ಕಿಕ್ಕೇರಿ: ಹೋಬಳಿಯಾದ್ಯಂತ ಶಿವಭಕ್ತರು ಉಪವಾಸವ್ರತ, ಜಾಗರಣೆಯೊಂದಿಗೆ ಶಿವರಾತ್ರಿಯಂದು ಶಿವಸ್ಮರಣೆಯಲ್ಲಿ ತಲ್ಲಿನರಾಗಿದ್ದರು. ಪಟ್ಟಣದ ಬ್ರಹ್ಮೇಶ್ವರ ದೇವಾಲಯಕ್ಕೆ ಭಕ್ತರದಂಡು ಆಗಮಿಸಿ ಭಜನೆ ಮಾಡುತ್ತಾ, ಪಾರ್ವತಿದೇವಿ, ಭೈರವೇಶ್ವರ, ಬ್ರಹ್ಮೇಶ್ವರ ದೇವರ ದರ್ಶನ ಪಡೆದರು. ವಿಪ್ರ ಸಮುದಾಯದ ವೃಂದ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಶಿವನಿಗೆ ಅಭಿಷೇಕ, ಅಲಂಕಾರಗಳು ನಡೆದು ಭಕ್ತರು ಕಣ್ತುಂಬಿಕೊಂಡರು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ, ಲಾಡು, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಉಪ್ಪರಿಗೆ ಬಸವೇಶ್ವರ, ವೀರಭದ್ರೇಶ್ವರ ದೇಗುಲ, ಹೋಬಳಿಯ ಮಾದಾಪುರ ತ್ಯಯಂಭಕೇಶ್ವರ, ಹಳೆಮಾದಾಪುರ ರಾಮೇಶ್ವರ, ಗೋವಿನಕಲ್ಲು ಬಳಿಯ ಶಿವಾಲಯ, ಗದ್ದೆಹೊಸೂರುವಿನ ಜೋಡಿ ಬಸವೇಶ್ವರ, ಹಿರಿಕಳಲೆ, ಐಕನಹಳ್ಳಿ ಗ್ರಾಮದ ಬಸವೇಶ್ವರ, ಮಂದಗೆರೆಯ ಅಂಕನಾಥೇಶ್ವರ, ಅಂಕನಹಳ್ಳಿ ಮಲ್ಲೇಶ್ವರ, ಕೋಟಹಳ್ಳಿ, ಊಗಿನಹಳ್ಳಿ, ತೆಂಗಿನಘಟ್ಟದ ಈಶ್ವರ ದೇವಾಲಯ ಮತ್ತಿತರ ಗ್ರಾಮಗಳಲ್ಲಿ ಶಿವಪೂಜೆ ವಿಜೃಂಭಣೆಯಿಂದ ನಡೆಯಿತು.ಹರಿಕಥೆ, ಕೀರ್ತನೆ, ಭಜನೆ, ಶಿವನಾಮಪಾರಾಯಣ, ಓಂಕಾರ ಬೀಜಾಕ್ಷರಮಂತ್ರಗಳು ದೇವಾಲಯಗಳಲ್ಲಿ ಮೊಳಗಿದವು. ಹಲವು ಗ್ರಾಮಗಳಲ್ಲಿ ಷಟಲ್ ಬ್ಯಾಡ್ ಮಿಂಟನ್, ವಾಲಿಬಾಲ್ ಕ್ರೀಡಾಕೂಟ ನಡೆದವು. ಎಲ್ಲೆಡೆ ಬಿಲ್ವಪತ್ರೆ, ಸಿಹಿ ಪ್ರಸಾದ ವಿನಿಯೋಗ ಭಕ್ತರಿಗೆ ವಿತರಿಸಲಾಯಿತು.