ಗದಗ: ನ. 24ರಿಂದ ಡಿ. 9ರ ವರೆಗೆ ನಡೆಯಲಿರುವ ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಪ್ಪ ಎನ್. ಲಿಂಗದಾಳ ಹೇಳಿದರು.
ತಾಲೂಕಿನ ಲಕ್ಕುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಷ್ಟರೋಗ ವಿಭಾಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ನಡೆದ ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನದ ಪೂರ್ವಭಾವಿ ಸಭೆ ಹಾಗೂ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಕುಷ್ಟರೋಗವು ಮೈಕೋ ಬ್ಯಾಕ್ಟೀರಿಯಮ್ ಲೆಫ್ರಿ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದ್ದು, ಮುಖ್ಯವಾಗಿ ಇದು ಚರ್ಮ ಹಾಗೂ ನರಗಳಿಗೆ ಸಂಬಂಧಿಸಿದ ರೋಗ. ಇದನ್ನು ಎಂಡಿಟಿ ಚಿಕಿತ್ಸೆ ಮೂಲಕ ಗುಣಪಡಿಸಬಹುದಾಗಿದೆ ಎಂದು ಹೇಳಿದರು.ಪ್ರತಿ ದಿನ ಬೆಳಗ್ಗೆ 8ಕ್ಕೆ ಸಮೀಕ್ಷಾ ತಪಾಸಣೆ ಕಾರ್ಯಕ್ರಮವನ್ನು ಆರಂಭಿಸಿ ಪ್ರತಿದಿನ 20 ಮನೆಗಳ ವರದಿಯನ್ನು ಮೇಲ್ವಿಚಾರಕರಿಗೆ 1 ಗಂಟೆಯೊಳಗಾಗಿ ತಲುಪಿಸಬೇಕು. ಪ್ರತಿಯೊಬ್ಬರಿಗೂ ಕುಷ್ಟರೋಗದ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಗುಂಪು ಸಭೆ ನಡೆಸಿ. ದೇಹದ ಯಾವುದೇ ಭಾಗದಲ್ಲಿ ತಿಳಿ ಬಿಳಿ ತಾಮ್ರ ವರ್ಣದ ಸ್ಪರ್ಶಜ್ಞಾನ ಇಲ್ಲದೆ ಇರುವ ತದ್ದು ಮಚ್ಚೆಗಳು ಇದ್ದರೆ ಅಥವಾ ಮುಖದಲ್ಲಿ ಎಣ್ಣೆ ಮಿಂಚು ಸಿಂಹದ ಮುಖ ಕಣ್ಣಿನ ರೆಪ್ಪೆಗಳು ಉದುರಿದ್ದರೆ ಅವು ಕುಷ್ಟರೋಗದ ಲಕ್ಷಣ ಇರುವ ಬಗ್ಗೆ ಪ್ರತಿಯೊಂದು ಮನೆಯವರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಮುತ್ತಪ್ಪ ಹಟ್ಟಿಮನಿ ಮಾತನಾಡಿ, ಕುಷ್ಟರೋಗವನ್ನು ಮುಖ್ಯವಾಗಿ ದೇಹದ ಯಾವುದೇ ಭಾಗದಲ್ಲಿ ಕಂಡು ಬರುವ ತಿಳಿ ಬಳಿ ಅಥವಾ ತಾಮ್ರ ಬಣ್ಣದ ಸ್ಪರ್ಶಜ್ಞಾನ ಇಲ್ಲದೆ ಇರುವ ಮಚ್ಚೆಗಳು ಮತ್ತು ಚರ್ಮ, ಕಿವಿಯ ಹಾಲೆ ಮುಖ ಮತ್ತು ಕೈ ಕಾಲುಗಳ ಮೇಲೆ ಕಂಡು ಬರುವ ಗಂಟುಗಳು, ಊದಿಕೊಂಡ ನರಗಳು ಇವುಗಳ ಪರೀಕ್ಷೆ ಮಾಡಿ ಯಾರಲ್ಲಿ ಲಕ್ಷಣಗಳು ಕಂಡು ಬಂದರೆ ಮಾಹಿತಿ ನೀಡಿ ಸಹಕರಿಸಬೇಕು ಎಂದರು.ವೈದ್ಯಾಧಿಕಾರಿ ಡಾ. ವರ್ಷಾ ಬ್ಯಾಲಿಹಾಳ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಬಿ. ಗಡಾದ, ವೈ.ಎನ್. ಕಡೆಮನಿ, ಹುಲಿಗೇಮ್ಮ ಮಾದರ, ಚಂದ್ರಪ್ರಭಾ ತೋಟದ, ಗಂಗಮ್ಮ ಕುಂಬಾರ, ಸಲ್ಮಾ ಕುಕನೂರ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು. ಗಾಯತ್ರಿ ಬಡಿಗೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.