ಕನ್ನಡಪ್ರಭ ವಾರ್ತೆ ಬೆಂಗಳೂರು
ಕೋವಿಡ್ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ಎಸ್‌ಐಟಿಗೆ ಕಾಲಮಿತಿಯನ್ನು ನಿಗದಿಪಡಿಸಿ ತ್ವರಿತ ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್ (ತ್ವರಿತಗತಿ ನ್ಯಾಯಾಲಯ) ಅನ್ನು ರಚಿಸಿ ವಿಚಾರಣೆ ನಡೆಸಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ವೇದಿಕೆ ಅಧ್ಯಕ್ಷ ಎಚ್.ಎಂ.ವೆಂಕಟೇಶ್ ಇತರರು ಪತ್ರ ಬರೆದು ಆಗ್ರಹಿಸಿದ್ದಾರೆ.
ಕೋವಿಡ್ ಹಗರಣದಲ್ಲಿ ನಡೆದ ಭ್ರಷ್ಟಾಚಾರವನ್ನು ನ್ಯಾ.ಮೈಕಲ್ ಡಿ.ಕುನ್ಹಾ ಅವರು ತಮ್ಮ ತನಿಖಾ ವರದಿಯಲ್ಲಿ ಬೆಳಕು ಚೆಲ್ಲಿದ್ದಾರೆ. ಭ್ರಷ್ಟಾಚಾರವೆಸಗಿದ ಜನಪ್ರತಿನಿಧಿಗಳು, ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಇನ್ನಿತರ ಸರ್ಕಾರದ ಅಧಿಕಾರಿಗಳು ಯಾರೇ ಆಗಲಿ ಅವರು ಶಿಕ್ಷೆಗೆ ಅರ್ಹರಾಗಿದ್ದಾರೆ. ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ಇರುವವರನ್ನು ಗುರುತಿಸಿ ಜೈಲಿಗೆ ಕಳುಹಿಸುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ಐಎಎಸ್, ಕೆಎಎಸ್ ಸೇರಿ ಎಲ್ಲಾ ವೃಂದದ ಅಧಿಕಾರಿ, ನೌಕರರನ್ನು ತಕ್ಷಣವೇ ಅಮಾನತುಗೊಳಿಸಬೇಕು ಒತ್ತಾಯಿಸಿದ್ದಾರೆ.+++ಸಾಂಕ್ರಾಮಿಕ ರೋಗದಿಂದ ಕುಟುಂಬ ಕುಟುಂಬಗಳು ತತ್ತರಿಸಿ ಹೋಗುತ್ತಿರುವ ಸಂದರ್ಭದಲ್ಲಿ ಈ ಸಾಂಕ್ರಾಮಿಕ ರೋಗವನ್ನೇ ಹಣಗಳಿಸುವ ದಂಧೆಯನ್ನಾಗಿ ಮಾಡಿಕೊಂಡ ನಯವಂಚಕ, ಗೋಮುಖ ವ್ಯಾಘ್ರ ಆರೋಪಿಗಳನ್ನು ಯಾವುದೇ ರಾಜಕೀಯ ಪಕ್ಷ, ಜಾತಿ, ಧರ್ಮ, ಪ್ರಭಾವಿ ಎಂದು ಗುರುತಿಸದೆ ಆರೋಪಿಗಳನ್ನು ಆರೋಪಿಗಳಾಗಿ ಗುರುತಿಸಬೇಕಾಗಿದೆ ಎಂದು ಹೇಳಿದ್ದಾರೆ.
ಕೋವಿಡ್ ವೈದ್ಯಕೀಯ ಉಪಕರಣಗಳು ಮತ್ತು ಸಾಮಗ್ರಿಗಳ ಖರೀದಿಯಲ್ಲಿ ನಡೆಸಿದ ಭ್ರಷ್ಟಾಚಾರವನ್ನು ತನಿಖೆ ನಡೆಸಿ ಬಯಲಿಗೆಳೆದು ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ರಾಜ್ಯದ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ಕಣ್ಗಾವಲಿನಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು. ಆರೋಪಿಗಳು ತಪ್ಪಿಸಿಕೊಳ್ಳದ ರೀತಿಯಲ್ಲಿ ಮತ್ತು ತನಿಖೆ ನಡೆಸಿದ ನಂತರ ದೋಷಾರೋಪಣ ಪಟ್ಟಿಯನ್ನು ಕೂಡ ಯಾವುದೇ ಕಾನೂನಿನ ಅಡಿಯಲ್ಲಿ ಆರೋಪಿಗಳು ತಪ್ಪಿಸಿಕೊಳ್ಳದ ರೀತಿಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಬೇಕು. ಈ ಮೂಲಕ ಆರೋಪಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಸರ್ಕಾರವು ಮುಖ್ಯ ಪಾತ್ರ ವಹಿಸಬೇಕೆಂದು ತಿಳಿಸಿದ್ದಾರೆ.