ಅಪರಿಚಿತರಿಂದ ವಿದೇಶಿಗರ ಮೇಲೆ ಮಾರಣಾಂತಿಕ ಹಲ್ಲೆ

KannadaprabhaNewsNetwork | Published : Mar 7, 2025 11:46 PM

ಸಾರಾಂಶ

ಓರಿಸ್ಸಾ ಮೂಲದ ಬಿಬಾಸ್ ಎನ್ನುವರನ್ನು ಕಾಲುವೆಗೆ ತಳ್ಳಿದ್ದರಿಂದ ಆತ ನೀರು ಪಾಲಾಗಿದ್ದಾನೆ. ಅಮೆರಿಕದ ಡ್ಯಾನಿಯೇಲ್, ಇಸ್ರೇಲ್‍ನ ನಾಮಾ, ಮಹಾರಾಷ್ಟ್ರದ ಪಂಕಜ, ಆನೆಗೊಂದಿಯ ರೆಸಾರ್ಟ್ ಮಾಲೀಕಳಾದ ಅಂಬಿಕಾ ನಾಯ್ಕ್ ಗಾಯಗೊಂಡಿದ್ದು, ಗಂಗಾವತಿಯ ಎಂಎಸಿಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಗಂಗಾವತಿ:

ತಾಲೂಕಿನ ಸಾಣಾಪುರದ ಕೆರೆಯ ಜಂಗ್ಲಿ ರಸ್ತೆಯ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಕುಳಿತಿದ್ದ ವಿದೇಶಿ ಮತ್ತು ಸ್ಥಳೀಯ ಪ್ರವಾಸಿಗರ ಮೇಲೆ ಮೂವರು ಅಪರಿಚಿತರು ಗುರುವಾರ ರಾತ್ರಿ ದಾಳಿ ನಡೆಸಿದ್ದು, ನಾಲ್ವರಿಗೆ ಗಾಯವಾಗಿದ್ದರೆ, ಓರ್ವ ವ್ಯಕ್ತಿ ನಾಪತ್ತೆಯಾಗಿದ್ದಾನೆ.

ಓರಿಸ್ಸಾ ಮೂಲದ ಬಿಬಾಸ್ ಎನ್ನುವರನ್ನು ಕಾಲುವೆಗೆ ತಳ್ಳಿದ್ದರಿಂದ ಆತ ನೀರು ಪಾಲಾಗಿದ್ದಾನೆ. ಅಮೆರಿಕದ ಡ್ಯಾನಿಯೇಲ್, ಇಸ್ರೇಲ್‍ನ ನಾಮಾ, ಮಹಾರಾಷ್ಟ್ರದ ಪಂಕಜ, ಆನೆಗೊಂದಿಯ ರೆಸಾರ್ಟ್ ಮಾಲೀಕಳಾದ ಅಂಬಿಕಾ ನಾಯ್ಕ್ ಗಾಯಗೊಂಡಿದ್ದು, ನಗರದ ಎಂಎಸಿಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಆನೆಗೊಂದಿ ಬಳಿ ಹಾರ್ಟ್ ಲೈನ್ ಹೋಂಸ್ಟೇನಲ್ಲಿ ಉಳಿದುಕೊಂಡಿದ್ದ ಪ್ರವಾಸಿಗರು, ಲಘು ಸಂಗೀತದೊಂದಿಗೆ ಗುರುವಾರ ಸಾಣಾಪುರದ ಕೆರೆಯ ಜಂಗ್ಲಿ ರಸ್ತೆಯ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಕುಳಿತಿದ್ದರು.

ಗೀಟಾರ್ ನುಡಿಸುತ್ತ ಕುಳಿತಿದ್ದ ಪ್ರವಾಸಿಗರ ಮೇಲೆ ಅಪರಿಚಿತರು ದಾಳಿ ನಡೆಸಿದ್ದು, ದೈಹಿಕ ಮತ್ತು ಲೈಂಗಿಕ ಹಲ್ಲೆ ನಡೆಸಿದ್ದಾರೆ. ಮಹಿಳೆಯರನ್ನು ರಕ್ಷಿಸಲು ಬಂದ ಪ್ರವಾಸಿಗರನ್ನು ಗುಂಪು ಎಡದಂಡೆ ಕಾಲುವೆಗೆ ತಳ್ಳಿದ್ದು, ಅದರಲ್ಲಿ ಓರಿಸ್ಸಾದ ಮೂಲದ ಬಿಬಾಸ್ ನಾಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ತೆರಳಿ, ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ಅಂಬ್ಯುಲೆನ್ಸ್ ಮೂಲಕ ಎಂಸಿಎಚ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಬಳ್ಳಾರಿ ವಲಯ ಐಜಿಪಿ ಬಿ.ಎಸ್. ಲೋಕೇಶಕುಮಾರ, ಎಸ್ಪಿ ಎಲ್. ರಾಮ ಅರಸಿದ್ಧಿ ಮತ್ತು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ನೇತೃತ್ವದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ನಾಪತ್ತೆಯಾದ ಬಿಬಾಸ್ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಶ್ವಾನ ದಳ ಆಗಮಿಸಿದ್ದು, ಮಹತ್ವದ ಸುಳಿವನ್ನು ಕಲೆ ಹಾಕಿದ್ದಾರೆ. ಎಸ್ಪಿ ಎಲ್. ರಾಮ ಅರಸಿದ್ಧಿ ಪ್ರತಿಕ್ರಿಯೆಸಿ, ಘಟನೆಯನ್ನು ಎಲ್ಲ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳನ್ನು ಶೀಘ್ರವೇ ಬಂದಿಸಲಾಗುವುದು ಎಂದು ಹೇಳಿದ್ದಾರೆ.

ಆನೆಗೊಂದಿ, ಸಾಣಾಪುರ ವ್ಯಾಪ್ತಿಯಲ್ಲಿ ರಾತ್ರಿ ಪ್ರವಾಸಿಗರ ಸಂಚಾರ ನಿಷೇಧಿಸಬೇಕಿದೆ. ಮೋಜು, ಮಸ್ತಿ ನೆಪದಲ್ಲಿ ತಡರಾತ್ರಿ ಪ್ರವಾಸಿಗರು ಅಲೆದಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಸ್ಥಳೀಯರು ಪೊಲೀಸರನ್ನು ಒತ್ತಾಯಿಸಿದ್ದಾರೆ.

Share this article