ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆ: ಡಾ.ಆರ್. ಶೇಜೇಶ್ವರ್

KannadaprabhaNewsNetwork |  
Published : Nov 24, 2025, 02:45 AM IST
23ಎಚ್‌ ಪಿಟಿ1- ಹಂಪಿಯಲ್ಲಿ ವಿಶ್ವ ಪರಂಪರೆ ಸಪ್ತಾಹ-2025 ಪ್ರಯುಕ್ತ ಶಾಲಾ ಮಕ್ಕಳಿಂದ ಸ್ವಚ್ಛತಾ ಅಭಿಯಾನ ನಡೆಯಿತು. | Kannada Prabha

ಸಾರಾಂಶ

ಐತಿಹಾಸಿಕ ಸ್ಮಾರಕಗಳು, ಪರಂಪರೆಯ ಮೌಲ್ಯಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.

ಹೊಸಪೇಟೆ: ಐತಿಹಾಸಿಕ ಸ್ಮಾರಕಗಳು, ಪರಂಪರೆಯ ಮೌಲ್ಯಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮುಂದಿನ ಪೀಳಿಗೆಗೆ ಉಳಿಸಲು ಇಂದಿನ ಯುವಜನತೆ ಜಾಗೃತರಾಗಬೇಕಿದೆ ಎಂದು ಪುರಾತತ್ವ ಇಲಾಖೆ ನಿರ್ದೇಶಕ ಡಾ.ಆರ್. ಶೇಜೇಶ್ವರ್ ಹೇಳಿದರು.ಹಂಪಿಯಲ್ಲಿ ವಿಶ್ವ ಪರಂಪರೆ ಸಪ್ತಾಹ-2025 ಪ್ರಯುಕ್ತ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕಮಲಾಪುರ-ಹಂಪಿ ಹಾಗೂ ಸುಜಯ್ ಇನ್ಸ್ ಸ್ಕೂಲ್ ಸೀತಾರಾಮ ತಾಂಡಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಂಪಿಯ ತುಂಗಭದ್ರಾ ನದಿ ತೀರದಲ್ಲಿರುವ ಕಂಪಭೂಪ ಮಾರ್ಗ, ಚಕ್ರತೀರ್ಥದ ಹತ್ತಿರದ ಸಾಲು ಮಂಟಪಗಳ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವ ಪರಂಪರೆ ಸಪ್ತಾಹ ಆಚರಣೆಯ ಉದ್ದೇಶ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಐತಿಹಾಸಿಕ ಮಹತ್ವವಾದ ಸ್ಮಾರಕಗಳು, ಪರಂಪರೆ, ಮೌಲ್ಯಗಳ ರಕ್ಷಣೆಯ ಬಗ್ಗೆ ಅರಿವು ಮೂಡಿಸುವುದಾಗಿದೆ. ಭವಿಷ್ಯದ ಪೀಳಿಗೆಯು ನಮ್ಮ ಇತಿಹಾಸ ತಿಳಿಯಲು ಸ್ಮಾರಕಗಳು ಅವಶ್ಯಕವಾಗಿದೆ. ಸರ್ಕಾರಗಳು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿವೆ. ಸರ್ಕಾರದ ಜೊತೆಗೆ ಸಾರ್ವಜನಿಕರು ಕೈಜೋಡಿಸಬೇಕಿದೆ. ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಗ ಅವುಗಳ ವೀಕ್ಷಣೆಗೆ ಪ್ರವಾಸಿಗರು ಸೇರಿದಂತೆ ಇತಿಹಾಸ ಅಧ್ಯಯನಕಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇವಾ ಮನೋಭಾವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಸೀತಾರಾಮ ತಾಂಡದ ಸುಜಯ್ ಇನ್ಸ್ ಸ್ಕೂಲ್ ಮುಖ್ಯಶಿಕ್ಷಕಿ ಅನನ್ಯ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ ತರಗತಿಗಳಲ್ಲಿ ನಾವು ಪ್ರತಿದಿನ ಸ್ಮಾರಕಗಳ ರಕ್ಷಣೆ, ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು, ಸಂಯಮ, ಸ್ವಚ್ಛತೆ ಹಾಗೂ ನೈರ್ಮಲೀಕರಣ ಕುರಿತು ಬೋಧಿಸುತ್ತೇವೆ. ಆದರೆ ಮಕ್ಕಳಿಗೆ ಪ್ರಾಯೋಗಿಕವಾಗಿ ಐತಿಹಾಸಿಕ ಮಹತ್ವವಾದ ಸ್ಮಾರಕಗಳ ಬಳಿಯಲ್ಲಿ ಕರೆದುಕೊಂಡು ಬಂದು ಸ್ವಚ್ಛತೆಯನ್ನು ಮಾಡಿಸುವುದರ ಮೂಲಕ ಅವುಗಳ ರಕ್ಷಣೆ ಮತ್ತು ಮಹತ್ವದ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಂಡು ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ಇಲಾಖೆ ಸಹಭಾಗಿತ್ವದಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಣೆಗೆ ಮುಂದಾಗಿದ್ದೇವೆ ಎಂದರು.

ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ಪುರಾತತ್ವ ಅಧಿಕಾರಿ ಡಾ.ಆರ್. ಮಂಜ ನಾಯ್ಕ, ವಿದ್ಯಾರ್ಥಿಗಳಿಗೆ ಹಂಪಿಯ ಎದುರು ಬಸವಣ್ಣ ಬಳಿ ಇರುವ ಇಲಾಖೆಯ ಛಾಯಾಚಿತ್ರ ಪ್ರದರ್ಶನ ಗ್ಯಾಲರಿಯಲ್ಲಿನ ಛಾಯಾಚಿತ್ರಗಳನ್ನು ತೋರಿಸಿದರು. ಹಂಪಿ ಪರಿಸರದಲ್ಲಿರುವ ಸ್ಮಾರಕಗಳ ಕುರಿತು 1885ರಿಂದ ವಿವಿಧ ಕಾಲಘಟ್ಟಗಳಲ್ಲಿ ಆಗಿರುವ ದಾಖಲೀಕರಣ ಮತ್ತು ಇಲಾಖೆ ಕೈಗೊಂಡಿರುವ ಸ್ಮಾರಕಗಳ ಸಂರಕ್ಷಣೆ ಕುರಿತು ಪ್ರಾಯೋಗಿಕವಾಗಿ ತಿಳಿಸಿದರು. ವಿದ್ಯಾರ್ಥಿಗಳ ಜೀವನದಲ್ಲಿ ಐತಿಹಾಸಿಕ ಮಹತ್ವವನ್ನು ಹೊಂದಿರುವ ಪ್ರವಾಸಿ ಸ್ಥಳಗಳ ಕುರಿತು ಅಧ್ಯಯನ ಮಾಡುವುರ ಮೂಲಕ ಅವುಗಳ ಮಹತ್ವವನ್ನು ತಿಳಿದುಕೊಳ್ಳುವುದು ಇಂದಿನ ದಿನಮಾನಗಳಲ್ಲಿ ಬಹಳ ಮುಖ್ಯ ಎಂದರು.

ಹಂಪಿ ಪ್ರವಾಸಿ ಸಂಚಾರ ಠಾಣೆಯ ಪಿಎಸ್ಐ ಶಿವಕುಮಾರ್ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಿದರು. ಅಲ್ಲದೇ ಮಾದಕ ದ್ರವ್ಯ ವ್ಯಸನಗಳಿಂದ ಉಂಟಾಗುವ ಪರಿಣಾಮಗಳ ಕುರಿತು ಮಾಹಿತಿ ನೀಡಿದರು.

ಪುರಾತತ್ತ್ವ ಸಂರಕ್ಷಣಾ ಎಂಜಿನಿಯರ್ ಸತೀಶ್ ಜೆ., ವಸಂತಕುಮಾರ್, ನಿವೃತ್ತ ಶಿಕ್ಷಕಿ ಲೀಲಾ, ಸೇರಿದಂತೆ ಪುರಾತತ್ವ ಇಲಾಖೆ ಸಿಬ್ಬಂದಿ ಮತ್ತಿತರರಿದ್ದರು.

PREV

Recommended Stories

ಕನ್ನಡಿಗರೇ ಕನ್ನಡ ನಿರ್ಲಕ್ಷಿಸುತ್ತಿರುವುದು ಶೋಚನೀಯ-ಶಾಸಕ ಬಣಕಾರ
ಸಾಸರವಾಡದಲ್ಲಿ ನೆಫಿಲಾ ಜಾತಿಗೆ ಸೇರಿದ ದೈತ್ಯ ಜೇಡ ಪತ್ತೆ!