ಗಜೇಂದ್ರಗಡ: ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಸುಧಾರಣೆಯ ಕನಸನ್ನು ಕಟ್ಟಿಕೊಂಡು ಆರಂಭವಾದ ಸಹಕಾರ ಸಂಘಗಳು ಶೋಷಣೆಗೆ ಒಳಗಾದವರ ಬದುಕನ್ನು ಸುಧಾರಿಸಲು ಶ್ರಮಿಸಬೇಕು ಎಂದು ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ಪಟ್ಟಣದ ದಿ. ಲಕ್ಷ್ಮೀ ಅರ್ಬನ್ ಕೋ- ಆಪ್ ಬ್ಯಾಂಕ್‌ನ ನವಿಕೃತ ಕಟ್ಟಡ ಉದ್ಘಾಟನೆ, ೭೫ ವರ್ಷ ಮೇಲ್ಪಟ್ಟ ಬ್ಯಾಂಕಿನ ಸದಸ್ಯರಿಗೆ ಸನ್ಮಾನ ಹಾಗೂ ಮಹಿಳೆಯರಿಗೆ ಉದ್ಯೋಗಕ್ಕಾಗಿ ಸಾಲ ನೀಡುವ ಯೋಜನೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.ನೂರು ವಸಂತಗಳನ್ನು ಪೂರೈಸಿ ಆರ್ಥಿಕ ಶಿಸ್ತಿನೊಂದಿಗೆ ಸರಳವಾಗಿ, ಗಾಂಧಿ ಮಾರ್ಗದಲ್ಲಿ, ಸಹಕಾರದ ನೈಜ ತತ್ವದಡಿ ಸಾಮಾಜಿಕ ಸೇವೆಗಳನ್ನು ಮೈಗೂಡಿಸಿಕೊಂಡು ಮುನ್ನುಗ್ಗುತ್ತಿರುವ ದಿ. ಲಕ್ಷ್ಮೀ ಅರ್ಬನ್ ಕೋ- ಆಪ್ ಬ್ಯಾಂಕ್‌ನ ಕಾರ್ಯ ಪ್ರಶಂಸನೀಯ. ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯ ಆರ್ಥಿಕ ಸ್ಥಿತಿಯ ಸುಧಾರಣೆ ಕನಸನ್ನು ಕಟ್ಟಿಕೊಂಡು ಆರಂಭವಾದ ಸಹಕಾರ ಸಂಘಗಳು ದೇಶಕ್ಕೆ ದೊಡ್ಡ ಕೊಡುಗೆ ನೀಡಿವೆ ಎಂದರು.ಗ್ರಾಹಕರ ವಿಶ್ವಾಸದ ಜತೆಗೆ ಆರ್ಥಿಕ ಶಿಸ್ತಿನೊಂದಿಗೆ ನಡೆಯುತ್ತಿರುವ ಪರಿಣಾಮ ಕಳೆದ ೧೫ ವರ್ಷಗಳಿಂದ ಕಟ್‌ಬಾಕಿದಾರರು ಇಲ್ಲದಂತೆ ಬ್ಯಾಕಿಂಗ್ ವ್ಯವಸ್ಥೆಯನ್ನು ನಡೆಸಿಕೊಂಡು ಬಂದಿರುವ ದಿ. ಲಕ್ಷ್ಮೀ ಅರ್ಬನ್ ಬ್ಯಾಂಕ್ ಎಂಬುದು ಗರ್ವದ ವಿಷಯವಾಗಿದೆ ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಆರ್ಥಿಕ ಶಿಸ್ತು ಹಾಗೂ ಸಾಮಾಜಿಕ ಸೇವೆಗಳಿಂದ ಗುರುತಿಸಿಕೊಂಡು ಜಿಲ್ಲೆಯಲ್ಲಿ ಹೆಮ್ಮರವಾಗಿ ಬೆಳೆದಿರುವ ದಿ. ಲಕ್ಷ್ಮೀ ಅರ್ಬನ್ ಬ್ಯಾಂಕ್ ಮತ್ತಷ್ಟು ಬಲಿಷ್ಠವಾಗಿ ಬೆಳೆದು ಅಶಕ್ತರ ಪಾಲಿಗೆ ವರದಾನವಾಗಲಿ ಎಂದರು.ಬ್ಯಾಂಕಿನ ಉಪಾಧ್ಯಕ್ಷ ಸಿದ್ದಪ್ಪ ಬಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಿ.ವಿ. ಕಂಬಳ್ಯಾಳ ಸ್ವಾಗತಿಸಿದರು. ಬ್ಯಾಂಕಿನ ಚೇರ್ಮನ್ ಸಿಎ ಸುರೇಶ ಚನ್ನಿ, ನಿದೇರ್ಶಕರಾದ ಪಿ.ಎಸ್. ಕಡ್ಡಿ, ಎಸ್.ಎಸ್. ಪಟ್ಟೇದ, ಪಿ.ಬಿ. ಮ್ಯಾಗೇರಿ, ವೀರೇಶ ನಂದಿಹಾಳ, ಆರ್.ಪಿ. ಹುಲಿ, ಪಿ.ವೈ. ತಳವಾರ, ಆರ್.ಬಿ. ನಿಡಗುಂದಿ, ವ್ಯವಸ್ಥಾಪಕ ರಾಜು ಹೊಸಂಗಡಿ ಸೇರಿ ಇತರರು ಇದ್ದರು.
ಸಚಿವ ಸ್ಥಾನಕ್ಕೆ ಅರ್ಹರು: ಶಾಸಕ ಜಿ.ಎಸ್. ಪಾಟೀಲ ಅವರು ಸಚಿವ ಸ್ಥಾನಕ್ಕೆ ಅರ್ಹರು. ಹೈಕಮಾಂಡ್ ಸೂಕ್ತ ಸಮಯದಲ್ಲಿ ಅತ್ಯಂತ ಅನುಕೂಲಕರವಾಗಿ ಪರಿಶೀಲಿಸುತ್ತಾರೆ. ಸಂದರ್ಭ ಬಂದಾಗ ಜಿಲ್ಲೆಯ ಜನತೆಯ ಆಶಯವನ್ನು ಪಕ್ಷದ ಹೈಕಮಾಂಡ್‌ಗೆ ತಿಳಿಸುತ್ತೇನೆ ಎಂದು ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.