೀಲ, ನಂದೀಶ ವೀರನಗೌಡ್ರ, ಶಂಕರ ಬಾರ್ಕಿ, ನಿಂಗಪ್ಪ ಬಟ್ಟಲಕಟ್ಟಿ, ಪ್ರಶಾಂತ ಯಾದವಾಡ, ಪ್ರವೀಣ ಆಲದಗೇರಿ, ಜೀತೇಂದ್ರ ಸುಣಗಾರ, ಶಿವು ಕಲ್ಲಾಪುರ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?