ಅವ್ರು ಬಂದು ಉದ್ಘಾಟಿಸಿದ್ರು; ಇವ್ರು ಬಂದು ಬಟ್ಟೆ ಸುತ್ತಿದ್ರು!

KannadaprabhaNewsNetwork |  
Published : Nov 19, 2024, 12:45 AM IST
ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಎದುರು ಪ್ರತಿಷ್ಠಾಪಿಸಲಾಗಿರುವ ಸಂಗೊಳ್ಳಿರಾಯಣ್ಣನವರ ಪ್ರತಿಮೆಗೆ ಮಾಜಿ ಸಚಿವ ಬಿ.ಶ್ರೀರಾಮುಲು ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.  | Kannada Prabha

ಸಾರಾಂಶ

ಕನಕದಾಸರ ಜಯಂತಿ ಹಿನ್ನೆಲೆಯಲ್ಲಿ ಬೆಳಗ್ಗೆ ಕೆಲವರು ಪ್ರತಿಮೆಗೆ ಸುತ್ತಲಾಗಿದ್ದ ಬಟ್ಟೆ ಹಾಗೂ ಪ್ಲಾಸ್ಟಿಕ್ ಕವರನ್ನು ಕಿತ್ತು ಹಾಕಿ ಪೂಜೆ ಸಲ್ಲಿಸಿದ್ದಾರೆ.

ಬಳ್ಳಾರಿ: ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಬಳಿಯ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಬೆಳಗ್ಗೆ ಉದ್ಘಾಟಿಸಿ, ಮಧ್ಯಾಹ್ನದ ಹೊತ್ತಿಗೆ ಮೊದಲಿನಂತೆ ಬಟ್ಟೆಯಲ್ಲಿ ಮುಚ್ಚಿಟ್ಟ ಘಟನೆ ಸೋಮವಾರ ನಡೆದಿದೆ.

ಕನಕದಾಸರ ಜಯಂತಿ ಹಿನ್ನೆಲೆಯಲ್ಲಿ ಬೆಳಗ್ಗೆ ಕೆಲವರು ಪ್ರತಿಮೆಗೆ ಸುತ್ತಲಾಗಿದ್ದ ಬಟ್ಟೆ ಹಾಗೂ ಪ್ಲಾಸ್ಟಿಕ್ ಕವರನ್ನು ಕಿತ್ತು ಹಾಕಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಆಹ್ವಾನಿಸಿದ್ದು, ಶ್ರೀರಾಮುಲು ಮತ್ತಿತರರು ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿದ್ದಾರೆ. ಇದಾದ ಕೆಲಹೊತ್ತಿನಲ್ಲಿ ಸಂಸದ ಈ.ತುಕಾರಾಂ, ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜಗೌಡ ಸೇರಿದಂತೆ ಅನೇಕರು ಆಗಮಿಸಿ, ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ಪಾಲಿಕೆ ಸಿಬ್ಬಂದಿ ಆಗಮಿಸಿ, ಪ್ರತಿಮೆ ಅನಾವರಣಗೊಳಿಸುವುದು ಸರಿಯಲ್ಲ ಎಂದು ಮೊದಲಿನಂತೆ ಬಟ್ಟೆಯಿಂದ ಪ್ರತಿಮೆಯನ್ನು ಮುಚ್ಚಿದರು.

ಇದೇ ವೇಳೆ ಪ್ರತಿಮೆ ಉದ್ಘಾಟನೆ ಸಂಬಂಧ ಕುರುಬ ಸಮುದಾಯದ ಎರಡು ಬಣಗಳ ನಡುವೆ ವಾಗ್ವಾದ ನಡೆದಿದೆ. ಪೊಲೀಸರ ಮಧ್ಯಪ್ರವೇಶದಿಂದ ತಿಳಿಗೊಂಡಿತು.

ಏನಿದು ಪ್ರತಿಮೆ ವಿವಾದ?:

ಕಳೆದ 2023ರಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆಯ ಅನುಮತಿ ಇಲ್ಲದೇ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಎದುರು ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ರಾತ್ರೋರಾತ್ರಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಕ್ಕೆ ಬುಡಾ, ಪಾಲಿಕೆ ಆಕ್ಷೇಪಣೆ ಎತ್ತಿತ್ತು. ಅನುಮತಿ ಇಲ್ಲದೇ ಪ್ರತಿಷ್ಠಾಪಿಸಿದ ಪ್ರತಿಮೆಯನ್ನು ಬಟ್ಟೆಯಲ್ಲಿ ಮುಚ್ಚಲಾಗಿತ್ತು. ಈ ಪ್ರತಿಮೆಗೆ ಮಾಜಿ ಸಚಿವ ಬಿ. ಶ್ರೀರಾಮುಲು ಆರ್ಥಿಕ ಸಹಾಯ ನೀಡಿದ್ದಾರೆ ಎನ್ನಲಾಗುತ್ತಿದೆ. ಸೋಮವಾರ ಕೆಲವರು ಪ್ರತಿಮೆಯ ಬಟ್ಟೆ ಬಿಚ್ಚಿ ಪೂಜೆ ಸಲ್ಲಿಸಿ, ಅನಾವರಣಗೊಳಿಸಿದ್ದಾರೆ. ಅಲ್ಲದೆ, ಶ್ರೀರಾಮುಲು ಅವರನ್ನು ಕರೆದು ಪುಷ್ಪಾರ್ಪಣೆ ಮಾಡಿಸಿದ್ದಾರೆ. ಬಳಿಕ ಕಾಂಗ್ರೆಸ್ ನಾಯಕರು ಸಹ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿದ್ದಾರೆ. ಆದರೆ, ಅನುಮತಿ ಇಲ್ಲದೆ ಪ್ರತಿಷ್ಠಾಪಿಸಿರುವ ಪ್ರತಿಮೆಗೆ ಅನಾವರಣಕ್ಕೆ ಅವಕಾಶ ನೀಡದ ಪಾಲಿಕೆ ಸಿಬ್ಬಂದಿ, ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ ಪ್ರತಿಮೆಗೆ ಮತ್ತೆ ಬಟ್ಟೆಯನ್ನು ಸುತ್ತಿದರು.

ಬಳಿಕ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜರುಗಿದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿಚಾರ ಪ್ರಸ್ತಾಪಿಸಿದ ಶಾಸಕ ನಾರಾ ಭರತ್ ರೆಡ್ಡಿ, ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣವನ್ನು ಅದ್ಧೂರಿಯಾಗಿ, ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡೋಣ ಎಂದು ಭರವಸೆ ನೀಡಿದರು. ಅಲ್ಲದೆ, ಸಂಗೊಳ್ಳಿ ರಾಯಣ್ಣನವರಂತೆಯೇ ಸಿಎಂ ಸಿದ್ದರಾಮಯ್ಯ ಅತ್ಯುತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಸ್ಮರಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ